ಭಾರತ್ ಜೋಡೋ ಯಾತ್ರೆ 3 ಐಕ್ಯತಾ ಆಶಯಗಳೊಂದಿಗೆ ರಾಹುಲ್ ಗಾಂಧಿ ನಡಿಗೆ : ಡಾ.ಸಿ.ಎಸ್.ದ್ವಾರಕನಾಥ್
ಸಂವಿಧಾನದಲ್ಲಿ ನಂಬಿಕೆ ಇರುವ ಪಕ್ಷಗಳು ಹಾಗೂ ಸಂಘಟನೆಗಳಿಗೆ ಆಹ್ವಾನ
ತಿಪಟೂರು : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಪ್ರಮುಖವಾಗಿ 3 ಆಶಯಗಳಡಿ ನಡೆಯುತ್ತಿದೆ. ರಾಹುಲ್ ಗಾಂಧಿ ದ್ವೇಷ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಶ್ನೆಗಳನ್ನಿಟ್ಟುಕೊಂಡು ‘ಐಕ್ಯತಾ’ ಹೆಜ್ಜೆ ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ನೈತಿಕ ಪ್ರಜ್ಞೆಯಿದೆ. ಅವರ ಸರ್ಟಿಫಿಕೇಟ್ ಗಳು ನಕಲು ಅಲ್ಲ. ಅವರು ಸುಳ್ಳು ಹೇಳಲ್ಲ. ಸೃಷ್ಟಿಯಲ್ಲಿ ಯಾವಾಗ ಅನ್ಯಾಯ, ಅಧರ್ಮ ಮಿತಿ ಮೀರಿ ಹೆಚ್ಚಾಗುತ್ತಿದೋ ಆಗ ನಾನು ಧರ್ಮ ರಕ್ಷಣೆಗೆ , ಶಿಷ್ಟರ ಉಳಿವಿಗೆ ಅವತಾರ ಎತ್ತಿ ಬರುತ್ತೇನೆ. ‘ಧರ್ಮ ಸಂಸ್ಥಾಪನಾಯಾರ್ಥ ಸಂಭವಾಮಿ ಯುಗೇ ಯುಗೇ’ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಈಗ ಯಾರೂ ಬಂದಿರಲಿಲ್ಲ. ರಾಹುಲ್ ಗಾಂಧಿ ಪ್ರೀತಿಯಿಂದ ಎಲ್ಲರನ್ನೂ ಒಂದು ಗೂಡಿಸುತ್ತೇನೆಂದು ಬಂದಿದ್ದಾರೆ. ದ್ವೇಷ ಬೇಡ ನಾವೆಲ್ಲಾ ಒಂದು ಎನ್ನುತ್ತಿರುವ ಅವರ ಜತೆ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.
ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲಾ ಜ್ಯಾತ್ಯಾತೀತ,ಸಂವಿಧಾನದಲ್ಲಿ ನಂಬಿಕೆ ಇರುವ ಪಕ್ಷಗಳು, ನೂರಾರು ಸಂಘಟನೆಗಳಿಗೆ ಆಹ್ವಾನ ನೀಡಿದ್ದೇವೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಲಭೂತ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಅನ್ನ,ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ವಿಚಾರಗಳನ್ನು ಎತ್ತಿದಾಗ ಅವುಗಳನ್ನು ಮರೆಮಾಚಲು ಯಾವುದಾದರೂ ಬೇರೆ ವಿಷಯಗಳನ್ನು ಮುನ್ನೆಲೆಗೆ ತರುತ್ತವೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದಾಗ ಅದರ ವಿರುದ್ಧದ ಧ್ವನಿ ಅಡಗಿಸಲು ವ್ಯವಸ್ಥಿತವಾಗಿ ವಿಷಯಾಂತರ ಮಾಡುತ್ತಾರೆ. ಚಿರತೆ ಕರೆದುಕೊಂಡು ಪ್ರಚಾರ ಪಡೆಯುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಜಿಎಸ್‌ಟಿ ಹೆಸರಲ್ಲಿ ಲೂಟಿ : ಹಾಲು,ಮೊಸರು ಎಲ್ಲದಕ್ಕೂ ಜಿಎಸ್ ಟಿ ಜಾರಿಗೆ ತಂದು ಸಾರ್ವಜನಿಕರು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಜಿ ಎಸ್ ಟಿ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ಆ ಹಣದಲ್ಲಿ ಜನರಿಗೆ ಏನು ಕೊಡುತ್ತಾರೆ? ಆರೋಗ್ಯ, ಶಿಕ್ಷಣ , ನಿರುದ್ಯೋಗ ಯಾವ ಸಮಸ್ಯೆಯನ್ನು ಬಗೆಹರಿಸಿದ್ದಾರೆಂದು ಪ್ರಶ್ನಿಸಿದರು.
