ದಾವಣಗೆರೆ: ಮಾಜಿ ಮುಖ್ಯಮಂತ್ರಿ ‘ಅಹಿಂದ’ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಇಂದು ಬುಧವಾರ ಆಗಸ್ಟ್ 3ಕ್ಕೆ 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು ಸಿದ್ದರಾಮೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ.
ಬೆಳಗ್ಗೆಯಿಂದಲೇ ಕನ್ನಡ ನಾಡಿನ ಮೂಲೆ ಮೂಲೆಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಲಕ್ಷಗಟ್ಟಲೆ ಜನ ದಾವಣಗೆರೆಯತ್ತ ಮುಖ ಮಾಡಿದ್ದಾರೆ. ಹಲವರು ನಿನ್ನೆಯೇ ದಾವಣಗೆರೆಗೆ ಬಂದು ಬೀಡುಬಿಟ್ಟಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆಂದ ಮೇಲೆ ಅದಕ್ಕೆ ಸರಿಯಾದ ಊಟ-ತಿಂಡಿ, ಆಸನ ವ್ಯವಸ್ಥೆ, ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆ, ಕೆಳಗೆ ಸಭಾಂಗಣದಲ್ಲಿ ಆಸನ ವ್ಯವಸ್ಥೆಯನ್ನು ಚಾಚೂ ತಪ್ಪದೆ, ಯಾವುದಕ್ಕೂ ಚ್ಯುತಿ ಬರದಂತೆ ನೋಡಿಕೊಳ್ಳುತ್ತಿದ್ದಾರೆ.
ಎಲ್ ಇಡಿ ಮೆರುಗು: 200/100 ಅಳತೆ ಮುಖ್ಯ ವೇದಿಕೆಯಲ್ಲಿ ಇಂದು ಸುಮಾರು ಎರಡು ಗಂಟೆ ಕಾರ್ಯಕ್ರಮವಿರುತ್ತದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್,ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಮುಖ್ಯವೇದಿಕೆಗೆ ಹೊಂದಿಕೊಂಡು ಕಾರ್ಯಕರ್ತರು ಮುಖಂಡರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಐದರಿಂದ ಆರು ಉಪವೇದಿಕೆಗಳು ಈಗಾಗಲೇ ಸಜ್ಜಾಗಿವೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಉಪ ವೇದಿಕೆಗಳಲ್ಲಿಯೂ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಬಿಸಿಬೇಳೆಬಾತ್, ಮೈಸೂರು ಪಾಕ್: ಸಿದ್ದರಾಮೋತ್ಸವ ನಡೆಯುವ ಸ್ಥಳದಲ್ಲಿ 4.5 ಲಕ್ಷ ಕುರ್ಚಿಗಳನ್ನು ಹಾಕಲಾಗಿದ್ದು 6 ಲಕ್ಷಕ್ಕೂ ಅಧಿಕ ಮಂದಿ ಇಂದು ಭಾಗಿಯಾಗುವ ನಿರೀಕ್ಷೆಯಿದೆ. ಉತ್ಸವಕ್ಕೆ ಬರುವವರಿಗೆ ಈ ಜಡಿ ಮಳೆಗೆ ತಿನ್ನಲು ಬಿಸಿಬಿಸಿ ಬಿಸಿಬೇಳೆ ಬಾತ್, ಸಿಹಿಯಾದ ಮೈಸೂರು ಪಾಕ್ ಮತ್ತು ಇತರೆ ತರಹೇವಾರಿ ತಿಂಡಿ ತಿನಿಸುಗಳನ್ನು ತಯಾರಿಸುವ ಸಿದ್ಧತೆ ನಡೆಯುತ್ತಿದೆ.
ಕಳೆದ ಒಂದು ವಾರದಿಂದ ಹಾಲು ತುಪ್ಪ ಎಣ್ಣೆಯಿಂದ 5 ಲಕ್ಷ ಗರಿಗರಿ ಮೈಸೂರು ಪಾಕ್ ತಯಾರಿಸಲಾಗಿದೆ. ಒಂದೇ ಬಾರಿ 10 ಸಾವಿರ ಕಾರ್ಯಕರ್ತರಿಗೆ ಉಣಬಡಿಸುವುದಕ್ಕೆ ಕೌಂಟರ್ ಗಳು ಸಜ್ಜಾಗಿವೆ. ಸುಮಾರು 2, 500 ಅಡುಗೆ ಸಿಬ್ಬಂದಿಗಳು ಭರ್ಜರಿ ಊಟ ತಯಾರಿಸಲು ಮುಂದಾಗಿದ್ದಾರೆ.
ಬಿಗಿಭದ್ರತೆ : ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಹುಟ್ಟುಹಬ್ಬವನ್ನು ಕಾರ್ಯಕರ್ತರು ಆಚರಿಸುತ್ತರಾದರೂ ಇದರ ಹಿಂದೆ ರಾಜಕೀಯ ಛಾಯೆ ದಟ್ಟವಾಗಿ ಕಾಣಿಸದೆ ಇರುವುದಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಸೇರುತ್ತಾರೆ. ಬಿಗಿ ಭದ್ರತೆ ಇರಲೇಬೇಕು. ಬಿಗಿ ಭದ್ರತೆಗಾಗಿ 16 ಡಿವೈಎಸ್ಪಿಗಳು, 118 ಪೊಲೀಸ್ ಇನ್ಸ್ಪೆಕ್ಟರ್ಗಳು, 360 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳು, 354 ಎಎಸ್ಐಗಳು, 2,796 ಪೊಲೀಸ್ ಪೇದೆಗಳು, ಕೆಎಸ್ಆರ್ಪಿ, ಡಿಎಆರ್ ಪೊಲೀಸರು, ಹೋಂ ಗಾರ್ಡ್ಗಳು ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಭದ್ರತೆ ಕೈಗೊಂಡಿರುವ ಪೊಲೀಸರು ಜನರ ಚಲನವಲನದ ಮೇಲೆ ನಿಗಾ ಇಡಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ.ಸಮಾರಂಭದಲ್ಲಿ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುತ್ತಿರುವುದರಿಂದ ಬರುವ ನೂರಾರು ವಾಹನಗಳಿಗೆ ಹಲವು ಪಾರ್ಕಿಂಗ್ ವಲಯಗಳನ್ನು ಪೊಲೀಸರು ಗುರುತಿಸಿದ್ದಾರೆ. ಭಾರೀ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ಲಘು ಮೋಟಾರು ವಾಹನಗಳು ಮತ್ತು ಬಸ್ಸುಗಳನ್ನು ದಾವಣಗೆರೆ ನಗರದ ಮೂಲಕ ಹಳೆ ಪುಣೆ-ಬೆಂಗಳೂರು ರಸ್ತೆಗೆ ತಿರುಗಿಸಲಾಗುತ್ತಿದೆ ಎಂದು ಎಸ್ಪಿ ಸಿ.ಬಿ.ರೈಶ್ಯಂತ್ ತಿಳಿಸಿದ್ದಾರೆ. ನೂರಾರು ಬಸ್ಗಳು ಮತ್ತು 30,000 ಸಾವಿರಕ್ಕೂ ಹೆಚ್ಚು ವಾಹನಗಳಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮ ಮುಗಿದ ಕೂಡಲೇ ಸಿದ್ದರಾಮಯ್ಯನವರು ಕಾಗಿನೆಲೆ ಮಠದ ಬೆಳ್ಳೂಡಿ ಶಾಖೆಗೆ ಭೇಟಿ ನೀಡಿ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಲಿದ್ದಾರೆ. ಬೆಂಗಳೂರಿಗೆ ವಾಪಸಾಗುವಾಗ ಸಿರಿಗೆರೆಯ ತರಳಬಾಳು ಮಠ ಹಾಗೂ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ತೆರಳಿ ಸ್ವಾಮೀಜಿಗಳಿಗೆ ಪೂಜೆ ಸಲ್ಲಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಚೇತನ್ ಕುಮಾರ್ ಬರೆದಿರುವ ಮೈಸೂರು ಹುಲಿಯ… ಸ್ವಯಂ ನಿರ್ಮಿತ ಸಿದ್ದಣ್ಣ ಎಂಬ ಗೀತೆಯನ್ನು ಗಿರಿಜಾ ಸಿದ್ದಿ ಮತ್ತು ರವೀಂದ್ರ ಸೊರಗಾವಿ ಹಾಡಲಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ವಿವಿಧ ಯೋಜನೆಗಳನ್ನು ಶ್ಲಾಘಿಸುವ ಹಾಡುಗಳು ಇರುತ್ತವೆ.
ಸಿದ್ದರಾಮೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ನಿನ್ನೆ ಮತ್ತು ಇಂದು ದಾವಣಗೆರೆಯ ಬಹುತೇಕ ಹೋಟೆಲ್ ಲಾಡ್ಜ್ ಗಳು ಬುಕ್ ಆಗಿವೆ. ರಾಜ್ಯದ ಮೂಲೆ ಮೂಲೆಯಿಂದ ಬರುವ ನಾಯಕರು, ಭದ್ರತಾ ಕಾರ್ಯಕ್ಕೆ ಬರುವ ರಕ್ಷಣಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಉಳಿದುಕೊಳ್ಳಲು ಕಾಂಗ್ರೆಸ್ ಮುಖಂಡರೇ ಎಲ್ಲಾ ಹೋಟೆಲ್ ಲಾಡ್ಜ್ ಗಳನ್ನು ಬುಕ್ ಮಾಡಿ ಕೊಟ್ಟಿದ್ದಾರೆ.
ಸಿದ್ದರಾಮೋತ್ಸವ ಹಿನ್ನಲೆಯಲ್ಲಿ ದಾವಣಗೆರೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಹರಿಹರ ನಗರ ರಸ್ತೆ ಗಲ್ಲಿಗಳಲ್ಲಿ ಸಿದ್ದರಾಮಯ್ಯನವರ ಕಟೌಟ್ ಪ್ಲೆಕ್ಸ್ ಬ್ಯಾನರ್ ಗಳು ರಾರಾಜಿಸುತ್ತಿವೆ.