ಶಿರಾ : ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ರಾಜಕೀಯ ಸಂಸ್ಕೃತಿ ಬದಲಿಸಿದರು. ಕಾಂಗ್ರೆಸ್‌ನವರು ಅಣ್ಣ ತಮ್ಮಂದಿರರ ನಡುವೆ ಜಗಳ ತಂದಿಕ್ಕಿದರು. ಜಾತಿ ಜಾತಿ ಎಂದು ಒಡೆದು ಆಳುವ ನೀತಿ ಕಾಂಗ್ರೇಸ್‌ನವರದ್ದು, ಕಾಂಗ್ರೆಸ್ ನವರು ಜಾತಿ ಧರ್ಮದ ಹೆಸರಲ್ಲಿ ತುಷ್ಠಿಕರಣ ಮಾಡಿದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದರು.
ಅವರು ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರಮೋದಿಯವರು ದೇಶದ ಪ.ಜಾತಿ, ಪ.ಪಂಗಡ, ಮಹಿಳೆಯರು ಮತ್ತು ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದಾರೆ. ಜನರಿಗೆ ಒಂದಲ್ಲಾ ಒಂದು ಯೋಜನೆ ಕೊಟ್ಟಿದ್ದಾರೆ. ಬಿಜೆಪಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪ್ರಧಾನಿಯವರು 80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿದ್ದಾರೆ. ದೇಶದ 12 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಾಣ, 50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೀಡಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ 90 ಲಕ್ಷ ಕೋಟಿ ಒಪ್ಪಂದ ಮಾಡಿಕೊಂಡಿದೆ. ಸಿದ್ದರಾಮಯ್ಯ ಅವರು ಒಬ್ಬ ಮುಖ್ಯಮಂತ್ರಿಗೆ ನಾಯಿ ಎಂದು ಕರೆದು ಕರ್ನಾಟಕದ ಜನರಿಗೆ ಅಪಮಾನ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ನರೇಂದ್ರಮೋದಿಯವರು ಅಪ್ಪಟ ಪ್ರಜಾಪ್ರಭುತ್ವವಾದಿ. ದೇಶಕ್ಕೆ ಹತ್ತು ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ. ಹಾಗೂ ರಾಜ್ಯಕ್ಕೆ 6500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ರಸ್ತೆ ಕೊಟ್ಟಿದ್ದಾರೆ. ಸ್ವತಂತ್ರ ಬಂದು ಇಷ್ಟು ವರ್ಷವಾದರೂ ರಾಜ್ಯಕ್ಕೆ 6000 ಕಿ.ಮೀ. ರಸ್ತೆ ಬಂದಿರಲಿಲ್ಲ. ಅದನ್ನು ಒಂದೇ ಅವಧಿಯಲ್ಲಿ 5 ವರ್ಷದಲ್ಲಿ 6000 ಕಿಮೀ ರಸ್ತೆ ಕೊಟ್ಟಿದ್ದಾರೆ. 1000 ಕೋಟಿ ವೆಚ್ಚ ರೈಲ್ವೆ ಯೋಜನೆಗೆ ಕೊಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಕೊಟ್ಟಿದ್ದಾರೆ ಎಂದರು.
ಶಿರಾ ತಾಲ್ಲೂಕು ಬರಪೀಡಿತ ತಾಲ್ಲೂಕು. ಈ ತಾಲ್ಲೂಕಿಗೆ ಕಾಯಕಲ್ಪ ಕೊಡಬೇಕೆಂದು ಬಿ.ಎಸ್.ಯಡಿಯೂರಪ್ಪ ಅವರು 2010ರಲ್ಲಿ ಮುಖ್ಯಮಂತ್ರಿಯಾದಾಗ ಎರಡು ಪ್ರಮುಖ ಯೋಜನೆಗಳನ್ನು ಮಾಡಲು ತೀರ್ಮಾನ ಮಾಡಿ. ಮದಲೂರು ಕೆರೆಗೆ ನೀರು ಹರಿಸುವುದು ಹಾಗೂ ಅಪ್ಪರ್ ಭದ್ರಾ ಯೋಜನೆಯಲ್ಲಿ ಶಿರಾ ತಾಲ್ಲೂಕಿನ ಕೆರೆಗಳಿಗೆ ನೀರು ಒದಗಿಸುವುದು. ಈ ಎರಡು ಯೋಜನೆಗಳಿಗೆ ಚಾಲನೆ ಕೊಟ್ಟಿರುವುದು. ಅಂದು ನಾನು ಜಲಸಂಪನ್ಮೂಲ ಸಚಿವನಾಗಿದ್ದೇನೆ. ಯಾರಾದರೂ ಶಿರಾ ತಾಲ್ಲೂಕಿಗೆ ನೀರು ಕೊಟ್ಟಿದ್ದೇವೆ ಎಂದರೆ ಅದು ಹಸಿ ಸುಳ್ಳು ಎಂದು ಹೇಳುತ್ತೇನೆ. ಕೇಂದ್ರ ಸರಕಾರಕ್ಕೆ ಈ ಭಾಗದ ನೀರಿನ ಸಮಸ್ಯೆಗಳನ್ನು ಶಿಫಾರಸ್ಸು ಮಾಡಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇವೆ. ಉಪಚುನಾವಣೆಯಲ್ಲಿ ಯಡಿಯೂರಪ್ಪ ಅವರು ಭಾಷೆ ಕೊಟ್ಟರು ಮದಲೂರು ಕೆರೆಗೆ ನೀರು ತುಂಬಿಸುತ್ತೇವೆ ಎಂದು. ಅದೇ ರೀತಿ ಅದೇ ವರ್ಷ ಮದಲೂರು ಕೆರೆಗೆ ನೀರು ಹರಿಸಿದರು. ಅಪ್ಪರ್ ಭದ್ರ ಯೋಜನೆ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದೆ. ಆಗ ಕೇಂದ್ರ ಸರಕಾರದಿಂದ 13000 ಕೋಟಿ ರೂ. ಅನುದಾನ ಸಿಗಲಿದೆ ಎಂದರು.
ಶಿರಾ ಎಂದರೆ ಸಿಹಿ ಇಡೀ ಕರ್ನಾಟಕಕ್ಕೆ ಸಿಹಿ ಕೊಡುವ ಕೆಲಸ ನೀವು ಮಾಡಬೇಕು. ಉಪಚುನಾವಣೆಯಲ್ಲಿ ಬಹಳ ದೊಡ್ಡ ಶಕ್ತಿ ಕೊಟ್ಟಿದ್ದೀರಿ. ನಾನು ಈ ಶಿರಾ ಜನತೆಗೆ ಹೇಳುತ್ತೇನೆ ಈ ಭಾಗದ ಕೆರೆ ತುಂಬಿಸುವ ಯೋಜನೆಗಳಿಗೆ ಅನುಮತಿ ಕೊಟ್ಟು ಅನುದಾನ ಕೊಡಲು ನಾನು ಬದ್ಧನಾಗಿದ್ದೇನೆ. ಜನಸಂಕಲ್ಪ ಯಾತ್ರೆ ಬರುವ ದಿನಗಳಲ್ಲಿ ವಿಜಯಸಂಕಲ್ಪ ಯಾತ್ರೆಯಾಗಿ ಪರಿವರ್ತನೆಯಾಗಲಿದೆ. ಇದೇ ನಿಮ್ಮ ಸಂಕಲ್ಪ ನಮ್ಮ ಸಂಕಲ್ಪ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ನಾನು ಕಾಂಗ್ರೆಸ್ ನವರಿಗೆ ಒಂದೇ ಒಂದು ಪ್ರಶ್ನೆ ಕೇಳ್ತಿನಿ. ನಿಮ್ಮ 5 ವರ್ಷ ಅವಧಿಯಲ್ಲಿ ಏನೇನೂ ಕೊಡುಗೆ ಕೊಟ್ಟೀರಿ ಆ ಪಟ್ಟಿ ಬಿಡುಗಡೆ ಮಾಡಿ. ನಮ್ಮ ಸರಕಾರದ ಅವಧಿಯಲ್ಲಿ ಆದ ಅಭಿವೃದ್ಧಿಯ ಪಟ್ಟಿಯನ್ನು ಬಿಡುಗಡೆ ಮಾಡ್ತಿವಿ. ಆದರ ಆಧಾರದ ಮೇಲೆ ಚುನಾವಣೆ ಮಾಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸವಾಲು ಹಾಕಿದರು. ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ. ಕೊಟ್ಟ ಭರವಸೆ ಈಡೇರಿಸಿರುವ ಪಕ್ಷ ಬಿಜೆಪಿ. ಆದಿವಾಸಿಗಳನ್ನು ದೇಶದ ರಾಷ್ಟçಪತಿ ಮಾಡಿ ಗೌರವ ಕೊಟ್ಟಿದ್ದು ಮೋದಿ. ರೈತರ ಸಾಲ ಮಾಡಿದ್ದು, ಕಷ್ಟಕ್ಕೆ ಸ್ಪಂದಿಸಿದ್ದು ಬಿಜೆಪಿ. ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ತಿವಿ. ಕಾಂಗ್ರೆಸ್ ನವರ ತಿರುಕನ ಕನಸು ಹಾಗೆ ಉಳಿಯುವಂತೆ ಮಾಡೆ ಮಾಡುತ್ತೇವೆ ಎಂದರು.
ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಅವರು ಮಾತನಾಡಿ ದೇಶದ ಉದ್ದಗಲಕ್ಕೂ ಮೋದಿಯವರು ಕೊಟ್ಟಂತಹ ಅನೇಕ ಯೋಜನೆಗಳು. ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿದ್ದರೆ ಅದು ಮೋದಿ ಅವರ ಶಕ್ತಿ. ಮೋದಿ ಅವರು ಮೂಲಸೌಕರ್ಯ, ಶಿಕ್ಷಣ, ನೀರಾವರಿ, ಸಾರಿಗೆ ವ್ಯವಸ್ಥೆ, ಆರ್ಥಿಕ ಬೆಳವಣಿಗೆ ಹೆಚ್ಚಿನ ಒತ್ತು ಕೊಟ್ಟು ಈ ದೇಶವನ್ನ ವಿಶ್ವ ಮಟ್ಟಕ್ಕೆ ಕೊಂಡ್ಯೊಯ್ದಿದ್ದಾರೆ.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮಾತನಾಡಿ ಬಯಲುಸೀಮೆಯ ಭಗೀರಥ ಯಡಿಯೂರಪ್ಪ ಅವರು ಉಪಚುನಾವಣೆಯಲ್ಲಿ ಫಲಿತಾಂಶ ಬಂದು 6 ತಿಂಗಳಲ್ಲಿ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಫಲಿತಾಂಶ ಬಂದ 20 ದಿನಗಳಲ್ಲಿ ನೀರು ಹರಿಸಿ ಇತಿಹಾಸ ನಿರ್ಮಿಸಿದರು. ಅದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ನೀರಾವರಿ ರಾಜಕೀಯ ಮಾಡಿಕೊಂಡು ಬಂದಿದ್ದರು. ಇದಕ್ಕೆ ತಣ್ಣೀರೆರೆಚ್ಚಿದ್ದಾರೆ ಎಂದ ಅವರು ಶಿರಾದಲ್ಲಿ ಜನಸಂಕಲ್ಪ ಯಾತ್ರೆ ಹೊಸ ಹುರುಪನ್ನು ನೀಡಿದೆ. ಶಿರಾದಲ್ಲಿ ಸ್ವಾತಂತ್ರö್ಯ ನಂತರ ಬಿಜೆಪಿಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದೀರಿ. ಈ ಕ್ಷೇತ್ರದಲ್ಲಿ ಪರಿವರ್ತನೆ ಕೊಟ್ಟಿದ್ದೀರಿ. ಅದರಂತೆ ಮುಂದಿನ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಿ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.
ಕಾಡುಗೊಲ್ಲ ಬುಡಕಟ್ಟು ಮಹಾಸಭಾದಿಂದ ಸಿಎಂ ಬೊಮ್ಮಾಯಿ ಅವರಿಗೆ ಕಾಡುಗೊಲ್ಲರನ್ನು ಎಸ್.ಟಿ ಸೇರಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಸಚಿವರಾದ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಶಾಸಕ ಜ್ಯೋತಿಗಣೇಶ್, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್ ಸೇರಿದಂತೆ ಹಲವರು ಹಾಜರಿದ್ದರು.