ಕೋಳಘಟ್ಟ ಗ್ರಾಮದ ಬಳಿ ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ತುರುವೇಕೆರೆ : ತಾಲೂಕಿನ ಕೋಳಘಟ್ಟ ಗ್ರಾಮದ ಬಳಿಯ ಕಲ್ಲುಗಣಿಗಾರಿಕೆಯನ್ನು ಮತ್ತೆ ಆರಂಭ ಮಾಡಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನೆಡೆಸಿದರು.
ಜನ ಜಾನುವಾರುಗಳಿಗೆ ಮಾರಕವಾಗಿರುವ ಕಲ್ಲುಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕೋಳಘಟ್ಟ ಆಸುಪಾಸಿನ ಕೆಲ ದಿನಗಳ ಹಿಂದೆಯಷ್ಟೇ ಪ್ರತಿಭಟನೆ ನೆಡೆಸಿದ್ದರು. ತತ್ಪಲವಾಗಿ ಕಲ್ಲುಗಣಿಗಾರಿಕೆ ಸ್ಥಗಿತಗೊಂಡು , ಆಸುಪಾಸಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕಲ್ಲುಗಣಿಗಾರಿಕೆಗೆ ಪೂರಕವಾದ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಆದರೇ ದಿಡೀರನೇ ಗಣಿಗಾರಿಕೆ ವಾಹನಗಳ ಓಡಾಟ ಆರಂಭಗೊಂಡ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರುಗಳು ವಾಹನಗಳ ಓಡಾಡುವ ದಾರಿಗೆ ಅಡ್ಡಲಾಗಿ ಕುಳಿತು ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ಮಲ್ಲಿಕಾರ್ಜುನ್ ಮಾತನಾಡಿ ನಮ್ಮ ಗ್ರಾಮದ ಸಮೀಪ ಆರಂಭಿಸಿದ್ದ ಗಣಿಗಾರಿಕೆಯಿಂದ ಜನ ಜಾನುವಾರುಗಳಿಗೆ ಹಾಗೂ ಪರಿಸರಕ್ಕೆ ಮಾರಕವಾಗಿದೆ ಎಂದು ಪ್ರತಿಭಟನೆ ನೆಡೆಸಿದ್ದೆವು. ಈ ಹಿನ್ನಲೆಯಲ್ಲಿ ಕಲ್ಲುಗಣಿಗಾರಿಕೆ ಹಾಗೂ ಭಾರಿ ವಾಹನಗಳ ಓಡಾಟ ಕಮ್ಮಿಯಾಗಿತ್ತು. ಇದೀಗ ಮತ್ತೆ ವಾಹನಗಳ ಓಡಾಟ ಆರಂಭಗೊಂಡಿದ್ದು, ನಮ್ಮ ಹಿತವನ್ನು ಕಡೆಗಣಿಸಿ ಕಲ್ಲುಗಣಿಗಾರಿಕೆ ನೆಡೆಸುವ ಸಾಧ್ಯತೆಗಳಿವೆ. ನಮ್ಮ ಗ್ರಾಮ ನೆಮ್ಮದಿಗೆ ಮಾರಕವಾಗಿರುವ ಕಲ್ಲುಗಣಿಗಾರಿಕೆ ಸಂಪೂರ್ಣ ಸ್ಥಗಿತವಾಗುವರೆಗೂ ಹೋರಾಟ ನೆಡೆಸುವುದಾಗಿ ತಿಳಿಸಿದರು.
ಕಲ್ಲುಗಣಿಗಾರಿಕೆಗೆ ಖಾಕಿ ಕಾವಲು:
ಜನ ಹಿತಕ್ಕೆ ಮಾರಕವಾದ ಕಲ್ಲುಗಣಿಗಾರಿಕೆ ನೆಡೆಸಲು ಪೋಲೀಸರು ಬೆಂಗಾವಲು ಎನ್ನುವಂತಾಗಿದೆ. ನಮ್ಮ ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿರುವ ಗಣಿಗಾರಿಕೆಗೆ ಸ್ಥಳೀಯರ ವಿರೋಧವಿದೆ. ಕಲ್ಲುಗಣಿಗಾರಿಕೆ ವಿರೋಧಿಸುವವರ ಮೇಲೆ ಪೋಲೀಸರು ಧಮಕಿ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಬಂಡೆಯಿಂದ ಕಲ್ಲನ್ನು ಕೊಂಡೊಯ್ಯುವ ವಾಹನಗಳಿಗೆ ಪೋಲೀಸ್ ಭದ್ರತೆ ಒದಗಿಸಲು ಪೋಲೀಸರು ಮುಂದಾಗಿರುವುದ ಶೋಚನೀಯ, ನಮ್ಮನ್ನು ಕೋವಿಡ್ ನಿಯಮ ಜಾರಿ ಇದೆ ಪ್ರತಿಭಟನೆ ನೆಡೆಸಕೂಡದೆಂದು ಪೋಲೀಸರು ನಿಯಂತ್ರಿಸುತ್ತಿದ್ದಾರೆ. ಕಲ್ಲುಗಣಿಗಾರಿಕೆಗೆ ಕೋವಿಡ್ ನಿಯಮ ಅನ್ವಯಿಸುವುದಿಲ್ಲವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ್, ಶಂಕರಪ್ಪ, ರಾಜಶೇಖರ್, ರಾಜೀವ್, ನಾಗರಾಜು, ಚಂದ್ರಶೇಖರ್, ಬಸವರಾಜು, ದಿನೇಶ್, ಚಂದ್ರಕಲಾ, ಶಿಲ್ಪ, ಶಿವರಾಜು, ಪ್ರಭುಸ್ವಾಮಿ, ಗೌರಮ್ಮ, ಪುಷ್ಪಲತಾ, ಲಕ್ಷö್ಮಮ್ಮ , ಕಮಲ ಹಾಗೂ ಗ್ರಾಮಸ್ಥರು ಇದ್ದರು.