ತುಮಕೂರು: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಕುರುಬರೇ ಅಲ್ಲ, ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ, ಈಶ್ವರಪ್ಪ ಅವರು ಕುರುಬರು ಎಂದು ಹೇಳಲಿ ನೋಡೋಣ ಎಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೇ.28ರಂದು ನಡೆಯಲಿರುವ ಜಿಲ್ಲಾ ಕುರುಬರ ಜಾಗೃತಿ ಸಮಾವೇಶವನ್ನು ಕಾಂಗ್ರೇಸ್ಸಿಕರಣ ಮಾಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎನ್ನುತ್ತಾರೆಯೇ ಹೊರತು, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಲ್ಲ ಎಂದರು.
ಹಿಂದುಳಿದ ವರ್ಗಗಳಿಗೆ ನೀಡುತ್ತಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಕಡಿತಗೊಳಿಸಿದೆ, ಕುರುಬ ಸಮಾಜದಲ್ಲಿ ಇನ್ನು ಕೆಲವರಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಅರಿವಿಲ್ಲ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಸಮುದಾಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ, ಇದು ರಾಜಕೀಯ ಕಾರ್ಯಕ್ರಮವಲ್ಲ ಸಮುದಾಯದ ಜಾಗೃತಿಯೇ ಮುಖ್ಯ ಉದ್ದೇಶವೆಂದರು.
ಪ್ರವರ್ಗ-2ರಲ್ಲಿ ಕುರುಬ ಸಮುದಾಯಕ್ಕೆ ಸಿಗುತ್ತಿದ್ದ ಮೀಸಲಾತಿಯನ್ನು ಕಬಳಿಸಲಾಗುತ್ತಿದೆ, ಹಿಂದುಳಿದ ವರ್ಗಗಳಿಗೆ ಸಿಗುತ್ತಿದ್ದ ರಾಜಕೀಯ ಮೀಸಲಾತಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದ ಅತಂತ್ರಕ್ಕೆ ಸಿಲುಕಿದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 162 ಕೋಟಿ ಅನುದಾನ ನೀಡಿ ತಯಾರಿರುವ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.
ಹೈಕೋರ್ಟ್ ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಶ ನೀಡಿದೆ ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೇ ಸಾಮಾಜಿಕ ನ್ಯಾಯವಿಲ್ಲದಂತಾಗಿದೆ, ಮಧ್ಯಪ್ರದೇಶ ಸರ್ಕಾರದಂತೆಯೇ ರಾಜ್ಯ ಸರ್ಕಾರವೂ ಸಹ ಕಾಂತರಾಜು ಆಯೋಗದ ವರದಿಯನ್ನು ಸಲ್ಲಿಸಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗಂಗಾ ಕಲ್ಯಾಣ ಯೋಜನೆ ದೇವರಾಜ ಅರಸು ನಿಗಮದಿಂದ ಸಿಗುತ್ತಿಲ್ಲ. ಸ್ವಯಂ ಉದ್ಯೋಗಕ್ಕಾಗಿ ನೀಡುತ್ತಿದ್ದ ಸಾಲ ಸೌಲಭ್ಯ ನೀಡುತ್ತಿಲ್ಲ, ಬಿಜೆಪಿ ಸರ್ಕಾರ ಹಿಂದುಳಿದಿರುವ ಒಬಿಸಿ ವರ್ಗವನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಹಿಂದುಳಿದ ವರ್ಗಗಳ 205 ಜಾತಿಗೆ 100 ಕೋಟಿ ಅನುದಾನ ನೀಡಿದರೆ, ಪ್ರಬಲ ಜಾತಿಗಳಿಗೆ 500 ಕೋಟಿ ಅನುದಾನವನ್ನು ಒದಗಿಸಿದೆ ಅನ್ಯಾಯ ಮಾಡಿದ್ದು, ನಮ್ಮ ಹಕ್ಕು ಪಡೆಯಲು ಸಂಘಟಿತರಾಗುವುದು ಅವಶ್ಯಕವಾಗಿದ್ದು, ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಕುರುಬರ ಸಂಘದ ಪುಟ್ಟರಾಜ, ಜಿ.ಪಂ ಮಾಜಿ ಸದಸ್ಯ ಎಂ.ನಾರಾಯಣ್, ಪಾಲಿಕೆ ಮಾಜಿ ಸದಸ್ಯ ಮಹೇಶ. ದೊಡ್ಡ ಯ್ಯ, ಕೃಷ್ಣಮೂರ್ತಿ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಂಕರ್, ರಾಜಣ್ಣ, ಭಾಗ್ಯಮ್ಮ ಸಾಂಭಶಿವರೆಡ್ಡಿ,ಸೋಮಣ್ಣ, ಗುರು, ಎನ್.ಸಿ.ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪತ್ರಕರ್ತರ ಮುಂದೆಯೇ ಕಿತ್ತಾಟ ಕೈಕೈಮಿಲಾಯಿಸುವ ಹಂತಕ್ಕೆ :-
ಜಿಲ್ಲಾ ಕುರುಬರ ಜಾಗೃತಿ ಸಮಾವೇಶದ ನೇತೃತ್ವವಹಿಸಿರುವ ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರನ್ನು ಬಿಟ್ಟು ಪತ್ರಿಕಾಗೋಷ್ಠಿ ನಡೆಸಿದ ಬಗ್ಗೆ ಸಮುದಾಯದ ಮುಖಂಡರ ನಡುವೆಯೇ ಕಿತ್ತಾಟ ನಡೆದು ಕೈಕೈ ಮಿಸಲಾಯಿಸುವ ಹಂತಕ್ಕೆ ತಲುಪಿತು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಂಕರ್ ಹಾಗೂ ರವೀಶ್ ನಡುವೆ ಏಕ ವಚನ ಪ್ರಯೋಗ, ಅವಾಚ್ಯ ಪದಗಳ ಬಳಕೆ ಹೆಚ್ಚಾಗಿದ್ದಲ್ಲದೇ ಹೊಡೆದಾಡುವ ಹಂತಕ್ಕೆ ಹೋದಾಗ ಸಮುದಾಯದ ಮುಖಂಡರು ಸಮಾಧಾನ ಪಡಿಸಿದರು.
ಜಯಕರ್ನಾಟಕ ಸಂಘಟನೆಯ ಸಿದ್ದರಾಮಯ್ಯ ಅವರನ್ನು ಕರೆದು ಯಾರದೋ ಮನೆಯಲ್ಲಿ ಕುಳಿಸುತ್ತೀರಾ? ಸಿದ್ದರಾಮಯ್ಯ ಯಾರ ಮನೆಯ ಸ್ವತ್ತು ಅಲ್ಲ, ಸಮುದಾಯದ ಸಮಾವೇಶ ನಡೆಸುವಾಗ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಲಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಲಿ ಇಲ್ಲದೇ ಸುದ್ದಿಗೋಷ್ಠಿ ನಡೆಸಿದರೆ, ಸಮುದಾಯದಲ್ಲಿ ಯಾವ ಸಂದೇಶ ಹೋಗುತ್ತದೇ ಎಂದು ಪ್ರಶ್ನಿಸಿದರು.