ಇಂದು ಗುಬ್ಬಿಯ ಚಿದಂಬರಾಶ್ರಮದಲ್ಲಿ ‘ನಕ್ಷತ್ರವನ’ ಲೋಕಾರ್ಪಣೆ

ಗುಬ್ಬಿ: ನಮ್ಮ ಧಾರ್ಮಿಕಾಚಾರಣೆಯಲ್ಲಿ ಬಹುಮುಖ್ಯ 27 ನಕ್ಷತ್ರಗಳ ಪಾತ್ರ ಅರಿತು ಚಿದಂಬರಾಶ್ರಮದಲ್ಲಿ ನಕ್ಷತ್ರವನ ನಿರ್ಮಿಸಿ ಆಯಾ ನಕ್ಷತ್ರ ಅನುಸಾರ ವೃಕ್ಷ ಬೆಳೆಸಿ ಎಲ್ಲಾ ಪೂಜಾ ಕೈಂಕರ್ಯ ನಡೆಸಲಾಗುವುದು. ಲೋಕ ಕಲ್ಯಾಣಕ್ಕೆ ಸಿದ್ಧಗೊಂಡ ಈ ವನವನ್ನು ಡಿ.19 ರಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಚಿದಂಬರಾಶ್ರಮ ಟ್ರಸ್ಟ್ ಕಾರ್ಯನಿರ್ವಾಹಕ ವಿಶ್ವಸ್ತ ಡಾ. ಸಚ್ಚಿದಾನಂದ ಎಸ್.ಸೋಗಲ ತಿಳಿಸಿದರು.
ಪಟ್ಟಣದ ಶ್ರೀ ಚಿದಂಬರಾಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ 83 ವರ್ಷದಿಂದ ಸನಾತನ ಧರ್ಮ ಉಳಿಸಿಕೊಂಡು ಶಿಕ್ಷಣ ಕ್ರಾಂತಿ ಮಾಡುತ್ತಿರುವ ಚಿದಂಬರಾಶ್ರಮ ಇಂದು ವಿವಿಧ ಮೈಲುಗಲ್ಲು ಸಾಧಿಸಲು ಹಂತವಾಗಿ ಸಾಗಿದೆ. ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಕಾರ್ಯ ನಡೆಸುತ್ತಿದ್ದೇವೆ ಎಂದರು.
ಪಾಠ ಪ್ರವಚನಕ್ಕೆ ಸೂಕ್ತ ವಾತಾವರಣ ಕಲ್ಪಿಸಿ ಚಿದಂಬರ ಪಬ್ಲಿಕ್ ಸ್ಕೂಲ್ ತೆರದು ಮಾತೃಭಾಷೆ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಒದಗಿಸಲಾಗುತ್ತಿದೆ. ಈ ಜತೆಗೆ ಸಂಸ್ಕೃತ ಕಲಿಕೆ ಎಲ್ಲಾ ಮಕ್ಕಳಿಗೂ ಲಭ್ಯಗೊಳಿಸಿರುವುದು ಇಲ್ಲಿನ ವಿಶೇಷ ಎನಿಸಿದೆ. ಗೋಶಾಲೆ ತೆರೆದು 14 ದೇಶಿ ತಳಿ ಹಸುಗಳನ್ನು ಸಲಹುತ್ತಿದ್ದು, ಪ್ರತಿ ವರ್ಷ ನಿರಾಮಯ ಹೆಸರಿನಲ್ಲಿ ಆರೋಗ್ಯ ಶಿಬಿರ ನಡೆಸಿ ಜಾಗೃತಿ ಕಾರ್ಯಕ್ರಮ ಕೂಡಾ ನಡೆಸಲಾಗುವುದು. ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಆರೋಗ್ಯ ಕಾರ್ಡ್ ನೀಡಿ ಉತ್ತಮ ಆರೋಗ್ಯ ನೀಡುವ ಕಾರ್ಯಕ್ಕೆ ಸ್ವಇಚ್ಛೆಯಿಂದ ಡಾ. ಪ್ರೀತಿ ಮುಂದಾಗಿದ್ದಾರೆ ಎಂದು ತಿಳಿಸಿದ ಅವರು ಪಬ್ಲಿಕ್ ಸ್ಕೂಲ್ ಸಂಪೂರ್ಣ ಗಣಕೀಕರಣಗೊಳಿಸಿದ್ದು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದರು.
ಪ್ರತಿವರ್ಷದಂತೆ ಆಶ್ರಮದಲ್ಲಿ ಶ್ರೀ ದತ್ತ ಜಯಂತಿ ಕಾರ್ಯಕ್ರಮ ಕೋವಿಡ್ ನಿಯಮಾವಳಿಗಳಂತೆ ಹಮ್ಮಿಕೊಳ್ಳಲಾಗಿದೆ. ಆರು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಗೀತಾಜಯಂತಿ, ಹನುಮ ಜಯಂತಿ ಹಾಗೂ ಪವನ ಹೋಮ ನಡೆಸಲಾಗಿದೆ. ನಕ್ಷತ್ರ ಹೋಮ ನಡೆಸಿ ಇದೇ ತಿಂಗಳ 19 ರಂದು ವನ ಉದ್ಘಾಟಿಸಿ ನಂತರ ದತ್ತ ಜಯಂತಿ ನಡೆಸಲಾಗುವುದು. ಡಿ.20 ರಂದು ದತ್ತ ಹೋಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮವು ಆಶ್ರಮದ ಅಧ್ಯಕ್ಷ ಶಿವಚಿದಂಬರಶರ್ಮ ನೇತೃತ್ವ ವಹಿಸಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಚಿದಂಬರಾಶ್ರಮ ಅಧ್ಯಕ್ಷ ಶಿವಚಿದಂಬರಶರ್ಮ, ಪಬ್ಲಿಕ್ ಸ್ಕೂಲ್ ನ ಶ್ರೀರಾಮ ಶಂಕರ್, ಮುಖ್ಯ ಶಿಕ್ಷಕ ಜಗದೀಶ್, ಅನಂತರಾಜು, ಡಾ.ಪ್ರೀತಿ ಇತರರು ಇದ್ದರು.