ಸಾಂಸ್ಕೃತಿಕವಾಗಿ ವಿಶಿಷ್ಟ ಸ್ಥಾನ ಪಡೆದಿರುವ ಸಾಂಪ್ರದಾಯಿಕ ಬೆಳೆ ರೇಷ್ಮೆ (ಹಿಪ್ಪುನೇರಳೆ) ಕೃಷಿಯಿಂದ ಅನ್ನದಾತನ ಬದಕು ಬದಲಾಗಲಿದ್ದು, ರೈತನ ಆರ್ಥಿಕ ಸಬಲೀಕರಣಕ್ಕೆ ಈ ರೇಷ್ಮೆ ಕಸುಬು ಮುಖ್ಯ ಬೇಸಾಯವಾಗಿದೆ.
ಟಿಪ್ಪು ಸುಲ್ತಾನ್ ಮತ್ತು ಮೈಸೂರು ರಾಜ ಒಡೆಯರ ರಾಜಾಶ್ರಯದಲ್ಲಿ ವೈಭವವಾಗಿ ಬೆಳೆದು ಬಂದಿರುವ ರೇಷ್ಮೆ ಕೃಷಿಯು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಖ್ಯ ಬೆಳೆಯಾಗಿ ಅಗ್ರಸ್ಥಾನ ಪಡೆದಿದ್ದು, ತುಮಕೂರು ಜಿಲ್ಲೆಯಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಜಿಲ್ಲೆಯ ತೆಂಗು, ಅಡಕೆಯಂತಹ ಮುಖ್ಯ ಬೆಳೆಗಳಂತೆಯೇ ರೇಷ್ಮೆ ಕೃಷಿಯೂ ತನ್ನ ಸಿರಿಯನ್ನು ಹಿರಿದಾಗಿಸಿಕೊಳ್ಳುತ್ತಿದೆ.
ಆರಂಭದಲ್ಲಿ ಹಿಪ್ಪುನೇರಳೆ ಕೃಷಿಯನ್ನು ಅಳವಡಿಸಿಕೊಳ್ಳಲು ಒಲ್ಲೆ ಎನ್ನುತ್ತಿದ್ದ ಬಹುತೇಕ ರೈತರು ಇಂದು ರೇಷ್ಮೆ ಕೃಷಿಯಲ್ಲಿಯೇ ಖುಷಿ ಕಂಡುಕೊಂಡಿದ್ದಾರೆ. ಕೃಷಿ ಕ್ಷೇತ್ರವು ಆಧುನೀಕರಣಕ್ಕೆ ಒಗ್ಗಿಕೊಳ್ಳುವುದಕ್ಕೂ ಮೊದಲು ರೇಷ್ಮೆ ಕೃಷಿ ಎಂದರೆ ರೈತರು ಹಿಂಜರಿಯುತ್ತಿದ್ದರು. ಆದರೆ, ಪ್ರಸ್ತುತ ರೇಷ್ಮೆ ಕೃಷಿಯಲ್ಲಿಯೂ ತಾಂತ್ರಿಕತೆ ಅಳವಡಿಸಿಕೊಂಡಿರುವುದರಿಂದ ಈ ಕೃಷಿ ಸುಲಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೇಷ್ಮೆ ಬೇಸಾಯಕ್ಕೆ ತೊಡಗಿಕೊಳ್ಳುತ್ತಿದ್ದಾರೆ.
ರೇಷ್ಮೆ ಬೇಸಾಯದಲ್ಲಿ ತೊಡಗಿಕೊಳ್ಳುವುದೆಂದರೆ ರೋಮಾಂಚನಕಾರಿಯೇ ಸರಿ. ರೇಷ್ಮೆ ಹುಳು ಸಾಕಾಣಿಕೆಯಿಂದ ಹಿಡಿದು ಹುಳು ಗೂಡು ಕಟ್ಟುವುದು, ಗೂಡು ಕಟ್ಟಿದ ಬಳಿಕ ಚಂದ್ರಿಕೆಯಲ್ಲಿನ ಕಾರ್ಯಚಟುವಟಿಕೆ ಕಾಯಕವೇ ಒಂಥರ ಖುಷಿ ಕೊಡುತ್ತದೆ.
