ಕೃಷಿ ಚಟುವಟಿಕೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ : ಪ್ರೀತಮ್ ರಾಜ್
ಮಧುಗಿರಿ : ಕೃಷಿ ಚಟುವಟಿಕೆಯಲ್ಲಿ ಮಹಿಳೆಯರ ಪಾತ್ರ ಇಂದು ಬಹು ಮುಖ್ಯ ಅಂತಹ ರೈತ ಮಹಿಳೆಯರನ್ನು ಅಧಿಕೃತವಾಗಿ ರೈತರು ಎಂದು ಪರಿಗಣಿಸಿ ಅವರಿಗೆ ಸರ್ಕಾರವು ಗುರುತಿನ ಚೀಟಿ ನೀಡಬೇಕೆಂದು ರೆಡ್ಸ್ ಸಂಸ್ಥೆಯ ಉಪನಿರ್ದೇಶಕ ಪ್ರೀತಮ್ ರಾಜ್ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾ.ಪಂ ಆವರಣದಲ್ಲಿ ರೆಡ್ಸ್ ಸಂಸ್ಥೆ ಹಾಗೂ ಆದಿಜನ ಪಂಚಾಯ್ತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತ ಮಹಿಳಾ ದಿನಾಚರಣೆಯಲ್ಲಿ ಭೂ ಶಕ್ತಿಗೆ ಪೂಜೆ ಮಾಡುವ ಮೂಲಕ ರಾಗಿ ರೊಟ್ಟಿ, ಬೇವಿನ ಪತ್ರೆಯನ್ನು ವಿತರಿಸಿ ಮಾತನಾಡಿದ ಅವರು, 2016-17 ರ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ 80% ರಷ್ಟು ಹೆಣ್ಣುಮಕ್ಕಳು ಬೇಸಾಯದ ಕಸುಬಿನಲ್ಲಿ ಇದ್ದಾರೆ. ಈಗಿದ್ದರೂ ಸಹ ಸರ್ಕಾರ ರೈತ ಮಹಿಳೆಯರನ್ನು ಪರಿಗಣಿಸಿಲ್ಲ. ಇಂದು ನಗರ ಪ್ರದೇಶದ ಕಡೆ ವಲಸೆ ಹೋಗುತ್ತಿರುವ ಮಹಿಳೆಯರಿಗೆ ಜಮೀನು ನೀಡಬೇಕು ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿ ನೀಡಿದರೆ ರೈತ ಮಹಿಳೆಯರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಡಾ.ಸಂಜೀವ್ ಮೂರ್ತಿ ಮಾತನಾಡಿ, ಇಂದಿನ ಆರ್ಥಿಕ ಬಿಕ್ಕಟ್ಟು ಹೆಚ್ಚು ಬಿಗಡಾಯಿಸುತ್ತಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಬಂಡವಾಳಶಾಹಿಗಳು ಇಂದು ಭೂಮಿಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಬಡಜನರ ಭೂಮಿ, ಅರಣ್ಯವನ್ನು ಕಿತ್ತುಕೊಳ್ಳುವ ಹುನ್ನಾರಗಳೊಂದು ಕಡೆಯಾದರೆ ದಲಿತ ಮಹಿಳೆಯರು ಸ್ವಾತಂತ್ರ‍್ಯ ಪೂರ್ವದಿಂದಲೂ ಮನ್ನಣೆಗೆ ಬರುತ್ತಿಲ್ಲ. ಹಿಂದೆಲ್ಲಾ ಇಡಿ ಹಳ್ಳಿಯೇ ಕೃಷಿ ಕೆಲಸದ ಭಾಗವಾಗಿರುತ್ತಿತ್ತು. ಬಂಡವಾಳಶಾಹಿಗಳು ಮತ್ತು ಭೂಮಾಲೀಕರು ಇಂದಿನ ಕೃಷಿ ಬಿಕ್ಕಟ್ಟಿಗೆ ಕಾರಣವಾಗಿದ್ದಾರೆ ಎಂದರು
ಡಾ.ಮಹರಾಜು ಮಾತನಾಡಿ ಮನುಷ್ಯನ ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ. ಇಂತಹ ಮಹಿಳೆಯರಲ್ಲಿ ಅದ್ಬುತವಾದ ಶಕ್ತಿ ಆಡಗಿರುವ ಜೊತೆಗೆ ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವಾನ ಗುಣಗಳನ್ನು ಹುಟ್ಟಿನಿಂದಲೇ ಪಡೆದು ಬಂದಿರುತ್ತಾರೆ ಕೃಷಿ ಕೆಲಸಗಳಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು, ಸಮಾಜದಲ್ಲಿ ಇಂದು ಮಹಿಳೆಯರಿಗೆ ಪ್ರಾಧಾನ್ಯತೆ ಸ್ಥಾನಮಾನಗಳನ್ನು ನೀಡಿ ಗೌರವಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಡಾ.ಸಂಜೀವ್ ಮೂರ್ತಿ ಮತ್ತು ಡಾ.ಮಹರಾಜುರವರನ್ನು ರೆಡ್ಸ್ ಸಂಸ್ಥೆಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಜನ್ ಪಂಚಾಯ್ತಿಯ ತಾಲೂಕು ಸಂಚಾಲಕ ಕೋಟೆಕಲ್ಲಪ್ಪ, ಗ್ರಾ.ಪಂ.ಸದಸ್ಯ ನಾಗರಾಜು, ಐಡಿಹಳ್ಳಿ ಮಂಜು, ಮುದ್ದಹನುಮಯ್ಯ, ಆದಿ ಲಕ್ಷ್ಮಮ್ಮ, ಸರೋಜಮ್ಮ, ಸಿದ್ದಲಿಂಗಮ್ಮ, ಧನಲಕ್ಷ್ಮೀ, ಲಲಿತಮ್ಮ, ಗಂಗಮ್ಮ, ಚೌಡಮ್ಮ, ಹನುಮಕ್ಕ ಹಾಗೂ ಮತ್ತಿತರರು ಹಾಜರಿದ್ದರು.