ಜಿಲ್ಲೆಗೆ ಪ್ರವೇಶಿಸಿದ ಪಂಚರತ್ನ ರಥಯಾತ್ರೆ : ಕಾರ್ಯಕರ್ತರ ನಿರುತ್ಸಾಹ ಸೊರಗಿದ ಕಾರ್ಯಕ್ರಮ
ತುಮಕೂರು : ಉಚಿತ ವಿದ್ಯುತ್, ಗುಣಮಟ್ಟದ ಉಚಿತ ಶಿಕ್ಷಣ, ಆರೋಗ್ಯ,ಮಹಿಳಾ ಮತ್ತು ಯುವ ಸಬಲೀಕರಣ ಹಾಗೂ ರೈತಚೈತನ್ಯ ಎಂಬ ಜೆಡಿಎಸ್ ಪಕ್ಷದ ಪ್ರಣಾಳಿಕೆಯನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭಗೊಂಡಿರುವ ಪಂಚರತ್ನಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸಿದೆ.
ಇಂದು ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ತುಮಕೂರು ಜಿಲ್ಲೆಗೆ ಆಗಮಿಸಿದ ಪಂಚರತ್ನ ರಥಯಾತ್ರೆಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜಾಸ್ ಟೋಲ್ ಬಳಿ ರಥಯಾತ್ರೆಯನ್ನು ಬರಮಾಡಿಕೊಂಡರು.ನಂತರ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀಶಿವಕುಮಾರಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದರು.
ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಳೆದ ಬಾರಿ ಅತ್ಯಲ್ಪ ಮತಗಳಿಂದ ಸೋತಿದ್ದರಿಂದ ಈ ಬಾರಿ ಜೆಡಿಎಸ್ ಗೆಲುವಿಗೆ ಶತಾಗತಾಯ ಯತ್ನಿಸುತ್ತಿರುವ ಜೆಡಿಎಸ್ ವರಿಷ್ಠರು ಜಿಲ್ಲೆಯಲ್ಲಿ ಹತ್ತು ದಿನಗಳ ಕಾಲ ಚುನಾವಣಾ ಪೂರ್ವ ಪ್ರವಾಸವನ್ನು ಕೈಗೊಂಡಿದ್ದು,ಗರಿಷ್ಠ ಕ್ಷೇತ್ರಗಳಲ್ಲಿ ಗೆಲ್ಲುವ ಉಮೇದಿನಲ್ಲಿದ್ದಾರೆ.
ಜೋಶ್ ಹೆಚ್ಚಿಸದ ರಥಯಾತ್ರೆ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮಹಾತ್ವಕಾಂಕ್ಷೆಯ ಪಂಚರತ್ನ ಯಾತ್ರೆ ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿಸದೇ ವಿಫಲವಾಗುವಲ್ಲಿ ಜೆಡಿಎಸ್ ಮುಖಂಡರ ನಿರುತ್ಸಾಹವೇ ಕಾರಣವಾಗಿದೆ. ತುಮಕೂರು ನಗ ವಿಧಾನ ಕ್ಷೇತ್ರಕ್ಕೆ ಸೀಮಿತವಾಗಿ ನಡೆಯುತ್ತಿರುವ ಪಂಚರತ್ನ ಯಾತ್ರೆಯ ನೇತೃತ್ವ ವಹಿಸಿರುವ ಗೋವಿಂದರಾಜು ಅವರು ಮುಖಂಡರ ಸಲಹೆ, ಸಹಕಾರವನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದಕ್ಕೆ ಜಾಸ್ ಟೋಲ್ ಬಳಿ ಸೇರಿದ್ದ ಕಾರ್ಯಕರ್ತರೇ ಸಾಕ್ಷಿಯಾಗಿದ್ದಾರೆ.
ಮೊದಲಿನಿಂದಲೂ ಜೆಡಿಎಸ್ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಪಂಚರತ್ನ ಯಾತ್ರೆಗೆ ತಮ್ಮ ಹಿಂಬಾಲಕರ ಮೂಲಕವೇ ಸಿದ್ಧತೆ ಪ್ರಾರಂಭಿಸಿ,ಮೂಲ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದ್ದರ ಪರಿಣಾಮ ಹೆಚ್.ಡಿ.ಕೆ. ಸ್ವಾಗತಿಸಲು ಬೆರಳೆಣಿಕೆಯಷ್ಟು ಮಂದಿ ಸೇರಿದ್ದರು.
ತುಮಕೂರು ಜಿಲ್ಲೆಯ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆಗೆ ಸಿದ್ಧತೆಗೊಂಡಷ್ಟು ನಗರ ಸಿದ್ಧತೆ ನಡೆಸಿಲ್ಲ, ಬಿಜೆಪಿ ಮತದಾರರು ಹೆಚ್ಚಿರುವ ಕಡೆಗೆ ಯಾತ್ರೆ ಹೋಗದಂತೆ ಮಾರ್ಗವನ್ನು ಸಿದ್ಧಪಡಿಸಿರುವ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಪಂಚರತ್ನ ಯಾತ್ರೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ನಗರ ಘಟಕ ವಿಫಲವಾಗಿದ್ದು,ಅಕ್ಕಪಕ್ಕದ ಕ್ಷೇತ್ರದ ಮುಖಂಡರ ಸಹಕಾರವನ್ನು ಪಡೆಯದ ಪರಿಣಾಮ ಪಂಚರತ್ನ ಯಾತ್ರೆ ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿಸಿದೆ ಎಂದರೆ ತಪ್ಪಾಗಲಾರದು.