ರೇಷ್ಮೆ ಕೃಷಿಯು ರೇಷ್ಮೆ ಉತ್ಪಾದನೆ ಹಾಗೂ ನೂಲು ಬಿಚ್ಚಾಣಿಕೆಗಳನ್ನು ಒಳಗೊಂಡಿದ್ದು, 250 ವರ್ಷಗಳ ಹಿಂದಿನಿಂದಲೂ ಪ್ರಚಲಿತವಾಗಿದೆ. ಈ ಕೃಷಿಯು ಕಾರ್ಮಿಕ ಪ್ರಧಾನ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾದ ಪ್ರಮುಖ ಕಸುಬಾಗಿದೆ.
ರೇಷ್ಮೆ ಉತ್ಪನ್ನಗಳ ವಹಿವಾಟಿನಿಂದ ಗ್ರಾಮೀಣ ಪ್ರದೇಶದ ರೈತರಿಗೆ ಆರ್ಥಿಕ ಸದೃಢತೆ ತಂದುಕೊಡುತ್ತಿದ್ದು, ಶೇಕಡ 60ರಷ್ಟು ಕೆಲಸ ಮಹಿಳೆಯರೇ ನಿರ್ವಹಿಸುವುದರಿಂದ ಮಹಿಳೆಯರ ಸಬಲೀಕರಣದಲ್ಲೂ ರೇಷ್ಮೆ ಕೃಷಿ ಬಹು ಮುಖ್ಯ ಪಾತ್ರವಹಿಸಿದೆ.
ಜಿಲ್ಲೆಯಲ್ಲಿಯೂ ರೇಷ್ಮೆ ಕೃಷಿ ವಿಸ್ತರಣೆ:-
ಪ್ರಸ್ತುತ ತುಮಕೂರು ಜಿಲ್ಲೆ ಒಟ್ಟು ಹತ್ತು ತಾಲ್ಲೂಕುಗಳಿಂದ ಸುಮಾರು ಹತ್ತು ಸಾವಿರ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಜಿಲ್ಲೆಯ ರೇಷ್ಮೆ ಕೃಷಿಯು ವಿಶೇಷವಾಗಿದೆ. ಜಿಲ್ಲೆಯಲ್ಲಿ ಉತ್ಪಾದಿಸುವ ಒಟ್ಟು ಗೂಡಿನಲ್ಲಿ ಮುಖ್ಯವಾಗಿ ಶೇ.58ರಷ್ಟು ದ್ವಿತಳಿ ಗೂಡು ಬೆಳೆಯಲಾಗುತ್ತಿದೆ. ಅಲ್ಲದೆ, ಕರ್ನಾಟಕದಲ್ಲಿ ಕಂಡುಬರುವ ಎಲ್ಲಾ ರೀತಿಯ ರೇಷ್ಮೆ ತಳಿಯ ಗೂಡನ್ನು ಬೆಳೆಯುತ್ತಿರುವುದು ಮತ್ತೊಂದು ವಿಶೇಷ.
5128 ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ:-
ಜಿಲ್ಲೆಯಲ್ಲಿ ಪ್ರಸ್ತುತ 5128 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ವಿಸ್ತೀರ್ಣವಿದ್ದು, ದಕ್ಷಿಣ ಭಾರತದ ಶುದ್ಧ ಮೈಸೂರು ತಳಿಯನ್ನು ಕುಣಿಗಲ್ ತಾಲ್ಲೂಕು ಹಾಗೂ ತುಮಕೂರು ತಾಲ್ಲೂಕಿನ ಹೆಬ್ಬೂರು ಸೇರಿದಂತೆ ಜಿಲ್ಲೆಯ ಇತರೆ ತಾಲ್ಲೂಕಿನಲ್ಲಿಯೂ ಬೆಳೆಯಲಾಗುತ್ತಿದೆ.
