ಜಿಲ್ಲೆತುಮಕೂರುತುಮಕೂರು ನಗರಸುದ್ದಿ

ಸಂಭ್ರಮದ ತುಮಕೂರು ದಸರಾ ಉತ್ಸವ : ಉತ್ಸಾಹದಿಂದ ಪಾಲ್ಗೊಳ್ಳಲು ಸಾರ್ವಜನಿಕರಲ್ಲಿ ಸಿಇಓ ಮನವಿ

ತುಮಕೂರು : ಜಿಲ್ಲೆಯಲ್ಲಿ ಸಂಭ್ರಮದ ದಸರಾ ಉತ್ಸವದ ಭಾಗವಾಗಿ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಾಸ್ಯ ಚಕ್ರವರ್ತಿ ಟಿ.ಆರ್. ನರಸಿಂಹರಾಜು ವೇದಿಕೆಯಲ್ಲಿ ಅಕ್ಟೋಬರ್ 10ರವರೆಗೂ ನಡೆಯಲಿರುವ ಯುವ ದಸರಾ ಕಾರ್ಯಕ್ರಮದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಗಿದ್ದು, ಅಕ್ಟೋಬರ್ 10ರ ವರೆಗೂ ಪ್ರತಿ ದಿನ ಸಂಜೆ 5 ಗಂಟೆಯಿಂದ ಜರುಗಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಗಳ ಸವಿಯನ್ನು ಸವಿಯಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮನವಿ ಮಾಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ದಸರಾ ಪ್ರಯುಕ್ತ ಮಹಿಳಾ ದಸರಾ ಕಾರ್ಯಕ್ರಮದಡಿ ನಗರದ ಎನ್‌ಸಿಸಿ ಕಚೇರಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೂ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಬಿಡಿಸಿದ ಬಣ್ಣದ ಚಿತ್ತಾರಗಳು ನೋಡುಗರ ಕಣ್ಮನ ಸೆಳೆದವು. ದಸರಾ ಸಂದರ್ಭದಲ್ಲಿ ಇಂದಿನಿಂದ ನಗರದ ಅಮಾನಿಕೆರೆಯಲ್ಲಿ ದೋಣಿ ವಿಹಾರ ಆರಂಭಗೊಳ್ಳಲಿದ್ದು, ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರು ದೋಣಿ ವಿಹಾರದ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವೈಭವಯುತ ದಸರಾ ಕಾರ್ಯಕ್ರಮವನ್ನು ನಂದಿಧ್ವಜ ಪೂಜೆಯೊಂದಿಗೆ ಚಾಲನೆ ನೀಡಿದ್ದು, ಹಾಸ್ಯ ಚಕ್ರವರ್ತಿ ಟಿ.ಆರ್. ನರಸಿಂಹರಾಜು ವೇದಿಕೆಯಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರತೀ ದಿನ ಸಂಜೆ 5 ರಿಂದ 10 ಗಂಟೆಯವರೆಗೂ 5 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಕುಟುಂಬದೊಂದಿಗೆ ಆಗಮಿಸಿ ಜಿಲ್ಲೆಯ ಸ್ಥಳೀಯ ಕಲಾ ವೈಭವನ್ನು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಿದರು.
ಅಲ್ಲದೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲೆಯ ವನ್ಯಸಂಪತ್ತು ಕುರಿತು ಅರಣ್ಯ ಇಲಾಖೆಯಿಂದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಜನರ ಸಂತಸ, ಆರೋಗ್ಯ, ಸಮೃದ್ಧಿಗಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಧಾರ್ಮಿಕ ಮಂಟಪದಲ್ಲಿ ತಾಯಿ ಚಾಮುಂಡಿ ದೇವಿಗೆ ವಿವಿಧ ಅಲಂಕಾರ, ನಿತ್ಯ ಪೂಜೆ ಸಲ್ಲಿಸಲಾಗುವುದಲ್ಲದೆ, ಇಡೀ ನಗರ ಝಗಮಗಿಸುವಂತೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ನಮ್ಮ ಕಲೆ, ಸಂಸ್ಕೃತಿ ಉಳಿಸಿ-ಬೆಳಸುವ ನಿಟ್ಟಿನಲ್ಲಿ ಎಲ್ಲರೂ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker