ತಾಲೂಕು ಕಚೇರಿ,ಅಂಗನವಾಡಿ ಕೇಂದ್ರ ಹಾಗೂ ಪೌಷ್ಟಿಕ ಆಹಾರ ಉತ್ಪಾದನಾ ಘಟಕಗಳಿಗೆ ನ್ಯಾ.ರಾಘವೇಂದ್ರಶೆಟ್ಟಿಗಾರ್ ದಿಡೀರ್ ಭೇಟಿ
ತುರುವೇಕೆರೆ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯಾಧೀಶರಾದ ಶ್ರೀ ರಾಘವೇಂದ್ರಶೆಟ್ಟಿಗಾರ್‌ರವರು ತುರುವೇಕೆರೆ ಪಟ್ಟಣದ ತಾಲೂಕು ಕಚೇರಿ, ಅಂಗನವಾಡಿ ಕೇಂದ್ರ ಹಾಗೂ ಪೌಷ್ಟಿಕ ಆಹಾರ ಉತ್ಪಾದನಾ ಘಟಕಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶ್ವ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಮನವಿ ಮೇರೆಗೆ ತಾಲೂಕಿಗೆ ಬೇಟಿ ನೀಡಿದ ಹಿರಿಯ ನ್ಯಾಯಾಧೀಶರಾದ ಶ್ರೀ ರಾಘವೇಂದ್ರಶೆಟ್ಟಿಗಾರ್‌ರವರು ತಾಲೂಕು ಕಚೇರಿ, ಅಂಗನವಾಡಿ ಕೇಂದ್ರ, ಹಾಗೂ ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಖುದ್ದು ಭೆಟಿ ನೀಡಿ ಅಲ್ಲಿನ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.
ಕಂದಾಯ ಇಲಾಖೆಗೆ ಬೇಟಿ ನೀಡಿದ ಅಲ್ಲಿನ ಸಿಬ್ಬಂದಿಗಳಿಂದ ಇಲಾಖಾ ಮಾಹಿತಿ ಪಡೆದರು. ಸಕಾಲ ಯೋಜನೆ, ಸಾಮಾಜಿಕ ಭದ್ರತಾ ಯೋಜನೆ ಕುರಿತಂತೆ ಶಿರಸ್ತೇದಾರ್ ಸುನಿಲ್‌ಕುಮಾರ್ ರವರಿಂದ ಮಾಹಿತಿ ಪಡೆದರು. ಕಚೇರಿಗೆ ಬರುವ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳು ಕೊರತೆಯಾಗದಂತೆ ನಿಗಾವಹಿಸುವಂತೆ ಸಲಹೆ ನೀಡಿದರು. ಕಚೇರಿ ಆವರಣದಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿ ಕಚೇರಿಗೆ ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಆನಂತರ ಭೂಮಾಪನ ಇಲಾಖೆಗೆ ಬೇಟಿ ನೀಡಿ ತಮ್ಮ ಇಲಾಖಾ ಕೆಲಸ ಕಾರ್ಯಗಳಲ್ಲಿ ದಕ್ಷತೆ ತೋರುವಂತೆ ಅಲ್ಲಿನ ಸಿಬ್ಬಂದಿಗೆ ತಿಳಿಸಿದರು.
ಪಟ್ಟಣದ ಸುಬ್ರಹ್ಮಣ್ಯ ನಗರದ ಅಂಗನವಾಡಿ ಕೇಂದ್ರವೊಂದಕ್ಕೆ ಬೇಟಿ ನೀಡಿ ಅಲ್ಲಿನ ಪುಟಾಣಿ ಮಕ್ಕಳನ್ನು ಅಕ್ಕರೆಯಿಂದ ಮಾತನಾಡಿಸಿದರು. ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು ಅತ್ಯಗತ್ಯ. ಪಟ್ಟಣದಲ್ಲಿ 13 ಅಂಗನವಾಡಿ ಕಟ್ಟಡ ನಿರ್ಮಾಣವನ್ನು ತ್ವರಿತವಾಗಿ ಕೈಗೊಳ್ಳಲು ಸೂಚಿಸಿದರು. ಮಕ್ಕಳ ಸ್ನೇಹಿಯಾಗಿ ನಿರ್ಮಿಸುವಂತೆ ಸಲಹೆ ನೀಡಿದರು. ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಬೇಟಿ ನೀಡಿ ಮಕ್ಕಳು ಹಾಗೂ ಗರ್ಭಿಣಿಯವರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಈ ವೇಳೆ ವಿಶ್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್, ಕಂದಾಯ ಇಲಾಖಾ ಶಿರಸ್ತೇದಾರ್ ಸುನಿಲ್‌ಕುಮಾರ್, ಎ.ಸಿ.ಡಿ.ಪಿ.ಓ. ಅರುಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಇದ್ದರು.