ನೂತನ ಬಸ್ ನಿಲ್ದಾಣ : ಪ್ರಯಾಣಿಕರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು : ನಗರದಲ್ಲಿ ಶನಿವಾರ ಲೋಕಾರ್ಪಣೆಗೊಂಡ ಶ್ರೀ ಡಿ. ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭಾನುವಾರ ಬೆಳಿಗ್ಗೆ 8:30 ಗಂಟೆಗೆ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಹಾಗೂ ನಿಲ್ದಾಣದ ಹೊರಭಾಗದಲ್ಲಿರುವ ಆಟೋ ಚಾಲಕರ ಪಾರ್ಕಿಂಗ್ ಸಮಸ್ಯೆಗಳನ್ನು ಆಲಿಸಿದರು.
ಶೀಘ್ರವೇ ನಿಲ್ದಾಣದ ಮುಂಭಾಗ ಆಟೋ ನಿಲ್ಲಿಸಲು ವ್ಯವಸ್ಥೆ ಮಾಡಬೇಕೆಂದು ಕೆಎಸ್‌ಆರ್‌ಟಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತ್ರಿವೇಣಿಗೆ ನಿರ್ದೇಶನ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ತ್ರಿವೇಣಿ ಅವರು ಬಾಕಿ ಇರುವ ಸಣ್ಣ ಪುಟ್ಟ ಕಾಮಗರಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಲಿಫ್ಟ್ ಕಾರ್ಯಾಚರಣೆ, ಶೌಚಾಲಯ, ವಿದ್ಯುತ್ ಸಂಪರ್ಕ, ಸೈನ್ ಬೋರ್ಡ್, ಸಿಸಿಟಿವಿ ಕ್ಯಾಮೆರಾ, ಪ್ರಯಾಣಿಕರ ಮಾಹಿತಿಗಾಗಿ ಟಿವಿ ಅಳವಡಿಕೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಟಿ.ಸಿ.ಪಾಯಿಂಟ್ ಹಾಗೂ ಪೊಲೀಸ್ ಚೌಕಿಯಲ್ಲಿ ಮೂಲ ಸೌಕರ್ಯಗಳನ್ನು ಕೂಡಲೇ ಒದಗಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಮಂಜುನಾಥ್, ಬಸ್ ನಿಲ್ದಾಣದ ಮೇಲ್ವಿಚಾರಕ ಬಿ.ಆರ್. ನಾಗರಾಜು, ಟಿಸಿ ಮಹಮದ್ ರಫೀಕ್, ನರೇಂದ್ರ ಬಾಬು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದ್ದರು.