ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರ ಮದಲೂರು ಕೆರೆಗೆ ನೀರು ಹರಿಸಿರುವುದು ಹರ್ಷ ತಂದಿದೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ಶಿರಾ : ಶಿರಾ ಕ್ಷೇತ್ರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತ ಈ ಕಳ್ಳಂಬೆಳ್ಳ ಕೆರೆ ಮತ್ತು ಶಿರಾ ದೊಡ್ಡ ಕೆರೆ ಭರ್ತಿಯಾಗಿ ಕೊಡಿ ಬಿದ್ದ ಕಾರಣ ಗಂಗೆ ಬಾಗಿನ ಒಂದೆಡೇಯಾದರೆ, ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಮೂಲಕ ಮತ್ತೊಮ್ಮೆ ಕೊಟ್ಟ ಮಾತಿನಂತೆ ನಡೆದು ಕೊಂಡಿರುವುದು ನನ್ನ ರಾಜಕೀಯ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅನ್ನಧಾತರ ಒತ್ತಾಸೆಯಂತೆ 60.ದಿನಗಳ ಕಾಲ ಮದಲೂರು ಕೆರೆಗೆ ನೀರು ಹರಿಯಲಿದ್ದು, ಗೌಡಗೆರೆ ಮತ್ತು ಹುಲಿಕುಂಟೆ ಹೊಬಳಿಗಳ ನೂರಾರು ಹಳ್ಳಿಗಳ ಅಂತರ್ಜಲ ಮಟ್ಟ ಸುಧಾರಣೆ ಕಾಣಲಿದೆ. ಇದರಿಂದ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ನಿಗಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹರ್ಷ ವ್ಯಕ್ತ ಪಡಿಸಿದರು.
ಅವರು ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯ ಹಿನ್ನಿರಿನ ಪ್ರದೇಶದಲ್ಲಿರುವ ಕಾಲುವೆ ಮೂಲಕ ಮದಲೂರು ಕೆರೆಗೆ ನೀರು ಹರಿಸುವಂತ ಕಾರ್ಯಕ್ಕೆ ಗಂಗಾಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು. ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ ಸರ್ಕಾರ ಮತ್ತು ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂಬ ಪ್ರತಿ ಪಕ್ಷಗಳ ಆರೋಪಕ್ಕೆ ಈ ದಿನ ಮದಲೂರು ಕೆರೆಗೆ ನೀರು ಹರಿಸುವ ಮೂಲಕ ಉತ್ತರ ನೀಡಿದ್ದೇವೆ. ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಈ ರಾಜೇಶ್ ಗೌಡರನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ ನಿಮ್ಮ ನಿರೀಕ್ಷೆ ಹುಸಿ ಮಾಡದಂತೆ ಕೆಲಸ ಮಾಡಿ ಶಿರಾ ಸಂಮೃದ್ಧ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡುತ್ತೆನೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತಾನಾಡಿ ಕಳ್ಳಂಬೆಳ್ಳ, ಶಿರಾ ದೊಡ್ಡಕೆರೆ ಹಾಗೂ ಮದಲೂರು ಕೆರೆಗಳು ಶಿರಾ ತಾಲೂಕಿನ ಅಂತರ್ಜಲ ಮಟ್ಟ ಸುಧಾರಣೆಯಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ. ಇನ್ನೂ 3.ವರ್ಷ ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಇರುವುದಿಲ್ಲ. ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿರುವುದು ಜನತೆಯಲ್ಲಿ ಹರ್ಷ ಮೂಡಿಸಿದೆ ಎಂದರು.
ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡಕೆರೆ ಕೊಡಿ ಬಿದ್ದ ಪರಿಣಾಮ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ರೇಷ್ಮೆ ಆಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ., ರಾಜ್ಯ ನಾರು ಆಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಸೀಲ್ದಾರ್ ಮಮತ, ಬಿಜೆಪಿ ನಗರ ಘಟಕ ಅಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಯ್ಯ, ಮುಖಂಡರಾದ ಮುದಿಮಡು ಮಂಜುನಾಥ್, ಸಂತೆಪೇಟೆ ರಮೇಶ್, ಸುಧಾಕರ ಗೌಡ, ಮಾಲಿ ಸಿ.ಎಲ್‌ಗೌಡ, ಮಂಜುನಾಥ್, ವೆಂಕಟೇಶ್, ಹೊನ್ನೆಗೌಡ, ತಿಮ್ಮಣ್ಣ ಸೇರಿದಂತೆ ಹಲವರು ಹಾಜರಿದ್ದರು.