ಪಟ್ಟಣದ 23 ವಾರ್ಡ್ ಗಳ ಅಭಿವೃದ್ದಿಗೆ ಅಧಿಕಾರಿಗಳು ಸ್ಪಂದಿಸಿ : ಶಾಸಕ ವೆಂಕಟರಮಣಪ್ಪ
ಪಾವಗಡ: ಪುರಸಭೆ ಅಧಿಕಾರಿಗಳು ಗುಟ್ಟಹಳ್ಳಿ, ಕಣ್ಮನರ‍್ಲು, ಆಫ್‌ಬಂಡೆ ಬಡಾವಣೆಗಳಲ್ಲಿ ಜನರ ಅನುಕೂಲಕ್ಕಾಗಿ ಹೊಸ ಪೈಪ್‌ಲೈನ್‌ಗಳನ್ನು ಕೂಡಲೆ ನಿರ್ಮಿಸಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,
ಪಟ್ಟಣದಲ್ಲಿರುವ ಒಟ್ಟು ಪಾರ್ಕ್ಗಳು ಹಾಗೂ ಅಗಸರಕುಂಟೆ ಕೆರೆ ಸರ್ವೆ ಮಾಡಿ ಒತ್ತುವರಿಯಾಗಿರುವ ಸ್ಥಳಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ಪಟ್ಟಣದಲ್ಲಿ ಅನಧಿಕೃತವಾಗಿರುವ ಅಂಗಡಿಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪುರಸಭೆ ವ್ಯಾಪ್ತಿಯಲ್ಲಿರುವ ಶಿರಾ ರಸ್ತೆ, ಹಿಂದೂಪುರ ರಸ್ತೆ, ಚಳ್ಳಕೆರೆ ಕ್ರಾಸ್ ಸೇರಿದಂತೆ ಪೆನುಗೊಂಡ ಮುಖ್ಯ ರಸ್ತೆಗಳ ಮಾರ್ಗದಲ್ಲಿರುವ ಅಂಗಡಿಗಳಿಗೆ ಪರವಾನಿಗೆ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಿತ್ತಿರುವುದರಿಂದ ನೆರೆಯ ರೊಪ್ಪಾ ಗ್ರಾ.ಪಂ ಅಧಿಕಾರಿಗಳು ಪರವಾನಿಗೆ ನೀಡುತ್ತಿರುವುದು ಬೆಳಕಿಗೆ ಬಂದಿದ್ದು ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಎಚ್ಚರಿಸಿದರು.
ಪಟ್ಟಣದಲ್ಲಿರುವ ಬಹುತೇಕ ಪಾರ್ಕ್ ಜಾಗಗಳೇ ಕಣ್ಮರೆಯಾಗಿದ್ದು ಅಧಿಕಾರಿಗಳು ಅವುಗಳ ಪತ್ತೆಗೆ ಕಾರ್ಯಪ್ರವೃತ್ತರಾಗಬೇಕು ಹಾಗೂ ಪಟ್ಟಣದಲ್ಲಿ ಸುಸಜ್ಜಿತವಾದ ಒಂದು ಪಾರ್ಕ್ ನಿರ್ಮಿಸಲು ಹಣ ಮೀಸಲಿಟ್ಟು ಕಾಮಗಾರಿ ಕೈಗೊಳ್ಳಬೇಕು ಎಂದರು.
ಪುರಸಭೆ ಸದಸ್ಯ ನಾಗಭೂಷಣರೆಡ್ಡಿ ಮಾತನಾಡಿ ಪುರಸಭೆಯ ವಾರ್ಡ್ಗಳ ವ್ಯಾಪ್ತಿಯಲ್ಲಿ ವಾಸಿಸುವ ನಾಗರೀಕರಿಗೆ ಖಾತೆ ಮತ್ತು ಪಟ್ಟಣದ ವ್ಯಾಪಾರಿಗಳ ಅಂಗಡಿಗಳಿಗೆ ಪರವಾನಿಗೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದರೆ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ ನಮ್ಮ ಪುರಸಭೆಯ ಆದಾಯವೂ ಗಣನೀಯವಾಗಿ ತಗ್ಗುತ್ತದೆ, ಆದ್ದರಿಂದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸದಸ್ಯೆ ಉಪಾದೇವಿ ಮಾತನಾಡಿ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ವಾಟರ್ ಮ್ಯಾನ್ ಪೋನ್ ಮಾಡಿದರೂ ಸ್ಪಂದಿಸದಿರುವುದು ವಿಪರ್ಯಾಸವಾಗಿದೆ, ಈ ಚಾಳಿ ಮುಂದುವರೆದರೆ ಸಾರ್ವಜನಿಕರೊಂದಿಗೆ ಸೇರಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾದ್ಯಕ್ಷೆ ಜಾಹ್ನವಿ, ಮುಖ್ಯಾಧಿಕಾರಿ ಅರ್ಚನಾ, ಸದಸ್ಯರಾದ ರಾಜೇಶ್, ಸುದೇಶ್ ಬಾಬು, ನಾಗಭೂಷಣರೆಡ್ಡಿ, ಮಹಮ್ಮದ್ ಇಮ್ರಾನ್, ವಿಜಯಕುಮಾರ್, ಧನಲಕ್ಷಿö್ಮ, ಸುಜಾತ, ಸೇರಿದಂತೆ ನಾಮಿನಿ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿ ಇದ್ದರು.