ಕೋಳಘಟ್ಟ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಉಪವಿಭಾಗಾದಿಕಾರಿಗಳ ಭೇಟಿ: ಗಣಿಗಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರ ಒತ್ತಾಯ
ತುರುವೇಕೆರೆ : ತಾಲೂಕಿನಾದ್ಯಂತ ತೀವ್ರತರ ಚರ್ಚೆಗೆ ಗ್ರಾಸವಾಗಿರುವ ಕೋಳಘಟ್ಟ ಗ್ರಾಮದ ಬಳಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಉಪ ವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕೋಳಘಟ್ಟ ಗ್ರಾಮಸ್ಥರುಗಳು ಕಲ್ಲುಗಣಿಗಾರಿಕೆ ನೆಡೆಸುವುದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಉಪ ವಿಭಾಗಾಧಿಕಾರಿಗಳವರಿಗೆ ಮನವರಿಕೆ ಮಾಡಿದರು.ಆಸು ಪಾಸಿನಲ್ಲಿರುವ ಜನ ಜಾನುವಾರುಗಳಿಗೆ, ಪರಿಸರಕ್ಕೆ ಮಾರಕವಾಗಿರುವ ಗಣಿಗಾರಿಕೆ ನಿಲ್ಲಿಸಬೇಕು, ಕಲ್ಲುಗಣಿಗಾರಿಕೆ ನೆಡೆಸಲು ಸ್ಪೋಟಕ ಸಿಡಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮದ ಮನೆಗಳು ಹಾಗೂ ದೇವಸ್ಥಾನಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಜನ ಜಾನುವಾರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು ಜನಹಿತಕ್ಕೆ ಮಾರಕವಾಗಿರುವ ಕಲ್ಲು ಗಣಿಗಾರಿಕೆ ಕೂಡಲೇ ಸ್ಥಗಿತಗೊಳಿಸುವಂತೆ ಒಕ್ಕೊರಲಿನ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ ಕೋಳಘಟ್ಟ ಬಳಿ ಕಲ್ಲುಗಣಿಗಾರಿಕೆ ನೆಡೆದಂತೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಲಾಗಿದೆ. ಕಲ್ಲುಗಣಿಗಾರಿಕೆ ಪ್ರದೇಶವನ್ನು ವೀಕ್ಷಣೆ ಮಾಡಲಾಗಿದ್ದು ವಸ್ತು ಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳವರಿಗೆ ವರದಿ ಮಾಡಲಾಗುವುದು ಎಂದರು.
ಸ್ಥಳಿಯರ ಪರವಾಗಿ ಮಾತನಾಡಿದ ಛಾಯಾಶಂಕರಪ್ಪ ಕಲ್ಲುಗಣಿಗಾರಿಕೆ ನೆಡೆಸುವ ಮೂಲಕ ಕೋಳಘಟ್ಟ ಆಸುಪಾಸಿನ ಜನ ಜಾನುವಾರುಗಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಜನಹಿತಕ್ಕೆ ಮಾರಕವಾಗಿರುವ ಗಣಿಗಾರಿಕೆಯನ್ನು ನಿಲ್ಲಿಸಿ ಅಮೂಲ್ಯ ಜೀವಗಳನ್ನು ಅಧಿಕಾರಿಗಳು ಸಂರಕ್ಷಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಲ್ಲುಗಣಿಗಾರಿಕೆ ನಿಲ್ಲಿಸುವರೆಗೂ ಹೋರಾಟ ಮುಂದುವರೆಸುವ ಹೋರಾಟವನ್ನು ಗ್ರಾಮಸ್ಥರೆಲ್ಲರೂ ಸಭೆ ಸೇರಿ ಕೈಗೊಂಡಿದ್ದೇವೆ ಎಂದರು.
ಗ್ರಾಮದ ಮಹಿಳೆ ಕಮಲಮ್ಮ ಮಾತನಾಡಿ ಸ್ಥಳಕ್ಕೆ ಬೇಟಿ ನೀಡಿದ್ದ ಉಪವಿಭಾಗಾಧಿಕಾರಿಗಳವರ ಬಳಿ ನಮ್ಮ ಅಹವಾಲನ್ನು ಹೇಳಿಕೊಳ್ಳಲು ಮುಂದಾದ ನಮ್ಮನ್ನು ಪೋಲೀಸರು ತಡೆದರು. ನಮ್ಮ ಅಹವಾಲನ್ನು ಯಾರ ಬಳಿ ಹೇಳಿಕೊಳ್ಳುವುದು, ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸುವವರ ಮೇಲೆ ಪೋಲೀಸರು ದೌರ್ಜನ್ಯ ತೋರುತ್ತಿದ್ದಾರೆ ಎಂದು ದೂರಿದರು.
ಉಪ ವಿಭಾಗಾಧಿಕಾರಿಗಳವರ ಭೇಟಿ ವೇಳೆ ಡಿವೈಎಸ್ಪಿ ರಮೇಶ್, ಸಿ.ಪಿ.ಐ. ನವೀನ್, ಪಿಎಸ್.ಐ.ಗಳಾದ ಕೇಶವಮೂರ್ತಿ,ಶಿವಲಿಂಗಪ್ಪ, ಕಂದಾಯ ತನಿಖಾಧಿಕಾರಿ ಶಿವಕುಮಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರಿದ್ದರು.