ವೀಕೆಂಡ್ ಕರ್ಫ್ಯೂಗೆ ಜನರ ಉತ್ತಮ ಪ್ರತಿಕ್ರಿಯೆ
ತುಮಕೂರು : ಕೋವಿಡ್ 3ನೇ ಅಲೆ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಲ್ಲಿ ಪ್ರಮುಖವಾಗಿರುವ ವಾರಾಂತ್ಯ ಕರ್ಫ್ಯೂಗೆ ಕಲ್ಪತರುನಾಡಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಶುಕ್ರವಾರ ರಾತ್ರಿಯಿಂದ 10 ಗಂಟೆಯಿಂದಲೇ ಕೋವಿಡ್ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಜನಸಾಮಾನ್ಯರು ಬೆಳಿಗ್ಗೆಯಿಂದ ನಗರ ಪ್ರದೇಶಗಳಿಗೆ ಬರದೆ ಸರ್ಕಾರ ಜಾರಿಗೊಳಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿರುವ ವಾಹನಗಳ ತಪಾಸಣೆ ನಡೆಸಿ, ದಂಡ ಹಾಕುವ ಮೂಲಕ ವಾರಾಂತ್ಯ ಕರ್ಫ್ಯೂವಿನ ಬಿಸಿ ಮುಟ್ಟಿಸುತ್ತಿದ್ದಾರೆ.
ಅನಗತ್ಯವಾಗಿ ದ್ವಿಚಕ್ರ ವಾಹನ, ಕಾರುಗಳಲ್ಲಿ ರಸ್ತೆಗೆ ಇಳಿದವರನ್ನು ಪ್ರಶ್ನಿಸುತ್ತಿರುವ ಪೊಲೀಸರು ಜಾಗೃತಿ ಮೂಡಿಸಿ, ಮನೆಗಳತ್ತ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ನಗರದಲ್ಲಿ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ವಾಣಿಜ್ಯ ಚಟುವಟಿಕೆಗಳ ಅಂಗಡಿಗಳ ಮಾಲೀಕರು ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಎರಡನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿಲ್ಲ ಹಾಗಾಗಿ ರಸ್ತೆಗಳಲ್ಲಿ ವಾಹನಗಳ ಸವಾರರ ಸಂಚಾರವೂ ವಿರಳವಾಗಿತ್ತು.
ಇನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಖಾಸಗಿ ಬಸ್‌ಗಳು ಸಂಚಾರವೂ ವಿರಳವಾಗಿದ್ದು, ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಸರ್ಕಾರಿ ರಜೆ ಇರುವುದರಿಂದ ಎರಡೂ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.
ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಅಂಗಡಿ, ತರಕಾರಿ, ಮಾಂಸ, ಮೀನು ಮಾರಾಟ ಅಂಗಡಿಗಳಿಗೆ ಮಾತ್ರ ಬಾಗಿಲು ತೆರೆಯಲು ಅವಕಾಶ ನೀಡಲಾಗಿದ್ದು, ಈ ಅಂಗಡಿಗಳ ಬಳಿ ಮಾತ್ರ ಅಲ್ಪಸ್ವಲ್ಪ ಜನ ಕಂಡು ಬರುತ್ತಿದ್ದು, ಎಲ್ಲರೂ ಮಾಸ್ಕ್ ಧರಿಸಿ ನಿಯಮ ಪಾಲನೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಈಗಾಗಲೇ ಕೊರೊನಾ ಮೊದಲನೇ ಅಲೆ, ಎರಡನೇ ಅಲೆಯ ಲಾಕ್‌ಡೌನ್‌ಗಳಿಂದ ತತ್ತರಿಸಿರುವ ಹೋಟೆಲ್‌ಗಳಲ್ಲಿ ಇಂದು ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಗ್ರಾಹಕರು ಹೋಟೆಲ್ ಮುಂಭಾಗವೇ ನಿಂತು ತಮಗೆ ಬೇಕಾದ ಆಹಾರವನ್ನು ಮನೆಗಳಿಗೆ ಪಾರ್ಸೆಲ್ ತೆಗೆದುಕೊಂಡು ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.
ನಗರದ ಅಶೋಕ ರಸ್ತೆಯಲ್ಲಿರುವ ಅಶೋಕ ಹೋಟೆಲ್ ಮಾಲೀಕರಾದ ಶ್ರೀನಿವಾಸ ಪ್ರಸಾದ್ ಅವರು, ವೀಕೆಂಡ್ ಕರ್ಫೂ್ಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಈಗಾಗಲೇ ಕೊರೊನಾ ಮೊದಲನೇ ಮತ್ತು ಎರಡನೇ ಅಲೆ ನಮ್ಮ ವ್ಯಾಪಾರವನ್ನು ನುಂಗಿ ಹಾಕಿದೆ. ಈಗಾಗಲೇ 3ನೇ ಅಲೆಯ ಆರ್ಭಟಿಸುತ್ತಿದ್ದು, ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಪಾರ್ಸೆಲ್‌ಗೆ ಅವಕಾಶ ನೀಡಿದ್ದರೂ ಗ್ರಾಹಕರು ಮಾತ್ರ ಹೋಟೆಲ್‌ಗಳತ್ತ ಸುಳಿಯುತ್ತಿಲ್ಲ. ನಾವು ಸಹ ಮಧ್ಯಾಹ್ನದ ವರೆಗೆ ಹೋಟೆಲ್ ಬಾಗಿಲು ತೆರೆದು, ಮಧ್ಯಾಹ್ನದ ನಂತರ ಬಂದ್ ಮಾಡುತ್ತೇವೆ ಎಂದು ತಮ್ಮ ಅಳಲು ತೋಡಿಕೊಂಡರು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಿಗಾಗಿ ರಸ್ತೆಗಳಿದು ಜನರಲ್ಲಿ ಜಾಗೃತಿ ಮೂಡಿಸಿದರು.
ರಾಜ್ಯ ಸರ್ಕಾರದ ಆದೇಶದಂತೆ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಯಾವುದೇ ರೀತಿಯ ನಿರ್ಬಂಧ ಇಲ್ಲ. ಆಸ್ಪತ್ರೆ, ಮೆಡಿಕಲ್ ಸ್ಟೋರ್ ಎಂದಿನಂತೆ ತೆರೆದಿರುತ್ತವೆ. ಹೋಟೆಲ್‌ಗಳಿಗೆ ಜನಸಾಮಾನ್ಯರಿಗೆ ತಿಂಡಿ, ಊಟ ಪಾರ್ಸೆಲ್ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.
ರಾಜ್ಯಾದ್ಯಂತ ಸರ್ಕಾರದ ಆದೇಶದಂತೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಅದರಂತೆ ಜಿಲ್ಲೆಯಲ್ಲಿಯೂ ಕಟ್ಟುನಿಟ್ಟಾಗಿ ವೀಕೆಂಡ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಅಗತ್ಯ ವಸ್ತುಗಳು, ತರಕಾರಿ, ಹಾಲಿನ ಮಳಿಗೆಗಳು ತೆರೆದಿರುತ್ತವೆ. ಅನಗತ್ಯವಾಗಿ ರಸ್ತೆಗಿಳಿದರೆ ಅಂತಹವರ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಎಚ್ಚರಿಕೆ ನೀಡಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ನಗರದಲ್ಲಿ 11 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಈ ಎಲ್ಲ ಚೆಕ್ ಪೋಸ್ಟ್ಗಳಲ್ಲೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅನಗತ್ಯವಾಗಿ ರಸ್ತೆಗಿಳಿಯುವವರಿಗೆ ಜಾಗೃತಿ ಮೂಡಿಸುವ ಜತೆಗೆ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳ ಪರದಾಟ
ವೀಕೆಂಡ್ ಕರ್ಫೂ್ಯ ಜಾರಿಯಲ್ಲಿರುವುದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಇಲ್ಲದೆ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಪರದಾಡಿದ ಪ್ರಸಂಗ ನಗರದಲ್ಲಿ ಜರುಗಿತು.
ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಗರದ ಸಿರಾ ಗೇಟ್ ಸಮೀಪ ಇರುವ ಶ್ರೀದೇವಿ ಮೆಡಿಕಲ್ ಕಾಲೇಜಿಗೆ ತೆರಳಲು ಗುಬ್ಬಿ, ತಿಪಟೂರು ಹಾಗೂ ದೊಡ್ಡಬಳ್ಳಾಪುರ ಭಾಗದಿಂದ ಬಂದಿದ್ದ ವಿದ್ಯಾರ್ಥಿಗಳು ನಗರ ಸಾರಿಗೆ ಬಸ್‌ಗಳಿಲ್ಲದೆ ಪರದಾಡುವಂತಾಯಿತು.