ಪಾವಗಡ, ಮಧುಗಿರಿ, ಶಿರಾ, ಗುಬ್ಬಿ, ಕೊರಟಗೆರೆ ಹಾಗೂ ತುಮಕೂರು ತಾಲ್ಲೂಕುಗಳ ರೈತರು ವಾಣಿಜ್ಯ ಗೂಡುಗಳಾದ ದ್ವಿತಳಿ ಸಂಕರಣ ಮತ್ತು ಮಿಶ್ರತಳಿ ಬೆಳೆಯುತ್ತಿರುವುದರ ಜೊತೆಗೆ ಬೈವೋಲ್ಟೆನ್ ಸಂಕರಣ ಗೂಡುಗಳನ್ನು ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ. ಅದರಲ್ಲಿಯೂ ಪಾವಗಡ ತಾಲ್ಲೂಕಿನಲ್ಲಿ ಶೇ.75 ರಷ್ಟು ಅತಿ ಹೆಚ್ಚು ರೇಷ್ಮೆ ಕೃಷಿಕರು ಬೈವೋಲ್ಟೇನ್ ಸಂಕರಣ ಗೂಡು ಉತ್ಪಾದನೆ ಮಾಡುತ್ತಾ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.
ಪ್ರತಿ ವರ್ಷ ಒಂದು ಸಾವಿರ ಪ್ರದೇಶ ವಿಸ್ತರಣೆ:-
ಪ್ರಸಕ್ತ ಸಾಲಿನಿಂದ ಪ್ರತಿ ವರ್ಷ ಒಂದು ಸಾವಿರ ರೈತರು ಮತ್ತು ಒಂದು ಸಾವಿರ ಎಕರೆ ಹಿಪ್ಪು ನೇರಳೆ ವಿಸ್ತೀರ್ಣ ಹೆಚ್ಚು ಮಾಡಬೇಕೆಂಬ ಗುರಿ ಹೊಂದಲಾಗಿದ್ದು, 2021ರ ಆಗಸ್ಟ್ ಅಂತ್ಯಕ್ಕೆ 306 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಪ್ರಗತಿ ಸಾಧಿಸಲಾಗಿದೆ. ಈ ವರ್ಷಾಂತ್ಯಕ್ಕೆ ಕನಿಷ್ಠ 400 ಹೆಕ್ಟೇರ್ (1000 ಎಕರೆ) ಹೊಸನಾಟಿ ಮಾಡುವ ಗುರಿ ಹೊಂದಲಾಗಿದೆ.
ವಿಶೇಷವಾಗಿ ಮಹಾತ್ಮ ಗಾಂಧಿ ರಾಷ್ರಿö್ಟÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋವಿಡ್ ಸಂಕಷ್ಟದಿAದ ಬೆಂಗಳೂರು ಮತ್ತು ಇತರೆ ನಗರಗಳಿಗೆ ವಲಸೆ ಹೋಗಿ ಮರಳಿ ಬಂದ ಯುವಕರನ್ನು ರೇಷ್ಮೆ ಕೃಷಿಯಲ್ಲಿ ತೊಡಗುವಂತೆ ಗ್ರಾಮಸಭೆ, ಕ್ಷೇತ್ರೋತ್ಸವ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ 300 ಕ್ಕೂ ಹೆಚ್ಚು ಜನ ಹೊಸದಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಿದ್ದು, ಇವರನ್ನು ಗುರುತಿಸಿ ಭೂಮಿ ಸಿದ್ಧತೆಯಿಂದ ಹಿಡಿದು ನರೇಗಾದಲ್ಲಿ ದೊರೆಯುವ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಸದಪಯೋಗ ಪಡಿಸಿಕೊಳ್ಳುವ ಬಗ್ಗೆ ಇಲಾಖೆಯಿಂದ ಅರಿವು ಮೂಡಿಸಲಾಗಿದೆ.
ಇಲಾಖೆಯಿಂದ ದಿಟ್ಟ ಹೆಜ್ಜೆ:-
ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಪ್ರದೇಶ ಹೆಚ್ಚಳ ಮಾಡುವುದರ ಜೊತೆಗೆ ಹನಿ ನೀರಾವರಿ ಪದ್ಧತಿಯಲ್ಲಿ ರೇಷ್ಮೆ ಬೆಳೆ ಬೆಳೆಯಲು ಇಲಾಖೆಯಿಂದ ದಿಟ್ಟ ಹೆಜ್ಜೆ ಇಡಲಾಗಿದೆ. ಇಲಾಖೆಯಿಂದ ರೇಷ್ಮೆ ಹುಳು ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ರೇಷ್ಮೆಬೆಳೆಗಾರರಿಗೆ ಸಹಾಯಧನ ಕಲ್ಪಿಸಲಾಗುತ್ತಿದೆ. ವಿಶೇಷ ಕಾಳಜಿ ವಹಿಸಿ ತಾಲೂಕುವಾರು ಗುರಿ ಹೊಂದುವ ಮೂಲಕ ಪ್ರತಿ ವರ್ಷ 1ಸಾವಿರ ಎಕರೆ ರೇಷ್ಮೆ ಪ್ರದೇಶವನ್ನು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯನ್ನು ರೇಷ್ಮೆ ನಾಡನ್ನಾಗಿಸಲು ಪಣತೊಟ್ಟಿದ್ದು, ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯನ್ನು ನಂ1 ಬಯೋಟಿನ್ ಜಿಲ್ಲೆಯನ್ನಾಗಿ ಮಾಡಲು ಇಲಾಖೆ ಸಂಕಲ್ಪ ಮಾಡಿದೆ. ಜಿಲ್ಲೆಯಲ್ಲಿ ಹೆಚ್ಚು ರೈತ ಕುಟುಂಬಗಳನ್ನು ರೇಷ್ಮೆ ಕೃಷಿಗೆ ಹೊಸದಾಗಿ ತಂದು, ಅವರನ್ನು ಯಶಸ್ವಿ ರೇಷ್ಮೆ ಬೆಳೆಗಾರರನ್ನಾಗಿ ಮಾಡಿ, ಅವರು ಸುಸ್ಥಿರ ರೇಷ್ಮೆ ಕೃಷಿಕರಾಗುವುದರ ಜೊತೆಗೆ ಆರ್ಥಿಕವಾಗಿ ಸಧೃಡರನ್ನಾಗಿ ಮಾಡಲಾಗುವುದು ಎಂದು ರೇಷ್ಮೆ ಉಪನಿರ್ದೇಶಕ ಡಾ. ವೈ.ಕೆ. ಬಾಲಕೃಷ್ಣಪ್ಪ ತಿಳಿಸಿದ್ದಾರೆ.
ಒಟ್ಟಾರೆ ಪಾರಂಪರಿಕವಾಗಿ ಬಂದಿರುವ ರೇಷ್ಮೆ ಕೃಷಿಯನ್ನು ರೈತರು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು. ರೇಷ್ಮೆ ಕೃಷಿ ಬಗ್ಗೆ ಮಾಹಿತಿ, ಬೆಲೆ, ಬೀಜೋತ್ಪಾದನೆ, ಬೆಂಬಲ ಬೆಲೆ, ಇಳುವರಿ, ಕಚ್ಚಾ ಸಾಮಾಗ್ರಿ ಸೇರಿದಂತೆ ಲಾಭದಾಯಕ ರೇಷ್ಮೆ ಕೃಷಿಯಲ್ಲಿ ತೊಡಗಿಕೊಳ್ಳಲು ರೈತರ ಬೆನ್ನೆಲುಬಿಗೆ ಇಲಾಖೆ ನಿಂತಿದೆ.
ರವಿಕುಮಾರ್ ಸಿ.ಎಚ್.
ಪ್ರಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತುಮಕೂರು