ಶಿರಾದಲ್ಲಿ ಮೇ. 27 ಕ್ಕೆ ಸರ್ವಧರ್ಮ ಭೀಮೋತ್ಸವ ಕಾರ್ಯಕ್ರಮ

ಶಿರಾ : ಶಿರಾ ನಗರದಲ್ಲಿ ಮೇ. 27 ರ ಶುಕ್ರವಾರದಂದು ಹಲವು ಸಂಘಟನೆಗಳ ವತಿಯಿಂದ ಸರ್ವಧರ್ಮ ಭೀಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹಿರಿಯ ದಲಿತ ಮುಖಂಡ ಜೆ.ಎನ್.ರಾಜಸಿಂಹ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಶಿರಾ ನಗರದಲ್ಲಿ ಭೀಮೋತ್ಸವ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ತಾಲ್ಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಯೋಜಕ ಧರಣಿಕುಮಾರ್ ಮಾತನಾಡಿ ಮೇ. 27 ರಂದು ನಡೆಯುವ ಸರ್ವಧರ್ಮ ಭೀಮೋತ್ಸವ ಕಾರ್ಯಕ್ರಮವು ಒಂದು ವಿಶೇಷವಾದ ಕಾರ್ಯಕ್ರಮವಾಗಿದ್ದು, ಯಾವುದೇ ಧರ್ಮ, ಜಾತಿ ಪಕ್ಷಬೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಭೀಮೊತ್ಸವ ಆಚರಿಸಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ. ಆದ್ದರಿಂದ ತಾಲ್ಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಪಕ್ಷದ ಮುಖಂಡರು, ಎಲ್ಲಾ ಸಮುದಾಯದ ಮುಖಂಡರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.
27 ರಂದು ಬೆಳಗ್ಗೆ 9 ಗಂಟೆಗೆ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ಸಂಜೆ 6 ಗಂಟೆಗೆ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ರವಿಶಂಕರ್, ಎಸ್.ಎಲ್.ರಂಗನಾಥ್, ರವಿಕುಮಾರ್, ದಾಸಪ್ಪ, ಕೊಟ್ಟ ರಂಗಯ್ಯ, ನವೀನ್‌ಕುಮಾರ್, ನರಸಿಂಹಮೂರ್ತಿ, ರಾಜೇಂದ್ರ ಸಿಂಗ್, ಆನಂದ್ ಸೇರಿದಂತೆ ಹಲವರು ಹಾಜರಿದ್ದರು.