ಮಹಿಳೆಯರು ಪುರುಷರಷ್ಟೇ ಸಮಾನರು : ಸ್ತ್ರೀರೋಗ ತಜ್ಞೆ ಡಾ.ಮಾಲಿನಿ
ಶಿರಾದಲ್ಲಿ ರಾಜ್ಯಮಟ್ಟದ ಮಹಿಳಾ ಬಂಧುತ್ವ ಸಮಾವೇಶ
ಶಿರಾ : ಮಹಿಳೆಯರು ಪುರುಷರಷ್ಟೇ ಸಮಾನರು. ಹೆಣ್ಣುಮಕ್ಕಳು ಎಂಬ ಕೀಳರಿಮೆಯನ್ನು ತೊರೆದು ಸಮಾಜದಲ್ಲಿ ಉನ್ನತ ಸಾಧನೆ ಮಾಡಿರುವ ಮಹಿಳೆಯರನ್ನು ಸ್ಪೂರ್ತಿಯನ್ನಾಗಿಟ್ಟುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಮಾಲಿನಿ ಹೇಳಿದರು.
ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಹಿಳಾ ಬಂಧುತ್ವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಅವರ ಹೋರಾಟಕ್ಕೆ ಪ್ರತಿಯೊಬ್ಬರು ಕೈಜೋಡಿಸುವ ಕೆಲಸ ಮಾಡಬೇಕು. ಪ್ರಸ್ತುತ ಸಮಯದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಚಿಂತಕಿ ಡಾ.ಲೀಲಾ ಸಂಪಿಗೆ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲಾಗಿದೆ ಆದರೆ ಬದುಕನ್ನು ಹಸನು ಮಾಡುವ ಕಾನೂನುಗಳನ್ನು ರೂಪಿಸುವ ಶಾಸನ ಸಭೆಗಳಾದ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇ.33 ರಷ್ಟು ಮೀಸಲಾತಿ ನೀಡಬೇಕು. ಇದನ್ನು ಜಾರಿಗೊಳಿಸುವ ಮನಸ್ಥಿತಿ ಎಷ್ಟು ಜನರಿಗೆ ಇದೆ. ನಮ್ಮಿಂದ ಆಯ್ಕೆಯಾದ ಮಹಿಳೆಯರು ಸಹ ಈ ಬಗ್ಗೆ ಚಕಾರ ಎತ್ತದಿರುವುದು ದುರಂತವಾಗಿದೆ ಈ ಬಗ್ಗೆ ನಾವು ಜಾಗೃತರಾಗಬೇಕು ಎಂದರು.
ವಿಷಯ ಮಂಡನೆ ಮಾಡಿ ಮಾತನಾಡಿದ ಜನವಾಹಿನಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಪಿ.ಗೀತಾ ಮಹಿಳಾ ಮೀಸಲಾತಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೋರಾಟ ನಡೆಸಿದರು. ಮೀಸಲಾತಿ ದೊರಕಿಸಿಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಪುಟಕ್ಕೆ ರಾಜೀನಾಮೆ ನೀಡಿ ಹೊರಬಂದರು. ಆದರೆ ಇಂದಿನ ರಾಜಕಾರಣಿಗಳು ಮಹಿಳೆಯರ ಬಗ್ಗೆ ಮಾತನಾಡುತ್ತಾರೆ ಮೀಸಲಾತಿ ದೊರೆಯದಿದ್ದರೆ ಸಂಪುಟಕ್ಕೆ ರಾಜೀನಾಮೆ ನೀಡುವ ತಾಕತ್ತು ಎಷ್ಟು ಜನ ರಾಜಕಾರಣಿಗಳಿಗೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿಯತ್ರಿ ಡಾ.ಕೆ.ಷರೀಫಾ ಸ್ವಾತಂತ್ರ್ಯ ಬಂದು ಇಷ್ಟು ದಿನಗಳು ಕಳೆದರು ಸಹ ಮಹಿಳಾ ಮೀಸಲಾತಿ ಮತ್ತು ಸಬಲೀಕರಣಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯವಾಗಿದೆ. ಮಾನವೀಯತೆಯೇ ಧರ್ಮ, ಸಂವಿಧಾನವೇ ನಮ್ಮ ಗ್ರಂಥ ಎಂದು ನಂಬಿರುವ ಮಾನವ ಬಂಧುತ್ವ ವೇದಿಕೆ ಹೋರಾಟಕ್ಕೆ ವೇದಿಕೆ ನಿರ್ಮಿಸಿಕೊಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿಕುಮಾರ್, ತಾಲ್ಲೂಕು ಸಂಚಾಲಕ ಎಸ್.ರಂಗರಾಜು, ಮಹಿಳಾ ಕಾರ್ಯಕರ್ತರಾದ ಶಿವಮ್ಮ, ರೇಖಾ ರಾಘವೇಂದ್ರ, ವಿಜಯಲಕ್ಷಿö್ಮ, ಕೌಸಲ್ಯ, ಹೇಮಾ, ಶಕುಂತಲಮ್ಮ ಸೇರಿದಂತೆ ಹಲವರು ಹಾಜರಿದ್ದರು.