ಚಕ್ರತೀರ್ಥ ಟ್ರೊಲರ್! : ರೋಹಿತ್ ಚಕ್ರತೀರ್ಥ ಒಬ್ಬ ಟ್ರೋಲರ್. ಅವನೇನು ಶಿಕ್ಷಣ ತಜ್ಞನಾ ಅಥವಾ ಯಾವುದಾದರೂ ಕ್ಷೇತ್ರದ ಗಣ್ಯ ವ್ಯಕ್ತಿನಾ? ಟ್ರೋಲ್ ಮಾಡಿಕೊಂಡಿದ್ದವನನ್ನು ಪಠ್ಯ ಪರಿಷ್ಕರಣೆಗೆ ಬಿಟ್ಟರು. ಅವರು ಬಸವಣ್ಣ ,ಕುವೆಂಪು ಸೇರಿದಂತೆ ನಮ್ಮ ನೆಲದ ಅಸ್ಮಿತೆಗೆ ದಕ್ಕೆ ತಂದು ವಿಕೃತಿಗೊಳಿಸಿ ವಿವಾದ ಸೃಷ್ಟಿಸಿದ. ನನ್ನ ಬಗ್ಗೆಯೂ ಹಿಂದೆ ಟ್ರೋಲ್ ಮಾಡಿದ್ದ. ನಾನು ಕೇಸ್ ಹಾಕಿದ್ದೆ ಎಂದು ದ್ವಾರಕಾನಾಥ್ ತಿಳಿಸಿದರು.
ಕಲಾಕೃತಿಗಳ ಮೆರಗು : ಸಿ.ಬಿ.ಶಶಿಧರ್ ನೇತೃತ್ವದ ಜನಸ್ಪಂದನಾ ಟ್ರಸ್ಟ್ ಹಾಗೂ ಬೆಂಗಳೂರಿನ ಬಿ.ಕಲ್ಚರ್ ಎಂಬ ಸಂಸ್ಥೆ ಒಡಗೂಡಿ ಅಂತರಾಷ್ಟ್ರೀಯ ಮಟ್ಟದ ಸುಮಾರು 20-30 ಕಲಾವಿದರು ರಚಿಸಿರು ಭಾರತ್ ಜೂಡೋಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಪಾದಯಾತ್ರೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಕಲಾಕೃತಿಗಳ ಪ್ರದರ್ಶನವನ್ನು ರಾಹುಲ್ ಗಾಂಧಿ ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಈ ಕಲಾಕೃತಿ ಪ್ರದರ್ಶನಕ್ಕೆ ಚಿಂತನೆ ನಡೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ತ್ರಿಯಂಬಕ, ಲೇಖಕ ಗಂಗಾಧರಯ್ಯ , ಭೂಮಿ ಕಲಾತಂಡದ ಸತೀಶ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್, ಪ್ರಮುಖರಾದ ಯುವನಾಯಕ ಪುನೀತ್, ಶಂಕರ್, ಶರತ್ ಮತ್ತಿತರರಿದ್ದರು.