ಸಾರ್ಥವಳ್ಳಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಿಂದ ಕೋಟ್ಯಾಂತರ ರೂ ಹಣ ದುರುಪಯೋಗ : ನಿರ್ದೇಶಕ ನಾಗರಾಜು ಆರೋಪ
ತಿಪಟೂರು : ಸಾರ್ಥವಳ್ಳಿ ಕೃಷಿ ಸಹಕಾರ ಸಂಘದ ಕಾರ್ಯದರ್ಶಿಯಾದ ಪಲ್ಲವಿ ಹೊನ್ನಪ್ಪ ರವರು ಒಂದು ಕೋಟಿ 17 ಲಕ್ಷರೂಗಳನ್ನು ದುರುಪಯೋಗ ಪಡಿಸಿಕೊಂಡು ಸರ್ವಾಧಿಕಾರಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸಾರ್ಥವಳ್ಳಿಯ ಕೇಂದ್ರ ಸ್ಥಾನದಲ್ಲಿ ಸಂಘದ ಸಾಮಾನ್ಯ ಮಹಾಸಭೆಯನ್ನು ನಡೆಸದೆ ಅಕ್ರಮವಾಗಿ ಕಲ್ಕೆರೆಯಲ್ಲಿ ಅಧ್ಯಕ್ಷರ ಖಾಸಗಿ ಮನೆಯಲ್ಲಿ ನಡೆಸಿ ಷೇರುದಾರರು ಹಾಗೂ ನಿರ್ದೇಶಕರ ಕಣ್ಣಿಗೆ ಮಣ್ಣೆರೆಚಿ ಅಕ್ರಮಗಳನ್ನು ಮಾಡುತ್ತಿದ್ದಾರೆ. ಕೂಡಲೆ ಅವರನ್ನು ಅಮಾನತ್ತು ಮಾಡಿ ಕಾನೂನು ರೀತಿಯ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಂಘದ ನಿರ್ದೇಶಕ ನಾಗರಾಜು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನಗರದ ಸಹಕಾರ ಇಲಾಖೆಯ ಕಛೇರಿಯ ಮುಂಬಾಗದಲ್ಲಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಿಂದ ಉಂಟಾಗುತ್ತಿರುವ ತೊಂದರೆ ಹಾಗೂ ಅವರುಗಳು ಮಾಡಿರುವ ಅಕ್ರಮಗಳ ವಿರುದ್ದ ಮಾತನಾಡಿದರು, ರೈತರಿಗೆ ಸಾಲದ ಹಣವನ್ನು ಕೊಡಿಸುವಲ್ಲಿ ಅಕ್ರಮಗಳನ್ನು ಕಳೆದ ಐದಾರು ವರ್ಷಗಳಿಂದಲೂ ಎಸಗುತ್ತಿದ್ದಾರೆ. ರೈತರಿಗೆ ಎಷ್ಟು ಸಾಲ ಮಂಜೂರಾಗಿದೆ ಎನ್ನುವುದನ್ನು ಮುಚ್ಚಿಟ್ಟು ಪ್ರತಿ ರೈತರಿಂದ 10 ರಿಂದ 15 ಸಾವಿರ ರೂಗಳವರೆಗೆ ಕಡಿಮೆ ಹಣವನ್ನು ನೀಡಿ ರೈತರಿಗೆ ವಂಚನೆಯನ್ನು ಮಾಡುತ್ತಿದ್ದಾರೆ. ಸರ್ಕಾರದಿಂದ ಮಂಜೂರಾಗುವ ಹಣವನ್ನು ಚಕ್ ಮೂಲಕವೇ ಕೊಡಬೇನ್ನುವ ನಿಯಮವಿದೆ. ಆದರೆ ಇವರು ಚಕ್‌ಗಳನ್ನು ರೈತರಿಗೆ ನೀಡದೆ ಹಣವನ್ನು ನೇರವಾಗಿ ನೀಡುವುದರಿಂದ 15ಸಾವಿರ ರೂಗಳ ವರೆವಿಗೂ ಹಣವನ್ನು ರೈತರಿಗೆ ವಂಚಿಸುತ್ತಿದ್ದಾರೆ. ಕಾರ್ಯದರ್ಶಿ ಮಹಿಳೆಯಾಗಿರುವ ಕಾರಣ ಮಂಜೂರಾಗಿರುವ ಹಣಕ್ಕಿಂತ ಕಡಿಮೆ ಹಣವನ್ನು ನೀಡುತ್ತಿರುವ ಬಗ್ಗೆ ಪ್ರೆಶ್ನಿಸಿದರೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ದೂರನ್ನು ನೀಡಬೇಕಾಗುತ್ತದೆ ಉಷಾರ್ ಎನ್ನುವ ಬೆದರಿಕೆಯನ್ನು ಒಡ್ಡಿ ರೈತರನ್ನು ವಂಚಿಸುತ್ತಾ ಬರುತ್ತಿದ್ದಾರೆಂದು ಆರೋಪಿಸಿದರು.
ಉಪಾಧ್ಯಕ್ಷ ವಿನಯ್ ಮಾತನಾಡಿ, ಕಲ್ಕೆರೆಯ ಅಧ್ಯಕ್ಷರ ಮನೆಯಲ್ಲಿ ಅಕ್ರಮವಾಗಿ ಸಭೆಗಳನ್ನು ಮಾಡುತ್ತಾರೆ, ಇದಕ್ಕೆ ಎಆರ್‌ನಿಂದ ಪೂರ್ವಾನುಮತಿ ಪಡೆದಿರುವುದಿಲ್ಲ. ಕಾರ್ಯದರ್ಶಿ ಹಾಗೂ ಅಧ್ಯಕ್ಷರು ತಮ್ಮ ಮನೆಗಳಲ್ಲಿಯೇ ಹಲವಾರು ಖಡತಗಳನ್ನು ಅಕ್ರಮವಾಗಿ ಇಟ್ಟುಕೊಂಡು ತಮಗೆ ಬೇಕಾದ ರೀತಿಯಲ್ಲಿ ತಿದ್ದುತ್ತಾರೆ. ಅಧ್ಯಕ್ಷರು ಹಾಗೂ ಕಾರ್ಯದರ್ಶಿ ರೈತರ ಮತ್ತು ಸದಸ್ಯರ ದಾರಿಯನ್ನು ತಪ್ಪಿಸಲು ಎರಡೆರಡು ಕರಪತ್ರವನ್ನು ಹೊರಡಿಸುತ್ತಾರೆ, ಒಂದು ಕರಪತ್ರದಲ್ಲಿ ಖಾಸಗಿ ಮನೆಯ ವಿಳಾಸವಿದ್ದರೆ ಮತ್ತೊಂದರಲ್ಲಿ ಕಛೇರಿಯ ವಿಳಾಸವಿರುತ್ತದೆ. ಇದರಿಂದ ಗೊಂದಲಕ್ಕೆ ಸಿಲುಕುವ ರೈತರು ಇವರ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಸಾಲವನ್ನು ಪಡೆದುಕೊಳ್ಳಲು 15ಸಾವಿರ ವರೆಗೆ ಹಣವನ್ನು ಕಳೆದುಕೊಂಡಿರುವ ಬಗ್ಗೆ ಅಸಮದಾನವಿದೆ ಎಂದು ಆರೋಪಿಸಿದರು.
ನಿರ್ದೇಶಕ ಪ್ರಕಾಶ್ ಯಾದವ್ ಮಾತನಾಡಿ, ಕಾರ್ಯದರ್ಶಿ ಪಲ್ಲವಿ ಹೊನ್ನಪ್ಪ ಅಕ್ರಮವಾಗಿ ಬೇನಾಮಿ ಹೆಸರಿನಲ್ಲಿ 10 ಎಕರೆ ಜಮೀನನ್ನು ಖರೀದಿಸಿದ್ದಾರೆ, ಸ್ವಂತಕ್ಕೆ ಮೂರು ಮನೆ, ಒಂದು ಇನ್ನೊವಾ ಕಾರು, ಒಂದು ಬಿ.ಎಂ.ಡಬ್ಲೂ ಕಾರುಗಳನ್ನು ಸಂಪಾದಿಸಿ ಐಶಾರಾಮಿ ಜೀವನವನ್ನು ಅಕ್ರಮದಿಂದ ಸಂಪಾದಿಸಿದ ಹಣದಿಂದ ಮಾಡುತ್ತಿದ್ದಾರೆ. 600-700 ಸದಸ್ಯರ ಷೇರುಗಳಿಗೆ ಕೊಡಬೇಕಾದ ಡಿವಿಡೆಂಟ್‌ನ್ನು ಇದುವರೆವಿಗೂ ನೀಡಿಲ್ಲ, ಕೇಳದರೆ ಸಹಕಾರಿಯಲ್ಲಿ ಹಣವಿಲ್ಲ ಎನ್ನುವ ಅಥವಾ ಅಧ್ಯಕ್ಷರನ್ನು ಕೇಳಿ ಎನ್ನುವ ಉಡಾಫೆಯ ಉತ್ತರವನ್ನು ನೀಡುತ್ತಾರೆ. ಇಷ್ಟಲ್ಲಾ ಅಕ್ರಮಗಳನ್ನು ಮಾಡಿರುವ ಕಾರ್ಯದರ್ಶಿ ಪಲ್ಲವಿ ಹೊನ್ನಪ್ಪರವರನ್ನು ಅಮಾನತುಗೊಳಿಸಿ ಅಧ್ಯಕ್ಷರನ್ನೂ ಸೇರಿದಂತೆ ಸಂಪೂರ್ಣವಾದ ತನಿಖೆ ಮಾಡಿ ಕಾನೂನಿನ ಕ್ರಮವನ್ನು ಕೈಗೊಳ್ಳಬೇಕು. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ, ಸಹಾಯಕ ನಿಬಂಧಕರ ಕಛೇರಿಯ ಮುಂದೆ ಸಾರ್ಥವಳ್ಳಿ ಮತ್ತು ಸುತ್ತಮುತ್ತಲ ರೈತರು ಮತ್ತು ಗ್ರಾಮಸ್ಥರು ಧರಣಿಯನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆಂದು ಆರೋಪಿಸಿದರು. ಅಕ್ರಮ ಸಾಬೀತಾದರೆ ನಿಯಮಿತವನ್ನು ಸೂಪರ್ ಸೀಡ್ ಮಾಡಬೇಕೆಂದು ಒತ್ತಾಯಿಸಿದರು.
ನಿರ್ದೇಶಕರಾದ ಚಂದ್ರಶೇಖರ್, ದೇವಿರಮ್ಮ, ಮಾಜಿ ನಿರ್ದೇಶಕ ನಾಗರಾಜ್, ಗ್ರಾಮಸ್ಥ ರಾಜಣ್ಣ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.