ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ರವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿದರು.
ತುಮಕೂರು ನಗರದ ಗೊಲ್ಲಹಳ್ಳಿಯ ಮನೆಯಿಂದ ಬೆಳಿಗ್ಗೆ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮಿಜಿಗಳ ಗದ್ದುಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀಸಿದ್ದಲಿಂಗ ಸ್ವಾಮಿಜೀಗಳಿಂದ ಆರ್ಶೀವದ ಪಡೆದರು.ಇದಕ್ಕೂ ಮುನ್ನ ಸುಕ್ಷೇತ್ರ ಶ್ರೀ ತಂಗನಹಳ್ಳಿ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಬಸವಲಿಂಗ ಸ್ವಾಮೀಗಳು, ಶ್ರೀ ಕ್ಷೇತ್ರ ಕಾರದ ಮಠ ಬೆಳ್ಳಾ ಶ್ರೀ ಶ್ರೀ ಶ್ರೀ ಕಾರದ ವೀರಬಸವ ಸ್ವಾಮೀಜಿಗಳ ಸುಕ್ಷೇತ್ರ ಶ್ರೀ ಎಲೆರಾಂಪುರ ಮಠಕ್ಕೆ ಭೇಟಿ ನೀಡಿ ಶ್ರೀ ಹನುಮಂತನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು.
ಬೆಳಿಗ್ಗೆ 10 ಕ್ಕೆ ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಅಂಜನೇಯ ಮತ್ತು ಪಟ್ಟಣದ ಕಟ್ಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಕೊರಟಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವಿವಿಧ ಕಲಾತಂಡಗಳು ಮತ್ತು ವಾಧ್ಯತಂಡಗಳೊಂದಿಗೆ ಬೃಹತ್ ಜನಸ್ತೋಮ ಹಾಗೂ ಅಪಾರ ಜನಬೆಂಬಲದೊಂದಿಗೆ ತೆರದ ವಾಹನದಲ್ಲಿ ಮಿನಿ ವಿಧಾನಸೌಧದ ತನಕ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಸುಮಾರು 11 ಘಂಟೆಯಿಂದ ಮಧ್ಯಾಹ್ನ 2ರ ಘಂಟೆಯವರೆಗೆ ಬಿಸಿಲನ್ನು ಲೆಕ್ಕಿಸದೆ 40 ಸಾವಿರಕ್ಕೂ ಅಧಿಕ ಕಾರ್ಯಕರ್ತ ಮೆರವಣಿಗೆಯಲ್ಲಿ ಜಯಘೋಷ ಕೂಗುತ್ತಾ ಉತ್ಸಾಹದಲ್ಲಿ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಸೇಬು ಸೇರಿ ದಂತೆ ವಿವಿಧ ರೀತಿಯ ಹಣ್ಣು ಮತ್ತು ಹೀವಿನ ಹಾರಗಳ ಹಾಕುವುದರ ಜೊತೆಗೆ ಕ್ರೇನ್ ಗಳ ಮೂಲಕ ಪುರ್ಷ್ವಾಚನೆ ಮಾಡಿ ಅಭಿಮಾನಿಗಳು ಸಂಭ್ರಮಿಸಿದರು.
ಮೆರವಣಿಗೆಯ ನಂತರಕೊರಟಗೆರೆ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆಗೆ 3 ಪ್ರತಿಗಳಲ್ಲಿ ಅರ್ಜಿ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ದಲಿತ, ಹಿಂದುಳಿದ, ಲಿಂಗಾಯತ, ಒಕ್ಕಲಿಗ, ಮುಸ್ಲಿಂ ಸಮುದಾಯದ ತಮ್ಮ ಪಕ್ಷದ ಮುಖಂಡರ ಪ್ರಾತಿನಿಧ್ಯ ನೀಡಿದ್ದು ವಿಶೇಷವಾಗಿತು. ನಾಮಪತ್ರ ಸಲ್ಲಿಸಲು ಆಗಮಿಸಿದ ಡಾ. ಜಿ. ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ನಂದಿನಿ ಪೇಡಾದ ಪ್ಯಾಕೆಟ್ ಹಾರ ಹಾಕುವ ಮೂಲಕ ರಾಜ್ಯದಲ್ಲಿ ನಂದಿನಿ ಉಳಿಸಿ ಎಂಬ ಸಂದೇಶವನ್ನು ನೀಡಿದ್ದು ವಿಶೇಷವಾಗಿತ್ತು.
ಗಮನ ಸೆಳೆದ ರ‍್ಯಾಲಿ:
ನಾಮಪತ್ರ ಸಲ್ಲಿಕೆಗೂ ಮುನ್ನ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣದಿಂದ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ಜನಸ್ತೋಮದೊಂದಿಗೆ ಸಾಗಿ ಬಂದರು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಬಾವುಟ ಹಿಡಿದ ಕಾರ್ಯಕರ್ತರು ಡಾ.ಜಿ.ಪರಮೇಶ್ವರ ಪರ ಜಯಘೋಷ ಮೊಳಗಿಸಿದರು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ನೆರೆದ ಜನಸ್ತೋಮವನ್ನುಕಂಡು ಸ್ವಪಕ್ಷೀಯ ಪಾಳೆಯವೇ ನಿಬ್ಬೆರಗಾಗಿದೆ. ಕ್ಷೇತ್ರದಲ್ಲಿ ಈ ಪರಿಯ ಬೃಹತ್ ರ‍್ಯಾಲಿ ನಡೆಸುವ ಮೂಲಕ ವಿರೋಧಿ ಪಾಳೆಯಕ್ಕೂ ಶಾಕ್ ನೀಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದು ಡಾ. ಪರಮೇಶ್ವರ ಅವರ ಶಕ್ತಿ, ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ರ‍್ಯಾಲಿಯಲ್ಲಿ ಕ್ಷೇತ್ರದ ಎಲ್ಲ ಪಂಚಾಯಿತಿಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಸದಸ್ಯರು ತಾಲ್ಲೂಕು ಮತ್ತು ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿಗಳು ಭಾಗವಹಿಸಿದ್ದರು.
ಮತದಾರರೇ ನೀಡಿದ ಠೇವಣಿ ಹಣ ನೀಡಿದರು-ತೆಂಕಿನ ಕಾಯಿ ಹೊಡೆದರು:
ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಪಕ್ಷದ ರೈತರು, ಶಿಕ್ಷಕರು, ಅಭಿಮಾನಿಗಳು, ಕಾರ್ಯಕರ್ತರು ಚುನಾವಣೆಗಾಗಿ ಠೇವಣಿ ಹಣ ನೀಡಿ ಹಾರೈಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅಹ್ವಾನ ನೀಡಲು ಕ್ಷೇತ್ರದಲ್ಲಿ ಸಂಚರಿಸಿದಾಗ ಕಾರ್ಯಕರ್ತರು ನಮ್ಮ ದೇಣಿಗೆ ಹಣದಲ್ಲೇ ಠೇವಣಿ ಇಡಿ ಎಂದು ಒತ್ತಾಯ ಮಾಡಿದ್ದನ್ನು ಕಂಡು ಡಾ. ಜಿ.ಪರಮೇಶ್ವರ್ ಅವರು ಭಾವುಕರಾದರು. ನಾಮಪತ್ರ ಸಲ್ಲಿಸುವ ವೇಳೆ ನಮ್ಮ ದುಡ್ಡನ್ನೇ ಠೇವಣಿ ಇಡಬೇಕೆಂದು ಒತ್ತಾಯಿಸಿ, ಕಾಂಗ್ರೆಸ್ ಕಾರ್ಯಕರ್ತರು ದೇಣಿಗೆ ನೀಡಿದ್ದು ಒಂದೆಡೆಯಾದರೆ, ಮೆರವಣಿಗೆಯಲ್ಲಿ ಡಾ. ಜಿ.ಪರಮೇಶ್ವರ ರವರು ಮತ್ತೆ ಗೆಲುವು ಸಾಧಿಸಲಿ ಎಂದು ಅಭಿಮಾನಿಗಳಿಂದ ತೆಂಗಿನ ಕಾಯಿ ಒಡೆದು ತಮ್ಮ ಧನ್ಯತೆ ಮೆರೆದರು.
ಡಾ. ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ, ಎ.ಡಿ. ಬಲರಾಮಯ್ಯ, ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ್, ತುಮಕೂರು ನಗರ ಅಭ್ಯರ್ಥಿ ಇಕ್ಬಾಲ್ ಅಹಮದ್, ರಾಯಸಂದ್ರ ರವಿಕುಮಾರ್ ಅರಕೆರೆ ಶಂಕರ್, ಗಂಗಾಧರಪ್ಪ ಕೊಂತಿಹಳ್ಳಿ, ಮತ್ತಿತರರು ಸಾಥ್ ನೀಡಿದರು.