ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಿರಾ ತಾಲ್ಲೂಕಿನ ಹಲವರು ಹೋರಾಡಿದ್ದಾರೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ತಾವರೆಕೆರೆ ಗ್ರಾಮದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ
ಶಿರಾ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಿರಾ ತಾಲ್ಲೂಕಿನ ಮಾಲಿ ಮರಿಯಪ್ಪ, ಹೆಂಜಾರಪ್ಪ, ದಾಸಪ್ಪ, ತಾರೇಗೌಡರು ಹೀಗೆ ಅನೇಕ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಬ್ರಿಟೀಷ್ ಸರಕಾರದಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ನಾವೆಲ್ಲರೂ ಅವರ ತ್ಯಾಗವನ್ನು ಅರಿತುಕೊಳ್ಳಬೇಕಿದೆ. ಅವಿಸ್ಮರಣೀಯವಾಗಿ ಕಾಲ ಕಾಲಕ್ಕೂ ಅವರನ್ನು ಸ್ಮರಿಸಬೆಕಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು 75ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಂದಾಯ ಇಲಾಖೆ ವತಿಯಿಂದ ತಾಲ್ಲೂಕಿನ ತಾವರೆಕೆರೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ದೇಶ ಸ್ವಾತಂತ್ರö್ಯ ಪಡೆಯಲು ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಾಗಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲೆಮರೆ ಕಾಯಿಯಂತೆ ಹೋರಾಟ ಮಾಡಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅಂತಹವರನ್ನು ನಾವೆಲ್ಲರೂ ಸ್ಮರಣೆ ಮಾಡಬೇಕು. ಸುಮಾರು 6.5 ಲಕ್ಷ ಜನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕೆ ಜೀವ ತೆತ್ತಿದ್ದಾರೆ ಎಂಬ ಅಂಶ ಇತಿಹಾಸದಿಂದ ತಿಳಿದುಬರುತ್ತದೆ. ಅವರು ಜಗತ್ತಿನಲ್ಲಿ ದೇಶವನ್ನು ತಾಯಿಯ ಸ್ಥಾನದಲ್ಲಿ ಪೂಜಿಸುವ ಯಾವುದಾದರೂ ದೇಶ ಇದ್ದರೆ ಅದು ಭಾರತ ದೇಶ ಮಾತ್ರ. ಭಾರತವನ್ನು ಭಾರತ ಮಾತೆ ಎಂದು ಪೂಜಿಸುವ ದೇಶ ನಮ್ಮದು ಎಂದರು.
ತಹಶೀಲ್ದಾರ್ ಮಮತ ಅವರು ಮಾತನಾಡಿ ತಾವರೆಕೆರೆಯಲ್ಲಿ ನಡೆದ ಅರಣ್ಯ ಸತ್ಯಾಗ್ರಹ ಇಂದಿಗೂ ಚಿರಸ್ಮರಣೀಯವಾಗಿದೆ. ಮೈಸೂರು ಸರಕಾರ ಪಾನ ನಿಷೇಧವನ್ನು ಜಾರಿಗೆ ತರುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಾನವಿರೋಧವನ್ನು ಯಶಸ್ವಿಗೊಳಿಸಬೇಕಾದರೆ ಹೆಂಡವೇ ಉತ್ಪಾದನೆಯಾಗದಂತೆ ತಡೆಯಲು ಸೂಕ್ತ ಮಾರ್ಗವೆಂದು ನಿರ್ಧರಿಸಿ ಅಂದಿನ ನಾಯಕರು ಚಳುವಳಿ ಆರಂಭಿಸಿದರು. ಆ ಚಳುವಳಿಯೇ ಅರಣ್ಯ ಸತ್ಯಾಗ್ರಹ. ಇತಿಹಾಸದಲ್ಲಿ ಅತ್ಯಂತ ಮಹತ್ವದ ಚಳುವಳಿಯಾದ ಇದು ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆಯಿತು. ಈ ಚಳುವಳಿಯು 1939ರ ಸೆಪ್ಟೆಂಬರ್ 28ರಲ್ಲಿ ಶಿರಾ ತಾಲ್ಲೂಕಿನ ತಾವರೆಕೆರೆಯಲ್ಲಿ ಆರಂಭವಾಯಿತು ಎಂಬುದು ವಿಶೇಷ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಮಾಲಿಮರಿಯಪ್ಪ ಅವರ ನೇತೃತ್ವದಲ್ಲಿ ಯುವಕರೊಂದಿಗೆ ಹೆಂಡದ ಮೂಲವಾದ ಈಚಲು ಮರಗಳನ್ನು ಹಗಲು ರಾತ್ರಿಯೆನ್ನದೆ ಈಚಲು ಮರಗಳನ್ನು ಬುಡಸಮೇತ ಕಡಿದುರುಳಿಸುವ ಮೂಲಕ ಹೆಂಡವೇ ಉತ್ಪಾದನೆಯಾಗದಂತೆ ತಡೆಯುವ ಪ್ರಯತ್ನ ಮಾಡಿದ್ದರು. ಈ ರೀತಿಯ ಚಳುವಳಿ ಸ್ವಾತಂತ್ರ ಭಾರತದ ಇತಿಹಾಸದಲ್ಲಿ ತಾವರೆಕೆರೆ ಗ್ರಾಮ ಚಿರಸ್ಥಾಯಿಯಾಗಿ ಉಳಿಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಗ್ರಾಮ ಹಾಗೂ ಗ್ರಾಮದ ಹೋರಾಟಗಾರನ್ನು ಅಭಿಮಾನದಿಂದ ಸ್ಮರಿಸುವ ಉದ್ದೇಶದಿಂದ ತಾವರೆಕೆರೆ ಗ್ರಾಮದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾದ ಹಿರಿಯರನ್ನು ನೆನೆದು ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಶಿರಾ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಾರುತೇಶ್, ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಷ್ಮಾ ಯಶೋಧರ ಗೌಡ, ಉಪಾಧ್ಯಕ್ಷರು ನಿತ್ಯಾನಂದ, ಸದಸ್ಯರು ಶಿವು ಸ್ನೇಹಪ್ರಿಯ, ಸತ್ಯಭಾಮಾ, ರಾಜು, ರಾಮಕೃಷ್ಣಪ್ಪ, ಮದು ಯಾದವ್, ನಗರಸಭೆ ಅಧ್ಯಕ್ಷ ಅಂಜಿನಪ್ಪ, ನಾಗರತ್ನಮ್ಮ, ರಾಜಮ್ಮ, ಮುಖಂಡರಾದ ಶ್ರೀನಿವಾಸ್, ಮಾಲಿ ಭರತ್ ಸೇರಿದಂತೆ ಹಲವರು ಹಾಜರಿದ್ದರು.