ಮಧುಗಿರಿ : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ನಿರೀಕ್ಷೆಯಿದ್ದು ಸಂಪೂರ್ಣ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಸ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಹೆಣ್ಣು ಮಕ್ಕಳನ್ನು ಋಣಮುಕ್ತರನ್ನಾಗಿ ಮಾಡಲಾಗುವುದೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಯೋಜನೆಯ ರಥಯಾತ್ರೆಯೊಂದಿಗೆ ಮಧುಗಿರಿಗೆ ಆಗಮಿಸಿದ ಅವರನ್ನು ಗಡಿಬಾಗದಿಂದಲೂ ಮಹಿಳೆಯರು ಆರತಿ ಮಾಡಿದರೆ ಕಾರ್ಯಕರ್ತರು ಹೂವಿನ ಸುರಿ ಮಳೆಯೊಂದಿಗೆ ಸ್ವಾಗತಿಸಿದರು.
ಅವರು ಪಟ್ಟಣದಲ್ಲಿ ಗ್ರಾಮ ದೇವತೆ ಶ್ರೀ ದಂಡಿನ ಮಾರಮ್ಮ ದೇವರ ದರ್ಶನ ಮಾಡಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಕ್ಷೇತ್ರದ ಋಣ ನಮ್ಮ ಮೇಲಿದೆ. ಕಳೆದ ಬಾರಿ ಮಧುಗಿರಿ ಅಭಿವೃದ್ಧಿಗೆ ಮುಂದಾಗುವಾಗಲೇ ನನ್ನ ಸರ್ಕಾರವನ್ನು ಕುತಂತ್ರದಿಂದ ಕಿತ್ತು ಹಾಕಿದರು. ಆದರೂ 25 ಸಾವಿರ ಕೋಟಿ ಸಾಲವನ್ನ ಮನ್ನಾ ಮಾಡಿದ್ದು ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನದ ಜೊತೆಗೆ ಕೈಗಾರಿಕಾ ವಲಯ ಮಂಜೂರು ಮಾಡಿದೆ. ಈಗ 2 ಬಾರಿ ಹೃದಯ ಚಿಕಿತ್ಸೆಯಾಗಿದ್ದರೂ ಬಡವರ ಬದುಕು ಹಸನುಗೊಳಿಸಲು ದಿನದ 18 ಗಂಟೆ ಹೋರಾಟ ಮಾಡುತ್ತಿದ್ದೇನೆ. ಪಂಚರತ್ನ ಯೋಜನೆಯ ಮೂಲಕ ಎಲ್ಲರಿಗೂ 50 ಲಕ್ಷದವರೆಗೂ ಉಚಿತ ಆರೋಗ್ಯ ರಕ್ಷೆ, ಮಕ್ಕಳಿಗೆ 1 ರಿಂದ 12 ತರಗತಿಯವರೆಗೂ ಉಚಿತ ಶಿಕ್ಷಣ, ಯುವ ಜನತೆಗೆ ಉದ್ಯೋಗ, ಪ್ರತಿ ಕುಟುಂಬಕ್ಕೂ 10 ಲಕ್ಷದ ಮನೆ, ಹಾಗೂ ಪ್ರತಿ ಗ್ರಾ.ಪಂ.ಮಟ್ಟದಲ್ಲಿ ಪ್ರತಿ ದಿನ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿಮ್ಮ ಮನೆ ಮಗನಿಗೆ ಈ ಯೋಜನೆಗಳ ಜಾರಿಗೆ ನನಗೆ ಆಶೀರ್ವಾದವನ್ನು ಮಾಡಿ ಎಂದರು.
ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದೇನೆ. 30 ಬೆಡ್ ಹಾಗೂ 4 ವೈದ್ಯರ ಜೊತೆ 2 ಅಂಬ್ಯುಲೆನ್ಸ್, 30 ಸಿಬ್ಬಂದಿಗಳ ತಂಡ 24 ಗಂಟೆ ಆರೋಗ್ಯ ಸೇವೆ ನೀಡಲಿದೆ. ಇಂತಹ ಮಹತ್ಕಾರ್ಯಕ್ಕೆ ನೀವೆಲ್ಲ ಈ ಬಾರಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ನಂತರ ಜಾಥವು ಪಟ್ಟಣ ಪ್ರವೇಶಕ್ಕೂ ಮುನ್ನಾ ಹಜರತ್ ಸೈಪುಲ್ಲಾ ಖಾದ್ರಿ ದರ್ಗಾಕ್ಕೆ ಭೇಟಿ ಹಾಗೂ ಪಾವಗಡ ವೃತ್ತದ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ಬೃಹತ್ ಶೇಂಗಾ ಸೇಬಿನ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಹೆಣ್ಣುಮಕ್ಕಳನ್ನು ಋಣಮುಕ್ತ ಮಾಡ್ತೀನಿ :
ಸ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಡಿಸಿಸಿ ಬ್ಯಾಂಕಿನಲ್ಲಿದ್ದು ಏನಾದರೂ ಸರಿ ಈ ಸಾಲವನ್ನೂ ಸಹ ನಮ್ಮ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಸಂಪೂರ್ಣ ಸಾಲಮನ್ನಾ ಮಾಡಿ ಈ ನಾಡಿನ ಹೆಣ್ಣುಮಕ್ಕಳನ್ನು ಋಣಮುಕ್ತರಾಗಿ ಮಾಡ್ತೀನಿ. ಜೊತೆಗೆ 65 ವರ್ಷ ತುಂಬಿದ ವೃದ್ಧರಿಗೆ 5 ಸಾವಿರ ಮಾಶಾಸನ ನೀಡಿ ಗೌರವ ನೀಡಲಾಗುವುದು ಎಂದರು.
ಮಗು ಸಾವು : ಕಣ್ಣೀರಿಟ್ಟ ಕುಮಾರಸ್ವಾಮಿ, ನಿಖಿಲ್
ಕೊಡಿಗೇನಹಳ್ಳಿಗೆ ಪಂಚರತ್ನ ರಥಯಾತ್ರೆ ಆಗಮಿಸಿದ್ದು ಬೃಹತ್ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಕುಣಿದು ಕುಪ್ಪಳಿಸುತ್ತಿದ್ದರು. ಹೆಚ್‌ಡಿಕೆ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾಗಲೇ ಬಂದ ಮಗುವಿನ ಸಾವಿನ ಸುದ್ದಿ ಎಲ್ಲರನ್ನು ಮೂಕರನ್ನಾಗಿಸಿದ್ದು
ಹೆಚ್‌ಡಿಕೆ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕಣ್ಣೀರಿಟ್ಟರು. ಇದೇ ಗ್ರಾಮದ ವಾಸಿ ಶೌಕತ್ ಎಂಬುವವರ ಮಗು 4 ವರ್ಷದ ಮಹಮ್ಮದ್ ಅಬ್ಬಾಸ್ ನೀರಿನ ಸೊಂಪಿಗೆ ಬಿದ್ದಿದ್ದು ಯಾರೂ ನೋಡಿಕೊಂಡಿರಲಿಲ್ಲ. ನಂತರ ಮಗುವನ್ನು ಕಂಡು ಆಸ್ಪತ್ರೆಗೆ ಕರೆತಂದರು.
ಆದರೂ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಅಂಬ್ಯುಲೆನ್ಸ್ ಚಾಲಕ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯ ವಾಗಲಿಲ್ಲ. ಇದರಿಂದಲೇ ಮಗು ಮೃತಪಟ್ಟಿದೆ ಎಂದು ಪಾಲಕರು ಆರೋಪಿಸಿದರು. ನಂತರ ಹೆಚ್‌ಡಿಕೆ ಬಳಿಗೆ ಮಗುವಿನ ಮೃತದೇಹ ತಂದಾಗ ಕುಮಾರಸ್ವಾಮಿ ಮಗುವಿನ ಸ್ಥಿತಿ ಕಂಡು ಮರುಗಿದರು.
ವೈಯಕ್ತಿಕ ಪರಿಹಾರ ಘೋಷಿಸಿದ ಹೆಚ್‌ಡಿಕೆ:
ಕಾರ್ಯಕರ್ತರು ತಂದಿದ್ದ ಬೃಹತ್ ಸೇಬಿನ ಹಾಗೂ ಹೂವಿನ ಹಾರವನ್ನು ತಿರಸ್ಕರಿಸಿದ ಕುಮಾರಸ್ವಾಮಿ ಈ ಮಗುವಿನ ಕುಟುಂಬಕ್ಕೆ ಸ್ಥಳದಲ್ಲೇ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಘೋಷಿಸಿದರು. ಇವರಂತೆ ಶಾಸಕ ವೀರಭದ್ರಯ್ಯ ಕೂಡ 1 ಲಕ್ಷ ಪರಿಹಾರ ಘೋಷಿಸಿದರು. ಕರ್ತವ್ಯ ಲೋಪ ಎಸಗಿದ ವೈದ್ಯರನ್ನು ಕೂಡಲೇ ಅಮಾನತುಗೊಳಿಸಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಎಲ್.ಸಿ.ನಾಗರಾಜ್ ಗೆ ಟಿಕೆಟ್ ನೀಡಲು ಮನವಿ :
ಕೊಡಿಗೇನಹಳ್ಳಿ ಹೋಬಳಿಗೆ ಪಂಚರತ್ನ ರಥಯಾತ್ರೆ ಆಗಮಿಸುತ್ತಿದ್ದಂತೆ ಚಿಕ್ಕಮಾಲೂರು, ದೊಡ್ಡಮಾಲೂರು ಹಾಗೂ ಕೊಡಿಗೇನಹಳ್ಳಿಯಲ್ಲಿ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್‌ಗೆ ಜೆಡಿಎಸ್ ಟಿಕೆಟ್ ನೀಡುವಂತೆ ಹೆಚ್‌ಡಿಕೆ ಕಾರು ತಡೆದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ ಸ್ಥಳೀಯರಾದ ಎಲ್.ಸಿ.ನಾಗರಾಜ್ ನನ್ನ ಆಪ್ತರು. ಇವರಿನ್ನೂ ಅಧಿಕಾರಿಯಾಗಿದ್ದಾರೆ. ಆದರೆ ಅವರ ಅಧಿಕಾರಿ ಸ್ಥಾನಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ವಿಚಾರವನ್ನು ಮುಂದಿನ ದಿನದಲ್ಲಿ ಚರ್ಚೆ ಮಾಡಲಿದ್ದು ಸೂಕ್ತ ನಿರ್ಧಾರ ಮಾಡೋಣ. ಎಲ್ಲರೂ ಜೊತೆಯಾಗಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.
ರಥಯಾತ್ರೆಯು ಇನ್ನೂ ಸಾಗುತ್ತಿದ್ದು ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಎಂ.ವಿ.ವೀರಭದ್ರಯ್ಯ, ಪುರಸಭೆ ಅಧ್ಯಕ್ಷ, ಸದಸ್ಯರು, ಗ್ರಾಮೀಣ ಭಾಗದ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.