ಹಿಂಡಿಸ್ಕೆರೆ ಗ್ರಾಪಂ ಅಧ್ಯಕ್ಷರಾಗಿ ಲೋಕೇಶ್ ಅವಿರೋಧ ಆಯ್ಕೆ
ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಕೆರೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದು ಚುನಾವಣೆಯಲ್ಲಿ ಸ್ಥಳೀಯ ಸದಸ್ಯ ಲೋಕೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ತಹಸೀಲ್ದಾರ್ ಬಿ.ಆರತಿ ಚುನಾವಣಾಧಿಕಾರಿಯಾಗಿ ಎಲ್ಲಾ ಪ್ರಕ್ರಿಯೆ ನಡೆಸಿಕೊಟ್ಟರು. ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಪಡಗುಡಿ ಕ್ಷೇತ್ರದ ಗುರುಪ್ರಕಾಶ್ ಅವರು ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂಡಿಸ್ಕೆರೆ ಕ್ಷೇತ್ರದ ಲೋಕೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆಯ ಘೋಷಣೆ ಮಾಡಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಲೋಕೇಶ್ ಕೇಶಿಪ್ ರಾಜ್ಯ ಹೆದ್ದಾರಿ ಹಾದು ಹೋದ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು. ಶಾಸಕ ಮಸಾಲಾ ಜಯರಾಮ್ ಅವರ ಮೂಲಕ ಸರ್ಕಾರದಿಂದ ವಿಶೇಷ ಅನುದಾನ ತಂದು ಮೂಲ ಸವಲತ್ತು ಒದಗಿಸಲು ಬದ್ಧನಾಗಿರುತ್ತೇನೆ. ಜಿಲ್ಲೆಯಲ್ಲೇ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆಯಲು ಎಲ್ಲಾ ಸದಸ್ಯರ ಒಮ್ಮತದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸರ್ಕಾರದಿಂದ ಬರುವ ಎಲ್ಲಾ ಅನುದಾನವನ್ನು ಸದ್ಬಳಕೆ ಮಾಡಿ ಗುಡಿಸಲು ಮುಕ್ತ ಗ್ರಾಮಗಳ ರಚನೆ ಜೊತೆಗೆ ಕುಡಿಯುವ ನೀರು ಸೌಲಭ್ಯ, ಸ್ವಚ್ಛತೆಗೆ ಆದ್ಯತೆ ಹಾಗೂ ಇಲ್ಲಿನ ಕೃಷಿಕ ವರ್ಗಕ್ಕೆ ಅನುಕೂಲ ಮಾಡುವ ಯೋಜನೆ ರೂಪಿಸಲಾಗಿ ವಿವಿಧ ಇಲಾಖೆಯಲ್ಲಿ ಸಿಗುವ ಮಾಹಿತಿಯನ್ನು ಗ್ರಾಮಸಭೆ ಮತ್ತು ಕೆಡಿಪಿ ಸಭೆ ಮೂಲಕ ತಿಳಿಸಲಾಗುವುದು. ಸದಸ್ಯರಿಗೆ ಅರಿವು ಮೂಡಿಸುವ ಕೆಲಸ ಕೂಡಾ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ಗಂಗಾಧರ್, ನಾಗರಾಜು, ಮಮತಾ, ಸುಧಾಮಣಿ, ಅನ್ನಪೂರ್ಣ, ಶಶಿಕಲಾ, ಮುಖಂಡರಾದ ಕಿಟ್ಟಣ್ಣ, ಪ್ರಕಾಶ್ ಇತರರಿದ್ದರು.