ಹಾಲೇನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ : ಜಿಲ್ಲಾಧಿಕಾರಿಗಳಿಗೆ ಅದ್ದೂರಿ ಸ್ವಾಗತ : ಸುವರ್ಣ ಪ್ರಗತಿ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್
ಗ್ರಾಮದ ಸಮಸ್ಯೆಗಳ ಮುಕ್ತ ಚರ್ಚೆಗೆ ಉತ್ತಮ ವೇದಿಕೆ
ತಿಪಟೂರು : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನಪರ ಹಾಗೂ ಪಾರದರ್ಶಕತೆಯಿಂದ ಕೂಡಿದ್ದು, ಗ್ರಾಮದ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸಲು, ಮುಕ್ತವಾಗಿ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಣಕಿಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ 11ನೇ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ ಗ್ರಾಮದಲ್ಲಿ ಬಗೆಹರಿಯದ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವುದರ ಮೂಲಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯಾದ್ಯಂತ ಜಿಲ್ಲಾಡಳಿತವು ನ್ಯಾಯಯುತ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ತಮ್ಮ ಹಂತದಲ್ಲಿ ಬಗೆಹರಿಯುವಂತಹ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಗುವುದಲ್ಲದೇ ಸರ್ಕಾರದ ಮಟ್ಟದ್ದಾಗಿದ್ದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದರು. ಜಿಲ್ಲೆಯಲ್ಲಿ ಹೊಸದಾಗಿ ಸುಮಾರು 519 ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ವಿತರಣಾ ಕೆಲಸವನ್ನು ಮೂರು ತಿಂಗಳಿನಲ್ಲಿ ಮಾಡಲಾಗುವುದು. ಜಿಲ್ಲೆಯಲ್ಲಿರುವ ಸುಮಾರು 2500 ಹಳ್ಳಿಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸಿಕೊಡಲಾಯಿತು. ಕಂದಾಯ ಇಲಾಖೆಯಿಂದ ವಿವಿಧ ಮಾಶಾಸನಗಳ ಆದೇಶ ಪ್ರತಿ,. ತೋಟಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕ ಸ್ಟ್ರಿಂಕ್ಲರ್, ಶಿಶು ಅಭಿವೃದ್ಧಿ ಯೋಜನೆಯಡಿ ಸುಕನ್ಯ ಸಮೃದ್ದಿ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್, ತೋಟಗಾರಿಕೆ ಇಲಾಖೆಯ ಎನ್‌ಹೆಚ್‌ಎಂ ಯೋಜನೆಯ ಫಲಾನುಭವಿಗಳಿಗೆ ಮಿನಿ ಟ್ರಾö್ಯಕ್ಟರ್, ಬೆಸ್ಕಾಂ ಇಲಾಖೆಯ ಬೆಳಕು ಯೋಜನೆಯಡಿ ಪ್ರಮಾಣಪತ್ರ, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ ಹಾಗೂ ಲೇಬರ್ ಕಾರ್ಡ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹಾಗೂ ಅಧಿಕಾರಿ ವರ್ಗದವರು ಹಾಲೇನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಗ್ರಾಮಪಂಚಾಯತಿ ಅಧ್ಯಕ್ಷ ಎಂ.ಡಿ. ಮಂಜುನಾಥ್, ಉಪಾಧ್ಯಕ್ಷ ಶಿವಕುಮಾರ್, ಉಪವಿಭಾಗಾಧಿಕಾರಿ ಕಲ್ಪಶ್ರೀ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ತೋಟಗಾರಿಕೆ ಉಪನಿರ್ದೇಶಕ ರಘು, ಕಾರ್ಮಿಕಾಧಿಕಾರಿ ಡಾ. ರಮೇಶ್, ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣ, ತಹಶೀಲ್ದಾರ್ ಚಂದ್ರಶೇಖರ್, ನಗರಸಭೆ ಆಯುಕ್ತ ಉಮಾಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುವರ್ಣ ಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಹಾಲೇನಹಳ್ಳಿ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರಸ್ತೆ ಕಾಮಗಾರಿ, ಪಡಿತರ ನ್ಯಾಯ ಬೆಲೆ ಅಂಗಡಿ, ಗ್ರಾಮಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಆದೇಶವನ್ನು ತ್ವರಿತವಾಗಿ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.