ತುಮಕೂರುತುಮಕೂರು ಗ್ರಾಮಾಂತರ

ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ : ಗೃಹ ಸಚಿವ ಅರಗಜ್ಞಾನೇಂದ್ರ

ಗೂಳೂರು, ಉರ್ಡಿಗೆರೆ ಮತ್ತು ಬೆಳಗುಂಬ ಹೋಬಳಿಗಳ ಕಾರ್ಯಕರ್ತರ ಸಮಾವೇಶ

ತುಮಕೂರು : ವಿರೋಧ ಪಕ್ಷಗಳು ಯಾರು ಏನೇ ಹೇಳಲಿ ರಾಜ್ಯ ಮತ್ತು ಗ್ರಾಮಾಂತರದಲ್ಲಿ ಬಿಜೆಪಿ ಪರ ಅಲೆಯಿದ್ದು,ಇದೇ ಉತ್ಸಾಹವನ್ನು ಕೊನೆಯವರೆಗೆ ಕಾರ್ಯಕರ್ತರು ಕಾಯ್ದುಕೊಂಡರೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಸುರೇಶಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಊರ್ಡಿಗೆರೆ ಗ್ರಾಮದಲ್ಲಿ ಬಿಜೆಪಿ ಪಕ್ಷದ ಗೂಳೂರು, ಉರ್ಡಿಗೆರೆ ಮತ್ತು ಬೆಳಗುಂಬ ಹೋಬಳಿಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಬಿ.ಸುರೇಶಗೌಡ ಅವರು ತಮ್ಮ ಕೆಲಸ, ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ವಿರಾಜಮಾನರಾಗಿದ್ದು,ವಿರೋಧಪಕ್ಷಗಳು ಬಿಜೆಪಿ ಪರ ಅಲೆಯಿಂದ ಹತಾಶರಾಗಿ ಏನೋನೋ ಹೇಳುತಿದ್ದಾರೆ.ಅವುಗಳಿಗೆ ಕಿವಿಗೊಡದೆ ಗ್ರಾಮಾಂತರ ಕ್ಷೇತ್ರದಲ್ಲಿ ಜನತೆ ಸುರೇಶಗೌಡರ ಗೆಲುವಿಗೆ ಶ್ರಮಿಸಬೇಕೆಂದರು.
ಕಳೆದ 75 ವರ್ಷಗಳಲ್ಲಿ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ದಿಯಾಗಿಲ್ಲ.ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ದಿಂದ ಜನರ ರಕ್ತ ಹೀರಿದ್ದಾರೆ.ಭ್ರಷ್ಟಾಚಾರ ವಿರುದ್ದ ಮಾತನಾಡುವ ನೈತಿಕತೆಯನ್ನೇ ಕಾಂಗ್ರೆಸ್ ಪಕ್ಷ ಕಳೆದು ಕೊಂಡಿದೆ. ಕಾಂಗ್ರೆಸ್‌ನವರನ್ನು ಅವರು ಹೊದ ಕಡೆಯಲ್ಲೆಲ್ಲಾ ಜನರು ತಿರಸ್ಕರಿಸಿದ್ದಾರೆ.ಇಂದಿಗೂ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಇಡಿ,ಸಿಬಿಐ,ಐಟಿ ದಾಳಿಗೆ ತುತ್ತಾಗಿ, ಬೇಲ್ ಮೇಲೆ ಉಸಿರಾಡುತಿದ್ದಾರೆ.ಇನ್ನೂ ಜೆಡಿಎಸ್ ಪಕ್ಷಕ್ಕೆ ನಮಗೆ 25 ಸೀಟು ಬಂದರೆ ಸಾಕು ನಮ್ಮ ಆಟ ಆಡೋಣ ಎಂಬ ಲೆಕ್ಕಾಚಾರದಲ್ಲಿದೆ.ಈ ಎರಡು ಪಕ್ಷಗಳನ್ನು ಜನರು ತಿರಸ್ಕರಿಸಿ, ವಿಶ್ವವೇ ಭಾರತದ ಕಡೆ ನೋಡುವಂತೆ ಅಳ್ವಿಕೆ ನಡೆಸುತ್ತಿರುವ ನರೇಂದ್ರಮೋದಿ ಅವರ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮತ ನೀಡಿ, ಅಧಿಕಾರದಲ್ಲಿ ಮುಂದುವರೆಯುವಂತೆ ಮಾಡಬೇಕೆಂದು ಸಚಿವ ಅರಗಜ್ಞಾನೇಂದ್ರ ನುಡಿದರು.
ನಮ್ಮ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಬೆಳೆವಿಮೆ, ಕಿಸಾನ್ ಸನ್ಮಾನ ಯೋಜನೆ, ಆಯುಷ್ಮಾನ್ ಭಾರತ್ ಇವುಗಳಿಂದ ರೈತರು, ಜನಸಾಮಾನ್ಯರ ಬದುಕು ಹಸನಾಗಿದೆ.ಜೆಜೆಎಂ ಮೂಲಕ ಜನತೆ ಕುಡಿಯುವ ನೀರು ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ಕಾರ್ಯಕ್ರಮಗಳು ಜನತೆಯ ನೆರವಿಗೆ ಬರಲಿವೆ.ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ನಿವೇಲ್ಲರೂ ಶ್ರಮಪಡಬೇಕಾಗಿದೆ ಎಂದು ಸಚಿವ ಅರಗಜ್ಞಾನೇಂದ್ರ ತಿಳಿಸಿದರು.
ರಾಜ್ಯದಲ್ಲಿ 2013-2018ರವರೆಗೆ ಸಿದ್ದರಾಯ್ಯ ಆಡಳಿತಾವಧಿಯಲ್ಲಿ 30 ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಗುಂಡಾ ಕಾಯ್ದೆ ಹಾಕಲಾಗಿತ್ತು. ಟಿಪ್ಪು ಜಯಂತಿ ಹೆಸರಿನಲ್ಲಿ ಸೌಹಾರ್ಧ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದರು.ಇದನ್ನು ಅರಿತ ಕರ್ನಾಟಕದ ಜನತೆ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಬಿಜೆಪಿ ಕರ್ನಾಟಕವನ್ನು ಗಟ್ಟಿಯಾಗಿ ಕಟ್ಟುವ ಕೆಲಸ ಮಾಡುತ್ತಿದ್ದು, ಜನರು ಮತ್ತೊಮ್ಮೆ ಅಧಿಕಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ ಜನರಲ್ಲಿ ಮನವಿ ಮಾಡಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,2014ರಿಂದ 2018ರವರೆಗೆ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿದ್ದ ಬಿ.ಸುರೇಶಗೌಡರ ಕಾರ್ಯವೈಖರಿಯನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ.ಕ್ಷೇತ್ರದ ಅಭಿವೃದ್ದಿಗಾಗಿ ಯಾರೊಂದಿಗೆ ಬೇಕಾದರೆ ಜಗಳವಾಡಲು ಅವರು ಸಿದ್ದ, ಹಾಗೆಯೇ ಯಾರನ್ನು ಮನವೊಲಿಸಲು ಸಿದ್ದರು. ಹಾಗಾಗಿಯೇ 2008ರಿಂದ 2018ರವರೆಗೆ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು, ಮತದಾರರ ಮನದಲ್ಲಿ ಇರುವಂತೆ ಮಾಡಿವೆ.ಇಂತಹವರು ಮತ್ತೊಮ್ಮೆ ಶಾಸಕರಾಗುವ ನಿಟ್ಟಿನಲ್ಲಿ ಮತದಾರರು ಮುಂದಾಗುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ಉರ್ಡಿಗೆರೆ ಗ್ರಾಮವನ್ನು ಕೇಂದ್ರ ಸ್ಥಾನವಾಗಿಟ್ಟು ಕೊಂಡು ಸುರೇಶಗೌಡ ಅವರು ಎಲ್ಲಾ ಕಡೆಗೂ ಉತ್ತಮ ಸಂಪರ್ಕ ರಸ್ತೆಗಳನ್ನು ಮಾಡಿಸಿದ್ದಾರೆ. ಅವರು ಮಾಡಿರುವ ರಸ್ತೆಗಳು ಹತ್ತಾರು ವರ್ಷ ಕಳೆದರೂ ಒಂದು ಗುಂಡಿ ಬಿದ್ದಿಲ್ಲ.ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಉರ್ಡಿಗೆರೆ ಹೋಬಳಿಗೆ 19639 ಟಿ.ಸಿ, ದೇವಾಲಯ ಗಳು, 18 ಸಾವಿರ ಆಶ್ರಯ ಮನೆಗಳನ್ನು,ಶಾಲೆ ಗಳನ್ನು ನಿರ್ಮಿಸಿಕೊಟ್ಟಿದ್ದಾರೆ.ಇಂತಹ ವ್ಯಕ್ತಿ ಮತ್ತೊಮ್ಮೆ ಶಾಸಕರಾಗಬೇಕೆಂಬುದು ಕ್ಷೇತ್ರದ ಜನರ ಬಯಕೆಯಾಗಿದೆ ಎಂದರು.
ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ರೈತರಿಗೆ ನೆರವಾಗುವುದೇ ನಿಜವಾದ ಅಭಿವೃದ್ದಿ,ಶಾಲಾ, ಕಾಲೇಜು, ರಸ್ತೆಗಳು,ವಿದ್ಯುತ್ ಸಂಪರ್ಕ,ಆಸ್ಪತ್ರೆಗಳು ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ನನ್ನ 10 ವರ್ಷದ ಶಾಸಕನ ಅವಧಿಯಲ್ಲಿ ಮಾಡಲಾಗಿದೆ.ಬಡ ಮಕ್ಕಳು ಓದುವ ಸರಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಷ ನೀಡಿ, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಾಗಿದೆ.ಸುವರ್ಣ ಗ್ರಾಮದ ಮೂಲ ಹಲವಾರು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ನನ್ನ ಕಾಲದಲ್ಲಿ ಅಭಿವೃದ್ದಿಗೆ ಮುಂದಾಗಿದ್ದ ಬಯಲು ಆಂಜನೇಯ ಸ್ವಾಮಿ ಇಂದಿಗೂ ನೆನೆಗುದಿಗೆ ಬಿದ್ದಿದೆ.ಭವಿಷ್ಯ ನಾನೇ ಶಾಸಕನಾಗಿ ಅಭಿವೃದ್ದಿ ಪಡಿಸಲಿ ಎಂಬುದು ಭಗವಂತನ ಇಚ್ಚೆಯಾಗಿರಬೇಕು.ನಿಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಇದೇ ರೀತಿ ಇದ್ದರೆ, ನಾನು ಶಾಸಕನಾಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಸುರೇಶ್ ಗೌಡ ವಹಿಸಿದ್ದರು. ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಂಕರಣ್ಣ, ರಘುನಾಥ್ ವೇದಿಕೆಯಲ್ಲಿ ನರಸಿಂಹಮೂರ್ತಿ,ವೈ.ಟಿ.ನಾಗರಾಜು, ರಾಜುಗೌಡ, ಓಂ ನಮೋ ನಾರಾಯಣ, ಸುಮಿತ್ರಾ ದೇವಿ, ಕೋಡಿಹಳ್ಳಿ ಆಂದಾನಪ್ಪ, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಬೆಳಗುಂಬ ನರಸಿಂಹ ಮೂರ್ತಿ, ಮಾಸ್ತೇಗೌಡ,ಡಿಕೆಸಿ, ಶಾಂತಕುಮಾರ್,ಗಂಗಾಂಜನೇಯ್ಯ,ರಾಮಚಂದ್ರಯ್ಯ,ಸಿದ್ದೇಗೌಡ,ಅರೆಕೆರೆ ರವೀಶ್,ರವಿ,ರಮೇಶ್,ಶಿವಕುಮಾರ್, ಶಾಂತಕುಮಾರ್, ಜಯಂತ್,ಕೆಂಪರಾಜ್, ಮದನ್,  ಬಾಬಣ್ಣ, ಕೆಂಪ ಸಿದ್ದಯ್ಯ ಸೇರಿದಂತೆ ಎಲ್ಲಾ ಜಿ.ಪಂ, ತಾ.ಪಂ ಮಾಜಿ ಸದಸ್ಯರು,ಎಲ್ಲಾ ಮಂಡಲಗಳ ಅಧ್ಯಕ್ಷರು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker