ಗೌಪ್ಯ ಪ್ರವಾಸದಿಂದ ರೈತರ ಕಷ್ಟ ತಿಳಿಯುತ್ತಾ..? ಕೇಂದ್ರ ತಂಡಕ್ಕೆ ರೈತ ಸಂಘಟನೆಗಳ ಮುಖಂಡರ ಪ್ರಶ್ನೆ
ಗುಬ್ಬಿ : ಇಡೀ ಜಿಲ್ಲೆಯಲ್ಲಿ ರಾಗಿ ಸೇರಿದಂತೆ ತೋಟಗಾರಿಕೆ ಬೆಳೆ, ಜಾನುವಾರು ಹಾಗೂ ರೈತರ ಮನೆಗಳು ಧರೆಗುರುಳಿವೆ. ಆದರೆ ಅಧ್ಯಯನ ಹೆಸರಿನಲ್ಲಿ ಗೌಪ್ಯ ಪ್ರವಾಸ ಮಾಡುವ ತಂಡ ರೈತರ ಸಂಕಷ್ಟ ಹೇಗೆ ತಿಳಿಯುತ್ತಾರೆ. ಈ ಜತೆಗೆ ಅವೈಜ್ಞಾನಿಕ ಬೆಳೆ ಪರಿಹಾರ ನಿಗದಿ ಮಾಡುತ್ತಾರೆ. ಕೇವಲ ಬಿತ್ತನೆ ನಷ್ಟ ಎಂದು ಹೇಳಿ ಭಿಕ್ಷೆ ನೀಡಲು ಮುಂದಾಗಿದ್ದಾರೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಕಿಡಿಕಾರಿದರು.
ತಾಲ್ಲೂಕಿನ ಎಂ.ಎಚ್.ಪಟ್ಟಣ ಗ್ರಾಮದ ಬಳಿ ಬೆಳೆ ನಷ್ಟ ವೀಕ್ಷಣೆಗೆ ಆಗಮಿಸಿದ ಕೇಂದ್ರ ಅಧ್ಯಯನ ತಂಡದೊಂದಿಗೆ ಚರ್ಚಿಸಿದ ಅವರು ಜನ ಪ್ರತಿನಿಧಿಗಳು ಬೆಳಗಾವಿ ಅಧಿವೇಶನದಲ್ಲಿ ಇರುವ ಈ ಸಂದರ್ಭದಲ್ಲಿ ಭೇಟಿ ನೀಡುವ ಈ ತಂಡ ರೈತರಿಗೆ ಮಾಹಿತಿ ನೀಡದೆ ಗೌಪ್ಯ ಅಧ್ಯಯನ ನಡೆಸುವುದು ಎಷ್ಟು ಸರಿ ಇದೆ. ರೈತರನ್ನೇ ಮಾತನಾಡಿಸದೆ ಸಂಕಷ್ಟ ಹೇಗೆ ಅರಿಯಲು ಸಾಧ್ಯ. ಕೃಷಿಗೆ ಆಗಿರುವ ವ್ಯಯ ಮತ್ತು ನಷ್ಟದ ಅಂದಾಜು ರೈತರಿಂದಲೇ ಪಡೆಯಬೇಕು ಎಂದು ಒತ್ತಾಯಿಸಿದರು.
ಇಡೀ ಜಿಲ್ಲೆಯೇ ನೆರೆ ಹಾವಳಿಗೆ ತುತ್ತಾಗಿದೆ. ರಾಗಿ ಶೇಕಡಾ 85 ರಷ್ಟು ನಷ್ಟವಾಗಿದೆ. ಈ ಜೊತೆಗೆ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇವಲ ಕೃಷಿ ಬಿತ್ತನೆ ಅಷ್ಟೇ ಲೆಕ್ಕ ಹಾಕುವುದು ಯಾವ ಮಾನದಂಡ. ಹೆಕ್ಟೇರ್ ಗೆ 6300 ರೂ ನೀಡಿದ್ದಲ್ಲಿ ರೈತನ ನಷ್ಟ ತುಂಬಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಒಂದು ಎಕರೆ ರಾಗಿ ಕೃಷಿಗೆ 20 ಸಾವಿರಕ್ಕೂ ಅಧಿಕ ವ್ಯಯವಾಗಲಿದೆ. ಸದ್ಯ ಕಟಾವಿಗೆ ಬಂದ ಬೆಳೆ ಪಡೆಯಲು 13 ಸಾವಿರ ರೂ ಬೇಕು. ಆದರೆ ಬ್ರಿಟಿಷರ ಕಾಲದ ಮಾನದಂಡ ಬಳಸಿ ಪರಿಹಾರ ನೀಡುತ್ತಾರೆ. ಈ ರೀತಿಯ ಅವೈಜ್ಞಾನಿಕ ಪರಿಹಾರ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಚರ್ಚಿಸಿದರು.
ಎಲ್ಲಾ ಮನವಿ ಆಲಿಸಿದ ತಂಡ ವಸ್ತು ಸ್ಥಿತಿ ಅರಿವಿಗೆ ಧಿಡೀರ್ ಭೇಟಿ ನೀಡುತ್ತೇವೆ. ದಾಖಲೆಗಳ ದೃಢಪಡಿಸಿಕೊಳ್ಳಲು ಅಯ್ಮೆ ಮಾಡಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಅಧ್ಯಯನ ನಂತರ ಪರಿಹಾರ ನಿರ್ಧಾರವಾಗಲಿದೆ. ಸದ್ಯ ಬಿತ್ತನೆ ನಷ್ಟವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸುಶೀಲ್ ಪಾಲ್ ನೇತೃತ್ವದ ಈ ತಂಡದಲ್ಲಿ ಡಾ. ಸುಭಾಷ್ ಚಂದ್ರ, ಡಾ. ಮನೋಜ್ ರಾಜನ್ ಇದ್ದರು. ಜಿಲ್ಲಾಧಿಕಾರಿ ಡಾ.ವೈ. ಎಸ್.ಪಾಟೀಲ್, ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಅಜಯ್, ಕೃಷಿ ಉಪ ನಿರ್ದೇಶಕ ಬಿ.ಶಿವರಾಜ್, ತೋಟಗಾರಿಕೆ ಉಪ ನಿರ್ದೇಶಕ ಬಿ.ಕೆ.ದುಂಡಿ, ತಹಶೀಲ್ದಾರ್ ಬಿ.ಆರತಿ, ರೈತ ಸಂಘದ ಸಿ.ಜಿ.ಲೋಕೇಶ್, ಗಂಗರೇವಣ್ಣ, ಸತ್ತಿಗಪ್ಪ, ದಾಸೇಗೌಡ, ಕನ್ನಿಗಪ್ಪ ಇತರರು ಇದ್ದರು.