ಶ್ರೀಗುರುಸಿದ್ದರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಗೋಪುರ ನಿರ್ಮಾಣಕ್ಕೆ ಶಾಸಕ ಗೌರಿಶಂಕರ್ ಚಾಲನೆ
ತುಮಕೂರು: ನಗರಕ್ಕೆ ಸಮೀಪದ ಬೆಳಗುಂಬ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಗುರು ಸಿದ್ದರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಗೋಪುರ ನಿರ್ಮಾಣ ಕಾರ್ಯಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಿದರು.
ಕೆಲವು ಕಾರಣಗಳಿಂದ ಹಲವು ದಿನಗಳಿಂದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನೆನೆಗುದಿಗೆ ಬಿದ್ದಿತ್ತು, ಇದನ್ನು ಮನಗಂಡ ಶಾಸಕ ಗೌರಿಶಂಕರ್ ಅವರು ಮುತುವರ್ಜಿ ವಹಿಸಿ ಅಧಿಕಾರಿಗಳು, ಗ್ರಾಮಸ್ಥರು ಮತ್ತು ಭಕ್ತರೊಂದಿಗೆ ಚರ್ಚೆ ನಡೆಸಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಇದ್ದ ಅಡ್ಡಿ ಸರಿಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಗೌರಿಶಂಕರ್, ದೇವಸ್ಥಾನದ ಕೆಲಸ ಶೀಘ್ರ ಆರಂಭಿಸುವಂತೆ ಸೂಚಿಸಿ, ದೇವಸ್ಥಾನ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು, ದೇವಸ್ಥಾನಗಳು ಒಂದು ಊರಿಗೆ ಕಳಶಪ್ರಾಯವಿದ್ದಂತೆ, ಶಾಂತಿ, ನೆಮ್ಮದಿಯ ತಾಣವೇ ದೇವಸ್ಥಾನ, ಇಂಥ ದೇವಸ್ಥಾನವನ್ನು ಎಲ್ಲರೂ ಒಟ್ಟಾಗಿ ಸೇರಿ ನಿರ್ಮಿಸೋಣ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು, ನಾನು ಇಲ್ಲಿ ಪಕ್ಷಾತೀತವಾಗಿ ಬಂದಿದ್ದೇನೆ ಇಲ್ಲಿ ಎಲ್ಲಾ ಪಕ್ಷದವರು ಇದ್ದಾರೆ ಅಭಿವೃದ್ಧಿಗಾಗಿ ನಾವೆಲ್ಲಾ ಒಂದಾಗೋಣ, ಚುನಾವಣೆ ಸಮಯದಲ್ಲಿ ಮಾತ್ರ ನಾವು ರಾಜಕೀಯ ಮಾಡೋಣ ಎಂದು ತಿಳಿಸಿದರು.
ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಮಂಜೂರು ಆಗಿದೆ ಜೊತೆಗೆ ನಾನು ವೈಯಕ್ತಿಕವಾಗಿ 10 ಲಕ್ಷ ರೂ. ನೀಡುತ್ತೇನೆ ನನ್ನ ಸ್ನೇಹಿತರು ಸಹ ದೇವಸ್ಥಾನದ ವಿಷಯದಲ್ಲಿ ಸಹಾಯ ಮಾಡುತ್ತಾರೆ, ಅದು ಕಡಿಮೆಯಾದರೆ ನಾನೇ ಎಲ್ಲಾ ವೆಚ್ಚ ಬರಿಸುತ್ತೇನೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತು ಹಿಂದೆ ಬೀಳಲ್ಲ, ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೇನೆ, ದೇವಸ್ಥಾನದ ರಥಬೀದಿಯಲ್ಲಿ ಡಾಂಬರೀಕರಣಕ್ಕೆ 18 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಡಾಂಬರಿಗೆ ಬದಲಾಗಿ ಸಿಸಿ ರಸ್ತೆ ಮಾಡಿಸುವುದಾಗಿ ತಿಳಿಸಿದರು.
ಮಕರ ಸಂಕ್ರಾಂತಿ ದಿನದಂದು ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆ ನಡೆಸಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಕೇಳಿದರು. ಇದಕ್ಕೆ ಉತ್ತರಿಸಿದ ಶಾಸಕರು ಸರ್ಕಾರದ ಆದೇಶದಂತೆ ನಾವು ಕೂಡ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ, ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವುದರಿಂದ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ, ನಾನು ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡುತ್ತೇನೆ ಎಂದರು.
ಸಭೆಯಲ್ಲಿ ಗ್ರಾಮದ ಮುಖಂಡರಾದ ಸಿದ್ದರಾಮೇಗೌಡ, ವಿಜಯ್ ಕುಮಾರ್, ರಾಮಕೃಷ್ಣಪ್ಪ, ಸಿದ್ದರಾಮಣ್ಣ, ಮಲ್ಲಿಕಾರ್ಜುನ, ಅರ್ಚಕರಾದ ಶಾಂತಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾಂಜನೇಯ, ಕರೆ ರಂಗಪ್ಪ, ಬಸವರಾಜು, ಗಂಗಾಧರ್, ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಸೇರಿದಂತೆ ಇತರರಿದ್ದರು.