ತುಮಕೂರು : ಪಾವಗಡ ತಾಲೂಕು ಪಳವಳ್ಳಿ ಕಟ್ಟೆ ಕೆರೆಯ ಬಳಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಜಿಲ್ಲಾ ಶಸ್ತçಚಿಕಿತ್ಸಕ ಡಾ. ಟಿ.ಎ. ವೀರಭದ್ರಯ್ಯ ಅವರಿಗೆ ಸೂಚನೆ ನೀಡಿದರು.
ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ 19 ಮಂದಿಯ ಆರೋಗ್ಯ ವಿಚಾರಿಸಿ ಸಮಾಧಾನ ಹೇಳಿದ ನಂತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸಂಭವಿಸಿದ ಬಸ್ ಅಪಘಾತದಲ್ಲಿ ಈವರೆಗೆ ಮರಣ ಹೊಂದಿದ 6 ಮಂದಿ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ತಿಳಿಸಿದರಲ್ಲದೆ ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಸಹ ಸರ್ಕಾರದಿಂದಲೇ ಭರಿಸಲಾಗುವುದು. ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ ಔಷಧಿಗಾಗಿ ಹೊರಗಡೆ ಚೀಟಿ ಬರೆದುಕೊಡದೆ ಜಿಲ್ಲಾಸ್ಪತ್ರೆಯಲ್ಲಿಯೇ ಒದಗಿಸಬೇಕು ಹಾಗೂ ಜಿಲ್ಲಾಸ್ಪತ್ರೆ ವತಿಯಿಂದಲೇ ಊಟೋಪಹಾರದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಅಪಘಾತದಲ್ಲಿ ಮರಣ ಹೊಂದಿದವರ ಜೀವ ಮರಳಿ ತರಲಾಗುವುದಿಲ್ಲ. ಆದರೆ ಮತ್ತೊಮ್ಮೆ ಇಂತಹ ಘಟನೆಗಳು ಮುಂದೆಂದೂ ಮರುಕಳಿಸದಂತೆ ಸಾರಿಗೆ, ರಾಜ್ಯ ರಸ್ತೆ ಸಾರಿಗೆ ನಿಗಮ, ಪೊಲೀಸ್ ಇಲಾಖೆಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಖಾಸಗಿ ಸಾರಿಗೆಗಳಿಂದ ದೊಡ್ಡ ಲಾಭಿಯೇ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು/ನೌಕರರು ಕೆಲಸಕ್ಕೆ ಹೊರಡುವ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಬೇಕು. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಪರವಾನಗಿಯಿಲ್ಲದ ಬಸ್/ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅನುಭವಿ ಮತ್ತು ಪರವಾನಗಿ ಹೊಂದಿದ ಚಾಲಕರಿಗೆ ಹಾಗೂ ಸೂಕ್ತ ದಾಖಲೆಗಳನ್ನು ಹೊಂದಿದ ವಾಹನಗಳ ಸಂಚಾರಕ್ಕೆ ಅನುಮತಿಸಬೇಕು. ಪೊಲೀಸ್ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಕಡ್ಡಾಯವಾಗಿ ಚಾಲನಾ ಪರವಾನಗಿ ಸೇರಿದಂತೆ ವಾಹನ ದಾಖಲೆಗಳ ತಪಾಸಣೆ ಮಾಡಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಹಾಗೂ ಮಧುಗಿರಿ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕ ಅವರಿಗೆ ಸೂಚಿಸಿದರು.
ಅಪಘಾತ ಪ್ರಕರಣಗಳು ಹೆಚ್ಚಾಗಿ ಸಂಭವಿಸುವ ಜಾಗಗಳನ್ನು ಗುರುತಿಸಿ ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದಾಗ ಉತ್ತರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಹೆಚ್ಚು ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದ ಗುಬ್ಬಿ ಮತ್ತು ಶಿರಾ ತಾಲೂಕಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಪ್ರಕರಣಗಳ ಸಂಖ್ಯೆ ತಗ್ಗಿದ್ದು, ಪಾವಗಡ ಮತ್ತು ಮಧುಗಿರಿ ತಾಲೂಕಿನಲ್ಲಿಯೂ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಶನಿವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಪಘಾತ ಸ್ಥಳಕ್ಕೆ ಸಕಾಲಕ್ಕೆ ತೆರಳಿ ಗಾಯಳುಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲು ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳ ಕಾರ್ಯವನ್ನು ಶ್ಲಾಘಿಸಿದರು.
ಸಚಿವರು ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಂದ ಅಪಘಾತದ ಸಂಪೂರ್ಣ ವಿವರಣೆ ಪಡೆದರು.
ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ತಹಶೀಲ್ದಾರ್ ಮೋಹನ್‌ಕುಮಾರ್, ಮತ್ತಿತರರು ಹಾಜರಿದ್ದರು.