ಶಿರಾ

ಶಿರಾ ಮಿನಿ ವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್ ಸಭೆ : ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ

ಶಿರಾ : ತಾಲ್ಲೂಕಿನಲ್ಲಿ ಇನ್ನೂ 10 ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗೃತೆಯಿಂದ ಇರಬೇಕು. ಗ್ರಾಮ ಪಂಚಾಯಿತಿಗಳಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾರೂ ನೀರಿಗಿಳಿಯಬಾರದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದಲ್ಲಿ ಮಳೆ ಹಾನಿ ಬಗ್ಗೆ ಹಾಗೂ ಮುಂಜಾಗ್ರತೆ ತೆಗೆದುಕೊಳ್ಳುವ ಬಗ್ಗೆ ನಡೆದ ಟಾಸ್ಕ್ಪೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಮಳೆ ಹಾನಿಯಿಂದ ಬಹುತೇಕ ಭಾಗದ ತಗ್ಗು ಪ್ರದೇಶಗಳಲ್ಲಿ, ವಸತಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೃಷಿಕರಿಗೆ ಕೃಷಿ ಚಟುವಟಿಕೆಗಳ ಜಮೀನಿನಲ್ಲಿ ಹೆಚ್ಚು ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. ದಾವೂದ್ ಪಾಳ್ಯದ ಶಿಕ್ಷಕರು ನೀರಿನ ರಭರಸಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಆದ್ದರಿಂದ ಎಲ್ಲಾ ಅಂಶಗಳನ್ನು ಪರಿಗಣಿಸಿ ತಾಲ್ಲೂಕು ಆಡಳಿತದಿಂದ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸಂಬಂಧಪಟ್ಟ ಪಿಡಿಓಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಯಾರೂ ಸಹ ಜಾನುವಾರುಗಳನ್ನು ಮೈತೊಳೆಯಲು ನೀರಿಗಿಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ತಹಶೀಲ್ದಾರ್ ಮಮತ ಮಾತನಾಡಿ ಶಿರಾ ತಾಲ್ಲೂಕಿನಲ್ಲಿ ಜುಲೈ 30 ರಿಂದ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು ತುಂಬಿ ಕೋಡಿ ಹರಿದಿರುವ ಎಲ್ಲಾ ಕೆರೆಗಳಿಗೆ ವಿಕ್ಷಣೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಸಬಾ ಹೋಬಳಿಯಲ್ಲಿ 26 ಮನೆಗಳು, ಹುಲಿಕುಂಟೆ 10 ಮನೆಗಳು, ಗೌಡಗೆರೆ 4 ಮನೆಗಳು, ಬುಕ್ಕಾಪಟ್ಟಣ 5 ಮನೆಗಳು, ಕಳ್ಳಂಬೆಳ್ಳದಲ್ಲಿ 5 ಮನೆಗಳಿಗೆ ಹಾನಿಯಾಗಿದ್ದು ಸಂಬಂಧಪಟ್ಟವರಿಗೆ ಪರಿಹಾರ ಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಂ. ದಾಸರಹಳ್ಳಿ ಗ್ರಾಮದಲ್ಲಿ 3 ಮನೆಗಳಿಗೆ ನೀರು ನುಗ್ಗಿದ್ದು ಅವರಿಗೆ ತಾತ್ಕಾಲಿಕವಾಗಿ ಸರಕಾರಿ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಚನ್ನನಕುಂಟೆ, ಕೋಟೆ, ಚಿಕ್ಕನಹಳ್ಳಿ, ಇನಕನಹಳ್ಳಿ ಗ್ರಾಮಗಳಿಗೆ ಹೋಗುವಾಗ ಸೇತುವೆಗಳ ಮೇಲೆ ಸಂಚರಿಸಬೇಕಿದ್ದು ಅಂತಹ ಕಡೆಗಳಲ್ಲಿ ಎಚ್ಚರಿಕೆಯ ನಾಮಫಲಕ ಹಾಗೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓಗಳು ಮುನ್ನೆಚ್ಚರಿಕೆ ಕ್ರಮವಾಗಿ ಜನರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪರಿಹಾರದ ಚೆಕ್ ವಿತರಣೆ: ತಾಲ್ಲೂಕಿನ ದಾವೂದ್ ಪಾಳ್ಯ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕರಾದ ಆರೀಫ್ ಉಲ್ಲಾ ಖಾನ್ ಅವರು ಮಂಗಳವಾರ ಚನ್ನನಕುಂಟೆ ಸೇತುವೆ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹಾಗೂ ತಹಶೀಲ್ದಾರ್ ಮಮತ ಅವರು 5.00 ಲಕ್ಷ ರೂ.ಗಳ ಚೆಕ್ ನೀಡಿದರು.
ಸಭೆಯಲ್ಲಿ ಡಿವೈಎಸ್‌ಪಿ ನವೀನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್, ನಗರ ಸಿಪಿಐ ಹನುಮಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker