ರೋಟರಿ ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಸಂಪೂರ್ಣ ಬೆಂಬಲ : ಶಾಸಕ ಜಿ.ಬಿ.ಜೋತಿಗಣೇಶ್
ತುಮಕೂರು : ರೋಟರಿ ಸಂಸ್ಥೆ ನಿರ್ವಹಿಸುತ್ತಿರುವ ಎಲ್ಲಾ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು,ಅವರ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ತುಮಕೂರು ನಗರ ಶಾಸಕ ಜಿ.ಬಿ,ಜೋತಿಗಣೇಶ್ ತಿಳಿಸಿದ್ದಾರೆ.
ರೋಟರಿ ಸಂಸ್ಥೆವತಿಯಿಂದ ನಗರದ ಎಸ್.ಎಸ್.ಪುರಂನ ಶಿವಲಾಸ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತೃಪ್ತಿ,ದೇಶ ಕಟ್ಟುವ ಕೆಲಸದಲ್ಲಿ ತೊಡಗಿರುವ ಶಿಕ್ಷಕರು,ವೈದ್ಯರು,ಇಂಜಿನಿಯರ್‌ಗಳು ಹಾಗೂ ಗ್ರಂಥಪಾಲಕರಿಗೆ ಸೇವಾರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಶಾಲೆ,ಕಾಲೇಜು ನಿರ್ಮಾಣ,ಬಡಜನರಿಗೆ ಅನೇಕ ಅನುಕೂಲ ಕಲ್ಪಿಸುವ ಕೆಲಸವನ್ನು ಆನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ.ಇದೊಂದು ಬೆಸ್ಟ್ ಎನ್.ಜಿ.ಓ ಎಂದು ಪ್ರಶಂಶಿಸಿದರು.
ಸಮಾಜದ ಅಭಿವೃದ್ದಿಯಲ್ಲಿ ಶಿಕ್ಷಕರು,ಇಂಜಿನಿಯರ್‌ಗಳು,ವೈದ್ಯರು ಹಾಗೂ ಗ್ರಂಥಪಾಲಕರ ಪಾತ್ರ ಮಹತ್ವದ್ದಾಗಿದ್ದು, ಇವರುಗಳನ್ನು ಗುರುತಿಸಿ,ಅಭಿನಂದಿಸುತ್ತಿರುವುದು ಉತ್ತಮ ಕೆಲಸ.ರೋಟರಿಯಂತಹ ಸಂಸ್ಥೆ ಎಲೆಮರೆ ಕಾಯಿಯಂತೆ ಕೆಲಸ ಮಾಡಿದವರನ್ನು ಗುರುಸುವುದು ಮುಖ್ಯ.ಚುನಾವಣೆ ವೇಳೆ ಯಾರು ಬೇಕಾದರೂ ಜನನಾಯಕನಾಗಬಹುದು. ಇಂದು ಹಣವಿದ್ದವರೆಲ್ಲಾ ಸಮಾಜಸೇವೆಯ ಹೆಸರಿನಲ್ಲಿ ಜನನಾಯಕರಾಗಲು ಹೊರಟಿದ್ದಾರೆ.ಆದರೆ ರೋಟರಿ ಸಂಸ್ಥೆಯವರು ವರ್ಷದ 365 ದಿನವೂ ಜನನಾಯಕರೇ,ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿ,ಜಗತ್ತಿನಲ್ಲಿ ಎಲ್ಲರೂ ಸಂತೋಷವನ್ನು ಎಲ್ಲರೂ ಅಪೇಕ್ಷೆ ಪಡುವಂತಹವರೇ,ಕ್ಷಣಿಕ ಸುಖಃಕ್ಕಿಂತ,ನಿರಂತರ ಸುಖಃಕ್ಕೆ ಹೆಚ್ಚಿನ ಬೆಲೆ ಇದೆ.ತಮ್ಮ ಜೀವನ ಬದಲಾವಣಗೆ ಶ್ರಮಿಸಿದ ಶಿಕ್ಷಕರು,ವೈದ್ಯರು,ಗ್ರಂಥಪಾಲಕರನ್ನು ಗುರುತಿಸಿ,ಅಭಿನಂದಿಸುವುದು ಅತ್ಯಂತ ಪರಮಸುಖಃಕ್ಕೆ ಸಮಾನ.ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೂ,ಒಳ್ಳೆಯದನ್ನು ಪ್ರೋತ್ಸಾಹಿಸಿದರೆ ಹೆಚ್ಚಿನ ಸಂತೋಷ ಉಂಟಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ ಮಾತನಾಡಿ,ರೋಟರಿ ಸಂಸ್ಥೆ ತನ್ನ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಹಿರಿಯರು, ಸಮಾಜಕ್ಕಾಗಿ ದುಡಿದವರನ್ನು ಗೌರವಿಸುವುದು ಒಂದು.ಈ ಹಿನ್ನೇಲೆಯಲ್ಲಿ ಮಣ್ಣಿನ ಮುದ್ದೆಯಾಗಿದ್ದ ಮನುಷ್ಯನೆಂಬ ಜೀವಿಯನ್ನು ತಿದ್ದಿ ತಿಡಿ ಅಕ್ಷರ ಕಲಿಸಿದ ಗುರುಗಳು, ವ್ಯಕ್ತಿ ಸಾವಿನ ಅಂಚಿನಲ್ಲಿದ್ದರೂ ಧೈರ್ಯ ತುಂಬುವ ವೈದ್ಯರು,ಒಳ್ಳೆಯದನ್ನು ಕಲಿಯಲು ಪ್ರೇರೆಪಿಸಿದ ಗ್ರಂಥಪಾಲಕರು ಹಾಗು ಸಂಘ ಜೀವಿಯಾದ ಮನುಷ್ಯನಿಗೆ ನಾಗರಿಕ ಸಮಾಜದಲ್ಲಿ ಬದುಕಲು ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲು ದುಡಿಯುತ್ತಿರುವ ಇಂಜಿನಿಯರ್‌ಗಳನ್ನು ಗುರುತಿಸಿ,ಸನ್ಮಾನಿಸುವ ಕೆಲಸವನ್ನು ಇಂದು ಮಾಡಲಾಗುತ್ತಿದೆ.ಇಂದು ಶಿಕ್ಷಕರಾದ ಮಲ್ಲೇಶಪ್ಪ, ಹೆಚ್.ಎಂ.,ಶ್ರೀಮತಿ ಗೌರಮ್ಮ ಶಾಂತಕುಮಾರ್,ವೈದ್ಯರಾದ ಡಾ.ಎ.ಎಂ.ಜಗದೀಶ್, ಡಾ.ಸಂತೋಷಕುಮಾರ್, ಇಂಜಿನಿಯರ್ ಗಳಾದ ಗಂಗಾಧರ್, ಶಿವಕುಮಾರ್ ಎಂ., ಗ್ರಂಥಪಾಲಕರಾದ ಡಾ.ಮುತ್ತುರಾಜ್ ಎಸ್, ಅಂಜನ್ ನಾಯಕ್ ಅವರುಗಳಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದರು.
ವೇದಿಕೆಯಲ್ಲಿ ರೋಟರಿ ಕಾರ್ಯದರ್ಶಿ ಉಮೇಶ್,ಎನ್.ಸಿ, ನಿರ್ದೇಶಕರಾದ ಶ್ರೀಮತಿ ಭಾಗ್ಯಲಕ್ಷ್ಮಿನಾಗರಾಜು, ಮಾಜಿ ಅಧ್ಯಕ್ಷರಾದ ಎಂ.ಎಸ್.ಉಮೇಶಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.