ಶಿರಾ : ರೈತರು ಕೃಷಿಯ ಜೊತೆಗೆ ಉಪಕಸುಬಾಗಿ ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಅವರು ಹೇಳಿದರು.
ಅವರು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶಿರಾ ನಗರದ ಚಂಗಾವರ ರಸ್ತೆಯ ಶೀಥಲಕೇಂದ್ರದ ಆವರಣದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನಂದಿನಿ ಕ್ಷೀರ ಭವನ ಹಾಗೂ ವಿವಿಧ ರೈತಪರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಇಡೀ ವಿಶ್ವದಲ್ಲಿಯೇ ದೇಶದ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಮಾನ್ಯತೆ ಇದೆ. ಹೈನುಗಾರಿಕೆ ಉತ್ತೇಜನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾಗಳು ಸಹ ಅನುದಾನ ನೀಡುತ್ತಿದ್ದು, ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ಅಗತ್ಯ ಸಾವಯವ ಗೊಬ್ಬರ ಪಡೆದು ಕೃಷಿಯಲ್ಲೂ ಸ್ವಾವಲಂಬನೆ ಸಾಧಿಸಬಹುದು ಎಂದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಮಾತನಾಡಿ ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರವಾಗಿತ್ತು. ಎಲ್ಲ ಸಹಕಾರಿ ಆಧಾರದ ಮೇಲೆ ನಡೆಸಲಾಗುತ್ತಿತ್ತು. ಗ್ರಾಮಗಳಲ್ಲಿ ಎಲ್ಲರೂ ಒಗ್ಗೂಡಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಸಮಾಜದ ಎಲ್ಲರೂ ಸುಖವಾಗಿರಬೇಕೆಂದು ಯೋಚನೆ ಮಾಡುತ್ತಿದ್ದರು. ಕೆರೆ ಕಟ್ಟೆಗಳನ್ನು ಎಲ್ಲರೂ ಒಟ್ಟಿಗೆ ಸೇರಿ ನಿರ್ಮಿಸುತ್ತಿದ್ದಾರೆ. ಅದರ ಆಧಾರದ ಮೇಲೆ ನಡೆದುಕೊಂಡು ಬಂದಿದೆ. ಸರಕಾರಗಳು ಸಹ ಉತ್ತಮ ಸಹಕಾರ ನೀಡುತ್ತಿವೆ ಎಂದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಅವರು ಮಾತನಾಡಿ ತುಮಕೂರು ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಉತ್ತಮ ದರ ಸಿಗಬೇಕು ಎಂಬ ಉದ್ದೇಶದಿಂದ ತುಮಕೂರು ಹಾಲು ಒಕ್ಕೂಟದ ಹಾಲನ್ನು ಬಾಂಬೆಯಲ್ಲಿ 2 ಲಕ್ಷ ಲೀಟರ್, ಜಮ್ಮು ಕಾಶ್ಮೀರದಲ್ಲಿ 30 ಸಾವಿರ ಲೀಟರ್ ಹಾಲು ಹಾಗೂ ಆಂದ್ರಪ್ರದೇಶದ ಸರಕಾರಿ ಶಾಲೆಯ ಕ್ಷೀರಭಾಗ್ಯಕ್ಕೂ ಹಾಲನ್ನು ಕಳುಹಿಸಲಾಗುತ್ತಿದೆ. ಈ ರೀತಿ ಮಾರುಕಟ್ಟೆ ವೃದ್ದಿ ಮಾಡಿ ಕೋವಿಡ್ ಸಂದರ್ಭದಲ್ಲೂ ರೈತರಿಗೆ 95 ಕೋಟಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ರಾಜ್ಯ ರೇಷ್ಮೆ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ಶಿರಾ ತಾಲ್ಲೂಕಿನಲ್ಲಿ ಪ್ರಸ್ತುತ 65 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಅದು 1 ಲಕ್ಷ ಲೀಟರ್ ಹಾಲು ದಿನವಹಿ ಉತ್ಪಾದಿಸುವ ಶಕ್ತಿ ತಾಲ್ಲೂಕಿನಿಂದ ಆಗಬೇಕು ಎಂಬ ಮಹತ್ತರ ಮುಂದಾಲೋಚನೆಯಿAದ ರೈತರಿಗೆ ಹೈನುಗಾರಿಕೆಯಿಂದ ಆರ್ಥಿಕ ಸಧೃಡತೆ ಬರಬೇಕು ಎಂಬ ಉದ್ದೇಶದಿಂದ ಉತ್ತಮವಾದ ವ್ಯವಸ್ಥೆ ಕಲ್ಪಿಸಲು ನಂದಿನಿ ಕ್ಷೀರಭವನ ನಿರ್ಮಾಣ ಮಾಡಲಾಗಿದೆ. ಶಿರಾ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಾರೆ. ಅವರೆಲ್ಲರೂ ಕೂಡ ಗ್ರಾಮಗಳಲ್ಲಿ ಹೈನುಗಾರಿಕಾ ಉದ್ಯಮ ಮಾಡುವುದರಿಂದ ಹೆಚ್ಚಿನ ಆರ್ಥಿಕ ಶಕ್ತಿ ಸಿಗುತ್ತದೆ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮಾತನಾಡಿ ಸಂಘಟನೆ ಸಧೃಡತೆ ಇದ್ದರೆ ಸಹಕಾರಿ ಕ್ಷೇತ್ರದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅದರ ಉದಾಹರಣೆಯಾಗಿ. ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ಉದಾಹರಣೆಯಾಗಿದೆ. ರೈತರಿಗೆ ಅನುಕೂಲಗಳ ಬಗ್ಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ರೈತಪರ ಕಾರ್ಯಕ್ರಮಗಳನ್ನು ರೈತಶಕ್ತಿ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿ ಸಹಕಾರ ಸಂಘದ ಸದಸ್ಯರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದು, ಇದರ ಉಪಯೋಗವನ್ನು ರೈತರು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನ, ಶುದ್ಧ ಕುಡಿಯುವ ನೀರನ ಘಟಕ, ನಂದಿನಿ ಕ್ಷೀರ ಮಳಿಗೆ ಹಾಗೂ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಚಿದಾನಂದ್ ಎಂ.ಗೌಡ, ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾ ಮಹಾ ಮಂಡಲದ ನಿರ್ದೇಶಕರಾದ ಸತೀಶ್, ಶಿವನಂಜಪ್ಪ, ಕೊಂಡವಾಡಿ ಚಂದ್ರಶೇಖರ್, ಜಿ.ಎನ್.ಮೂರ್ತಿ, ಸೂಡ ಅಧ್ಯಕ್ಷ ಈರಣ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಉಗ್ರೇಶ್, ಮಾಜಿ ಜಿ.ಪಂ. ಉಪಾಧ್ಯಕ್ಷ ಮದಿಮಡು ರಂಗಶಾಮಯ್ಯ, ತುಮಕೂರು ಹಾಲು ಒಕ್ಕೂಟದ ಶಿರಾ ಉಪ ವ್ಯವಸ್ಥಾಪಕ ಡಿ.ವೀರಣ್ಣ, ಶೀಥಲಕೇಂದ್ರ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ಮುಖಂಡ ಮಂಜುನಾಥ್, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ರೈಲ್ವೆ ಮಂಡಳಿ ಸದಸ್ಯ ವೀರೇಶ್ ಸೇರಿದಂತೆ ಹಲವರು ಹಾಜರಿದ್ದರು.