ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲು ಕೇಂದ್ರ ಸರ್ಕಾರದಿಂದ 700 ಕೋಟಿ ವೆಚ್ಚ: ಎಸ್.ಆರ್.ಗೌಡ
ಶಿರಾ ಪಶು ಇಲಾಖೆ ಆವರಣದಲ್ಲಿ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ
ಶಿರಾ : ದೇಶದಲ್ಲಿ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಜಾನುವಾರುಗಳಿಗೆ ದೇಶಾದ್ಯಾಂತ ಲಸಿಕೆ ಹಾಕಲು ಸುಮಾರು 700 ಕೋಟಿಯಷ್ಟು ಹಣ ವೆಚ್ಚ ಮಾಡಿದೆ ಎಂದು ರಾಜ್ಯ ರೇಷ್ಮೆ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ಅವರು ನಗರದ ಪಶು ಇಲಾಖೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಲಸಿಕಾ ಅಭಿಯಾನ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಶಿರಾ ತಾಲ್ಲೂಕಿನ ಹಲವು ಭಾಗಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡು ಅದು ದ್ವಿಗುಣವಾಗಿತ್ತು. ಈ ಬಗ್ಗೆ ಹಲವಾರು ರೈತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಶು ಇಲಾಖೆಯ ನಿರ್ದೇಶಕರಾದ ಮಣಿವಣ್ಣನ್ ಅವರು ತಾಲ್ಲೂಕಿನಲ್ಲಿ ರೋಗ ಹರಡದಂತೆ ಮಾಡಲು ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪಶು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ತಾಲ್ಲೂಕಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಯಲು ಸೀಮೆಯ ಪ್ರದೇಶದಲ್ಲಿ ರೈತರ ಜೀವನಾಡಿ ರಾಸುಗಳು. ರಾಸುಗಳು ಮೃತಪಟ್ಟರೆ ರೈತರು ಆರ್ಥಿಕವಾಗಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ರಾಸುಗಳಿಗೆ ಕಾಲುಬಾಯಿ ರೋಗ ಹೆಚ್ಚು ಮರುಕಳಿಸದಂತೆ ತಡೆಗಟ್ಟಲು. ವೈದ್ಯಾಧಿಕಾರಿಗಳು 20 ದಿನಗಳಲ್ಲಿ ತಾಲ್ಲೂಕಿನಾದ್ಯಂತ 53 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದಾರೆ. ರೈತರು ತಮ್ಮ ಊರುಗಳಿಗೆ ಪಶು ಇಲಾಖೆಯ ಅಧಿಕಾರಿಗಳು ಆಗಮಿಸಿದಾಗ ಅವರಿಗೆ ಸಂಪೂರ್ಣವಾದ ಸಹಕಾರ ಕೊಡಬೇಕು. ಊರಿನ ಒಂದು ಸ್ಥಳದಲ್ಲಿ ರಾಸುಗಳನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿರಾ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ಎಸ್.ರಮೇಶ್, ಪಶು ವೈದ್ಯಾಧಿಕಾರಿಗಳಾದ ಡಾ.ಜೆ.ಸಿ.ಮಂಜುನಾಥ್, ಎಸ್.ಟಿ.ತಿಮ್ಮಣ್ಣ, ಮಂಜುನಾಥ್, ಸುರೇಶ್, ಅಜ್ಜಣ್ಣ, ರಮೇಶ್, ಸರೋಜ, ದಿನೇಶ್, ಲಾವಣ್ಯ, ವಿನೋದ್‌ಕುಮಾರ್, ಹೇಮಶ್ರೀ, ನವೀನ್, ತಿಮ್ಮರಾಜು ಮತ್ತಿತರರು ಹಾಜರಿದ್ದರು.