ಸರಕಾರಗಳು ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡಲಿ : ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ತುರುವೇಕೆರೆ : ರೈತ ಬೆಳೆದ ಬೆಳೆಗಳಿಗೆ ಸೂಕ್ತ ದರ ನಿಗದಿಪಡಿಸುವತ್ತ ಸರಕಾರಗಳು ಚಿತ್ತ ಹರಿಸುವ ಮೂಲಕ ಅನ್ನದಾತನ ಹಿತ ಕಾಯುವಂತಾಗಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾಯಸಂದ್ರ ಕಲ್ಪತರು ಆಶ್ರಮದ ಆವರಣದಲ್ಲಿ ಶ್ರೀ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚುಂಚಾದ್ರಿ ರೈತ ಸಂತೆ, ಗ್ರಂಥಾಲಯ, ಶ್ರೀಕುಟೀರದ ಉದ್ಘಾಟನೆ ಹಾಗೂ ಚುಂಚಾದ್ರಿ ಸಮುದಾಯ ಭವನ ಶಂಕುಸ್ಥಾಪನೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರೈತ ಕೇಂದ್ರಿತವಾದ ಆದಿಚುಂಚನಗಿರಿ ಮಠವು ರೈತರ ಸ್ವಾಭಿಮಾನಿ ಬದುಕಿಗೆ ಪೂರಕವಾದ ಯೋಜನೆ ರೂಪಿಸುವ ಉದ್ದೇಶ ಹೊಂದಿದೆ. ಮಾಯಸಂದ್ರ ಕಲ್ಪತರು ಆಶ್ರಮದ ಬಳಿ ಚುಂಚಾದ್ರಿ ರೈತ ಸಂತೆಯನ್ನು ನಡೆಸುವ ಸಲುವಾಗಿ ಪೂರಕ ತಯಾರಿ ಕೈಗೊಂಡಿದೆ.ರೈತ ತಾನು ಬೆಳೆದ ಬೆಳೆಗೆ ತಾನೇ ದರ ನಿಗದಿಪಡಿಸಿ ತನ್ನ ಮನೆ ಬಾಗಿಲಿನಲ್ಲೇ ನೇರ ಗ್ರಾಹಕನಿಗೆ ಮಾರುವ ಸ್ಥಿತಿ ನಿರ್ಮಾಣವಾಗಬೇಕಿದೆ. ಹವಾನಿಯಂತ್ರಿತ ಕೊಠಡಿಯೊಳಗೆ ಪಾದರಕ್ಷೆಗಳನ್ನು ಮಾರಾಟವಾಗುತ್ತಿದ್ದು, ರೈತ ಬೆಳೆದ ಬೆಳೆ ಬೀದಿಬದಿಯಲ್ಲಿ ಮಾರಾಟವಾಗುತ್ತಿದೆ ಎಂದು ವಿಷಾದಿಸಿದ ಅವರು ಕೃಷಿ ಉಳಿದರೇ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ ನಾಡನ್ನು ಶೈಕ್ಷಣಿಕವಾಗಿ ಅಭಿವೃದ್ದಿಪಡಿಸುವಲ್ಲಿ ಮಠಗಳು ನೀಡಿದ ಕೊಡುಗೆ ಅನನ್ಯವಾದುದು, ಮನೆ ಮತ್ತು ಮಠಗಳನ್ನು ಪಿತ್ರಾರ್ಜಿ ಆಸ್ತಿಗಳಂತೆ ಪೋಷಿಸಬೇಕಾದ ಅಗತ್ಯವಿದೆ. ಸಿದ್ದಾಂತಗಳ ಬಗ್ಗೆ ವಿವರಣೆ ನೀಡುವುದಕ್ಕಿಂತ ಆಚರಣೆ ತರುವ ಮೂಲಕ ನೈತಿಕ ಮೌಲ್ಯದ ತಳಹದಿಯ ಮೇಲೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಪಡೆಯುವುದಕ್ಕಿಂತ ಸಂಸ್ಕಾರವಂತರಾಗಲು ಪಡೆಯುವುದೇ ಅತ್ಯಂತ ಶ್ರೇಷ್ಟ ಎಂದರು.
ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಮಾತನಾಡಿ ಜ್ಞಾನದ ಜೊತೆಗೆ ನೈತಿಕ ಶಿಕ್ಷಣ ನೀಡುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ. ತತ್ವಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡುವ ಪ್ರಯತ್ನದ ಹಾದಿಯಲ್ಲಿರುವ ಶ್ರೀ ಆದಿಚುಂಚನಗಿರಿ ಮಠದ ಕಾರ್ಯ ಅನುಕರಣಿಯ, ರೈತರು ಹಾಗೂ ಗ್ರಾಹಕರ ಸಂಬಂದವನ್ನು ಬೆಸೆಯುವಲ್ಲಿ ರೈತ ಸಂತೆಗಳ ಪಾತ್ರ ಬಹಳಷ್ಟಿದೆ. ಈ ನಿಟ್ಟಿನಲ್ಲಿ ಶ್ರೀ ಮಠವು ಚುಂಚಾದ್ರಿ ರೈತ ಸಂತೆಯನ್ನು ಆರಂಭಿಸುತ್ತಿರುವುದು ರೈತಾಪಿಗಳಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಮಸಾಲಜಯರಾಮ್ ಮಾತನಾಡಿ ದೇಶ ಕಾಯುವ ಸೈನಿಕ ಬಂದೂಕು ಮರೆತರೇ ಅನ್ನ ನೀಡುವ ರೈತ ನೇಗಿಲನ್ನು ಮರೆತರೇ ದೇಶದ ಸ್ಥಿತಿಯನ್ನು ಊಹಿಸಲು ಅಸಾಧ್ಯ. ದೇಶದ ಉಳಿವಿಗಾಗಿ ಹಾಗೂ ಸ್ವಾವಲಂಬಿ ಬದುಕಿಗಾಗಿ ಯುವ ಪೀಳಿಗೆಗೆ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಅಗತ್ಯವಿದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದ ಅವರು ಚುಂಚಾದ್ರಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದರು.
ರೈತ ಸಂಘದ ರಾಜ್ಯ ವರಿಷ್ಟ ಕೆ.ಟಿ.ಗಂಗಾಧರ್ ಮಾತನಾಡಿ ಕೃಷಿ ಪ್ರಧಾನ ರಾಷ್ಟçವಾದ ಭಾರತದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ರೈತ ತಾನು ಬೆಳೆದ ಬೆಳೆಗೆ ದರ ನಿಗದಿಪಡಿಸಲಾಗದ ಸ್ಥಿತಿಯಲ್ಲಿರುವುದು ಶೋಚನೀಯ, ರೈತನ ಹಿತ ಕಾಯುವ ನಿಟ್ಟಿನಲ್ಲಿ ಚುಂಚಾದ್ರಿ ರೈತ ಸಂತೆಗೆ ಚಾಲನೆ ನೀಡುತ್ತಿರುವುದು ಸಂತೋಷದ ಸಂಗತಿ. ಅಂದು ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು 5 ಕೋಟಿ ಸಸಿಗಳನ್ನು ನೆಟ್ಟ ಫಲವಾಗಿ ಬಯಲು ಸೀಮೆ ಹಸಿರಿನಿಂದ ನಳನಳಿಸುತ್ತಿದೆ ಎಂದರು.
ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಚೈತನ್ಯನಾಥಸ್ವಾಮಿಜಿ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಪ್ರೋ.ಪುಟ್ಟರಂಗಪ್ಪ, ಚೌದ್ರಿರಂಗಪ್ಪ, ಎನ್.ಆರ್.ಜಯರಾಮ್, ಕೊಂಡಜ್ಜಿವಿಶ್ವನಾಥ್,ಸುಬ್ರಹ್ಮಣ್ಯಶ್ರೀಕಂಠೇಗೌಡ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಸೇರಿದಂತೆ ಅನೇಕರು ಇದ್ದರು.