ಶಿರಾ ನಗರಸಭಾ ಚುನಾವಣೆ: 31 ಅಭ್ಯರ್ಥಿಗಳಿಂದ ನಾಮಪತ್ರ ಹಿಂತೆಗೆತ
ಶಿರಾ : ಶಿರಾ ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ಶನಿವಾರ 31 ನಾಮಪತ್ರಗಳನ್ನು ಅಭ್ಯರ್ಥಿಗಳು ವಾಪಸ್ಸು ಪಡೆದಿದ್ದು, ವಿವಿಧ ಪಕ್ಷಗಳಿಂದಹಾಗೂ ಪಕ್ಷೇತರರಾಗಿ ಅಂತಿಮವಾಗಿ 206 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 291 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಅವುಗಳಲ್ಲಿ 54 ತಿರಸ್ಕೃತ ಗೊಂಡು 237 ಅಭ್ಯರ್ಥಿಗಳ ನಾಮಪತ್ರ ಪುರಸ್ಕೃತ ಆಗಿದ್ದವು. ಶನಿವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದರಿಂದ ಒಟ್ಟು 31 ನಾಮಪತ್ರಗಳನ್ನು ಅಭ್ಯರ್ಥಿಗಳು ಹಿಂಪಡೆದಿದ್ದಾರೆ. ಒಟ್ಟಾರೆ 31 ವಾರ್ಡುಗಳಿಂದ 206 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಗರಸಭೆ ಚುನಾವಣೆ ನಾಮಪತ್ರ ಹಿಂಪಡೆಯಲು ಇಂದು ಕಡೆಯದಿನವಾಗಿದ್ದು. ಅವಧಿ ಮುಗಿದ ನಂತರ ಸ್ಪರ್ಧೆಯಲ್ಲಿ ಉಳಿದಿರುವಅಭ್ಯರ್ಥಿಗಳು ಕ್ರಮ ಸಂಖ್ಯೆ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಚಿನ್ಹೆ ಗಳಿಗಾಗಿ ನಗರಸಭೆಯಲ್ಲಿ ಆಯಾ ವಾರ್ಡಿನ ರಿಟರ್ನಿಂಗ್ ಹಾಗೂ ಸಹಾಯಕ ರಿಟರ್ನಿಂಗ್ ಚುನಾವಣೆ ಅಧಿಕಾರಿಗಳ ಕೊಠಡಿಗಳ ಮುಂದೆ ಉತ್ಸಾಹದಿಂದ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಂದೇ ಚಿನ್ಹೆಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಮೊದಲನೇ ಪ್ರಾಶಸ್ತ್ಯ ನೀಡಿದ್ದಾಗ ಲಾಟರಿ ಮೂಲಕ ಚಿನ್ಹೆಯನ್ನು ನೀಡಲಾಗುತ್ತಿತ್ತು.ವಾರ್ಡ್ ನಂಬರ್ 13ರಲ್ಲಿ 11 ಜನಗಳು ಸ್ಪರ್ಧೆಯಲ್ಲಿ ಉಳಿದು ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿರುವ ವಾರ್ಡ್ ಆಗಿದೆ. ವಾರ್ಡ್ ನಂಬರ್ 17ರಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದು ಅತಿ ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿರುವ ವಾರ್ಡ್ ಆಗಿ ಉಳಿದಿದೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ನಾಮಪತ್ರವನ್ನು ವಾಪಸ್ಸು ಪಡೆಯಲು ಅವರ ಮನವೊಲಿಸಿ ನಗರಸಭೆಗೆ ಕರೆದುಕೊಂಡು ಬಂದು ಹಿಂಪಡೆಯುವ ಕೆಲವರು ಯಶಸ್ವಿಯಾದರೆ ಇನ್ನು ಕೆಲವರು ವಿಫಲರಾಗಿದ್ದಾರೆ.