ಶಿರಾದಲ್ಲಿ ರೇಷ್ಮೆ ಉಪಮಾರುಕಟ್ಟೆ, ನೂಲು ತೆರೆಯುವ ಘಟಕ ಸ್ಥಾಪನೆ: ಎಸ್.ಆರ್.ಗೌಡ
ಶ್ರೀ ವಿವೇಕಾನಂದ ಕ್ರೀಡಾಂಗಣದ ಮೂಲಭೂತ ಸೌಲಭ್ಯಕ್ಕೆ 50 ಲಕ್ಷ ರೂ. ಮಂಜೂರು
ಶಿರಾ : ಶಿರಾ ನಗರದಲ್ಲಿ ರೇಷ್ಮೆ ಮಾರಾಟ ಮಾಡುವ ಉಪಕೇಂದ್ರ ಸ್ಥಾಪನೆ, ರೇಷ್ಮೆ ನೂಲು ತೆಗೆಯುವ ಘಟಕದ ಸ್ಥಾಪನೆ ಹಾಗೂ ರೇಷ್ಮೆ ಬೆಳೆಗಾರರು ನಿರ್ಮಿಸಿರುವ ರೇಷ್ಮೆ ಹುಳು ಸಾಕಾಣಿಕಾ ಮನೆಗಳಿಗೆ ಸಹಾಯಧನ ಮಂಜೂರು ಮಾಡುವಂತೆ ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಅವರು ರೇಷ್ಮೆ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ನಾರಾಯಣಗೌಡ ಅವರಿಗೆ ಮನವಿ ಮಾಡಿದರು.
ಬೆಳಗಾವಿಯ ಸುವರ್ಣಸೌದದಲ್ಲಿ ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ರೇಷ್ಮೆ ಇಲಾಖೆ, ರೇಷ್ಮೆ ಉದ್ಯಮಗಳ ನಿಗಮ ಹಾಗೂ ರೇಷ್ಮೆ ಮಾರಾಟ ಮಂಡಳಿಯ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಏರ್ಪಡಿಸಿದ ಸಭೆಗೆ ಭಾಗವಹಿಸಿ ಮಾತನಾಡಿದರು.
ರೇಷ್ಮೆ ಉತ್ಪಾದನ ಘಟಕ ಸ್ಥಾಪನೆ: ಶಿರಾ ತಾಲ್ಲೂಕಿನಲ್ಲಿ ಅತ್ಯಂತ ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆಯುವ ಪ್ರದೇಶವಾಗಿದೆ. ಮತ್ತು ತಾಲ್ಲೂಕಿನ ಯುವಕ ಮತ್ತು ಯುವತಿಯರು ನಿರುದ್ಯೋಗ ಸಮಸ್ಯೆಯಿಂದ ಜೀವನ ನಿರ್ವಹಣೆಗೆ ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಜೊತೆಗೆ ಕೆ.ಎಸ್.ಐ.ಸಿ. ನಿಗಮಕ್ಕೆ ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಉತ್ಪಾದಿಸಲು ಗುಣಮಟ್ಟದ ನೂಲಿನ ಅವಶ್ಯಕತೆ ಇದೆ. ಆದ್ದರಿಂದ ಶಿರಾ ನಗರದಲ್ಲಿ ಕೆ.ಎಸ್.ಐ.ಸಿ. ನಿಗಮದ ವತಿಯಿಂದ ರೇಷ್ಮೆ ನೂಲು ಉತ್ಪಾದಿಸುವ ಘಟಕ ಸ್ಥಾಪನೆ ಮಾಡುವುದರಿಂದ ಅನುಕೂಲವಾಗುತ್ತದೆ. ಆದ್ದರಿಂದ ತುರ್ತಾಗಿ ಶಿರಾ ನಗರದಲ್ಲಿ ರೇಷ್ಮೆ ನೂಲು ಉತ್ಪಾದನ ಗಟಕ ಸ್ಥಾಪಿಸುವಂತೆ ರೇಷ್ಮೆ ಸಚಿವರಿಗೆ ಮನವಿ ಮಾಡಿದರು.
ರೇಷ್ಮೆ ಗೂಡು ಮಾರಾಟ ಸೇವಾ ಕೇಂದ್ರ ಸ್ಥಾಪನೆಗೆ ಮನವಿ: ತುಮಕೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಗುಣಮಟ್ಟದ ಅತಿ ಹೆಚ್ಚು ರೇಷ್ಮೆ ಗೂಡನ್ನು ಬೆಳೆಯುವ ಪ್ರದೇಶವಾಗಿದ್ದು, ರೈತರು ಬೆಳೆದ ಗೂಡನ್ನು ಮಾರಾಟ ಮಾಡಲು ದೂರದ ರಾಮನಗರಕ್ಕೆ ಹೋಗುವ ಸ್ಥಿತಿ ಅನಿವಾರ್ಯವಾಗಿದೆ. ಆದ್ದರಿಂದ ರೈತರು ಉತ್ಪಾದಿಸಿದ ರೇಷ್ಮೆ ಗೂಡಿನ ಸಾಗಾಣಿಕೆಯ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದು, ಮತ್ತು ರೈತರಿಗೆ ಅನವಶ್ಯಕವಾದ ಖರ್ಚುಗಳು ಹೆಚ್ಚಾಗಿ ಉತ್ಪಾದನಾ ವೆಚ್ಚವು ಸಹ ಹೆಚ್ಚಗುತಿದೆ. ಈ ಹಿಂದೆ ರೇಷ್ಮೆ ಸಚಿವರು ಶಿರಾ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ತೆರೆಯುವ ಬಗ್ಗೆ ಭರವಸೆ ನೀಡಿದ್ದರು. ಆದ್ದರಿಂದ ಶೀಘ್ರ ರೇಷ್ಮೆ ಗೂಡು ಮಾರಾಟ ಕೇಂದ್ರ ಸ್ಥಾಪಿಸಬೆಕೆಂದು ಮನವಿ ಮಾಡಿದರು.
ರೇಷ್ಮೆ ಹುಳು ಸಾಕಾಣಿಕೆಗೆ ಮನೆ ಮಂಜೂರು ಮಾಡಲು ಮನವಿ: ಶಿರಾ ತಾಲ್ಲೂಕಿನಲ್ಲಿ ರೈತರು ರೇಷ್ಮೆ ಹುಳು ಸಾಕಾಣಿಕೆಗೆ ಮನೆಗಳನ್ನು ನಿರ್ಮಾಣ ಮಾಡಿದ್ದು, ಇದುವರೆಗೂ ಸರ್ಕಾರದಿಂದ ಸಹಾಯಧನ ಮಂಜೂರಾಗಿರುವುದಿಲ್ಲ. ಮತ್ತು ಸದರಿ ಸಮಸ್ಯೆಯನ್ನು ಇತ್ತೀಚಿಗೆ ಸಚಿವರು ಶಿರಾ ನಗರಕ್ಕೆ ಭೇಟಿ ನೀಡಿದಾಗ ತಮ್ಮ ಗಮನಕ್ಕೆ ತರಲಾಗಿದೆ. ಆದ್ದರಿಂದ ತುರ್ತಾಗಿ ರೇಷ್ಮೆ ಹುಳು ಸಾಕಾಣಿಕೆಗೆ ಮನೆ ನಿರ್ಮಾಣ ಮಾಡಿರುವ ರೈತರಿಗೆ ಸಹಾಯಧನ ನೀಡುವುದರ ಜೊತೆಗೆ ಇನ್ನೂ ಹೆಚ್ಚುವರಿ ರೇಷ್ಮೆ ಹುಳು ಸಾಕಾಣಿಕ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಅವರು ಮನವಿ ಮಾಡಿದರು.
ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಕ್ಕೆ 50 ಲಕ್ಷ ಮಂಜೂರು: ಶಿರಾ ನಗರಕ್ಕೆ ರೇಷ್ಮೆ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ನಾರಾಯಣಗೌಡ ಅವರು ಆಗಮಿಸಿದ್ದ ಸಂದರ್ಭದಲ್ಲಿ ಶ್ರೀ ವಿವೇಕಾನಂದ ಕ್ರೀಡಾಂಗಣಕ್ಕೆ ಆಗಮಿಸಿ ಅಲ್ಲಿಗೆ ಹೊಸದಾಗಿ ಜಿಮ್ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಭರವಸೆ ನೀಡಿದ್ದರ ಬಗ್ಗೆ ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಅವರು ಚರ್ಚಿಸಿ ಕ್ರೀಡಾಂಗಣದ ಮೂಲಭೂತ ಸೌಕರ್ಯಕ್ಕೆ 50 ಲಕ್ಷ ರೂ. ಮಂಜುರು ಮಾಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ಆಪ್ತಕಾರ್ಯದರ್ಶಿ ಎಚ್.ಜಿ ಪ್ರಭಾಕರ್, ರೇಷ್ಮೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ರಾಜೇಂದರ್ ಕುಮಾರ್ ಕಟಾರಿಯಾ, ಇಲಾಖೆಯ ಆಯುಕ್ತರಾದ ಪೆದ್ದಪಯ್ಯ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಕೆ.ಎನ್. ಅನುರಾಧ, ಕನಗವಲ್ಲಿ, ಪ್ರಧಾನ ವ್ಯವಸ್ಥಾಪಕ ಭೀಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.