ಮಳೆ ಅವಾಂತರ : ಸೇತುವೆ ದಾಟುತ್ತಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋದ ಶಿಕ್ಷಕ

ಶಿರಾ : ತಾಲ್ಲೂಕಿನ ಇತಿಹಾಸದಲ್ಲಿಯೇ ಹಿಂದೆಂದು ಕಂಡು ಕೇಳರಿಯದಷ್ಟು ಮಳೆಯಾಗಿದ್ದು, ಹತ್ತಾರು ಕೆರೆಗಳು ತುಂಬಿ ಕೋಡಿ ಹರಿದಿವೆ. ಗಿಡಮರಗಳು ನೆಲಕ್ಕುರುಳಿವೆ, ಮನೆಗಳಿಗೆ ನೀರು ನುಗ್ಗಿವೆ, ಅನೇಕ ಅವಘಡಗಳು ಸಂಭವಿಸಿವೆ. ಶಿಕ್ಷಕರೊಬ್ಬರು ಸೇತುವೆ ದಾಟುತ್ತಿದ್ದ ವೇಳೆ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆಯೂ ನಡೆದಿದೆ.
ಮಳೆಗೆ ಕೊಚ್ಚಿಹೋದ ಶೇಂಗಾ ಬೆಳೆ: ಶಿರಾ ತಾಲೂಕಿನಾದ್ಯಂತ ಮರ‍್ನಾಲ್ಕು ದಿನಗಳಿಂದ ಸತತ ಮಳೆಯಿಂದಾಗಿ ತಾಲೂಕಿನ ಮದಲೂರು ಪಂಚಾಯ್ತಿಯ ಗಿಡಗನಹಳ್ಳಿಯ ಗೋವಿಂದರಾಜು ಎಂಬುವರ ಹೊಲದಲ್ಲಿ ಬೆಳೆದ ಶೇಂಗಾ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ.
ಸೇತುವೆ ಕುಸಿದು ಜನ ಜೀವನ ಅಸ್ತವ್ಯಸ್ತ: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮ ಪಂಚಾಯಿತಿಯ ಗ್ರಾಮದಿಂದ ಹಕ್ಕಿಪಿಕ್ಕಿ ಕಾಲೋನಿ ಹಾಗೂ ನವಣೆ ಬೋರನಹಳ್ಳಿ ಸಂಪರ್ಕ ಸೇತುವೆ ಸತತ ಮಳೆಯಿಂದ ಕೊಚ್ಚಿ ಹೋಗಿದ್ದು ಶಾಲಾ ಮಕ್ಕಳು ಸೇರಿದಂತೆ ರೈತರು ತಮ್ಮ ಹೊಲಗಳಿಗೆ ಹೋಗಿ ಮೇವು ತರಲು ಪರದಾಡುವ ಸ್ಥಿತಿ ಉಂಟಾಗಿದೆ. ಕೂಡಲೇ ತಾತ್ಕಾಲಿಕ ದುರಸ್ತಿ ಮಾಡಿಕೊಡಬೇಕೆಂದು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಆಗ್ರಹಿಸಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋದ ಶಿಕ್ಷಕ: ಶಿರಾ ತಾಲ್ಲೂಕಿನ ದಾವೂದ್ ಪಾಳ್ಯ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಆರಿಫ್ ಉಲ್ಲಾ ಖಾನ್ (55) ಎಂಬುವವರು ಶಾಲೆಯಲ್ಲಿ ಕರ್ತವ್ಯ ಮುಗಿಸಿಕೊಂಡು ತಮ್ಮ ಶಿರಾ ನಗರದಲ್ಲಿರುವ ಮನೆಗೆ ಹಿಂತಿರುಗುತ್ತಿದ್ದಾಗ ಚನ್ನನಕುಂಟೆಯ ಸೇತುವೆ ದಾಟುತ್ತಿದ್ದ ವೇಳೆ ಹರಿಯುತ್ತಿದ್ದ ನೀರಿನಲ್ಲಿ ದ್ವಿಚಕ್ರ ವಾಹನ ಸಮೇತ ಕೊಚ್ಚಿ ಹೊಗಿದ್ದಾರೆ. ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ತಹಶೀಲ್ದಾರ್ ಮಮತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮೃತದೇಹ ಹೊರತೆಗೆದಿದ್ದಾರೆ.