ಮೇಜರ್ ಡಿ.ಚಂದ್ರಪ್ಪ ಒಬ್ಬ ಕನ್ನಡ ಸೇವಕ, “ಸಿದ್ಧಗಂಗಾ ಮಠದಲ್ಲಿ ಅರಳಿದ ಕುಸುಮ” : ಬೆಟ್ಟದಹಳ್ಳಿ ಶ್ರೀಗಳು
ಮೇಜರ್ ಡಿ. ಚಂದ್ರಪ್ಪನವರ ನುಡಿನಮನ ಕಾರ್ಯಕ್ರಮ
ತುಮಕುರು : ಶಿಕ್ಷಣ ಮತ್ತು ಸಾಮಾಜಿಕ ಹೋರಾಟವೆಂಬ ಎರಡೂ ಗುಣಗಳನ್ನು ಮೈಗೂಡಿಸಿಕೊಂಡ ಮೇಜರ್ ಡಿ.ಚಂದ್ರಪ್ಪ ಒಬ್ಬ ಕನ್ನಡ ಸೇವಕ. ಕುಗ್ರಾಮದಲ್ಲಿ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿ ಸಿದ್ಧಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ಕಾಲೇಜು ಶಿಕ್ಷಕನಾದ ಕನ್ನಡದ ಕಟ್ಟಾಳು ಎಂದೇ ಖ್ಯಾತರಾದ ಡಿ.ಚಂದ್ರಪ್ಪ ಸಿದ್ಧಗಂಗಾ ಮಠದಲ್ಲಿ ಅರಳಿದ ಕುಸುಮ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ನುಡಿದರು.
ಅವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಮೇಜರ್ ಡಿ. ಚಂದ್ರಪ್ಪನವರ ನುಡಿನಮನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಠ ಮಾನ್ಯಗಳ ಬಗ್ಗೆ ಅಪಾರ ಒಲವಿರಿಸಿಕೊಂಡಿದ್ದ ಇವರು ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿ ಕಾಯಕವನ್ನೇ ಮೈಗೂಡಿಸಿಕೊಂಡು ನಿವೃತ್ತಿಯಾದ ನಂತರ ಶ್ರಮಜೀವಿಯಾಗಿ ತಾವು ಮಾಡಿದ ತೋಟದಲ್ಲಿ ಎಲ್ಲ ಶರಣರನ್ನು ಮತ್ತು ಮಠಾಧಿಪತಿಗಳನ್ನು ಸೇರಿಸಿ ಬೃಹತ್ ಸಮ್ಮೇಳನವನ್ನು ನಡೆಸುವ ಮಹದಾಸೆಯನ್ನು ಹೊಂದಿದ್ದರು. ಅದು ಕೈಗೂಡುವ ಮೊದಲೇ ಲಿಂಗೈಕ್ಯರಾದುದು ಅತ್ಯಂತ ದುಃಖಕರವಾದ ಸಂಗತಿ ಎಂದರು.
33 ವರ್ಷಗಳ ಕಾಲ ಡಿ.ಚಂದ್ರಪ್ಪನವರ ಜೊತೆ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿದ ಪ್ರೊ. ಹೆಚ್.ವಿ.ವೀರಭದ್ರಯ್ಯನವರು ಮಾತನಾಡಿ ಇವರೊಬ್ಬ ಶಿಸ್ತಿನ ಸಿಪಾಯಿ. ವಿದ್ಯಾರ್ಥಿಮಿತ್ರ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷನಾಗಿ ಬೊಧಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದಾತ. ಉದಾರಿ, ಅನೇಕ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಿದಾತ. ಆದರೆ ತುಸು ಮುಂಗೋಪಿಯಾಗಿದ್ದರೂ ಇತರರ ಖಾಯಂ ದ್ವೇಷಿಯಲ್ಲ. ಇಂತಹ ಸದ್ಗುಣಗಳ ಗಣಿ ಎನಿಸಿದ್ದ ಡಿ.ಚಂದ್ರಪ್ಪ ಸ್ನೇಹಜೀವಿಯಾಗಿದ್ದರು ಎಂದರು.
ಡಿ.ಚಂದ್ರಪ್ಪನವರ ಗುರುಗಳಾಗಿದ್ದ ಮೈಸೂರು ವಿ.ವಿ.ಯ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಎಂ.ವಿ.ಶ್ರೀನಿವಾಸ್ ಮಾತನಾಡಿ ಚಂದ್ರಪ್ಪನವರೊಬ್ಬ ಉತ್ತಮ ಸಂಘಟಕ. ಅವರ ಸಂಘಟನಾ ಚಾತರ‍್ಯದಿಂದಲೇ ಅವರ ಅಧ್ಯಕ್ಷಾವಧಿಯಲ್ಲಿ ಅನೇಕ ಸಾಹಿತ್ಯ ಸಮ್ಮೇಳನಗಳು ನಡೆದಿವೆ ಎಂದು ಸ್ಮರಿಸಿ ಅವರು ಇಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯವನ್ನು ಕುರಿತ ಚರ್ಚೆಗಳಾಗದೆ ಕೇವಲ ಟೀಕೆಗಳೇ ವಿಜೃಂಭಿಸುತ್ತವೆ. ಉತ್ತಮ ಸಾಹಿತ್ಯ ಕೃತಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕೇವಲ ಕೃತಿಗಳ ಸಂಖ್ಯೆ ಹೆಚ್ಚಾಗುತ್ತದೆಯೇ ಗುಣಮಟ್ಟ ಕಡಿಮೆಯಾಗುತ್ತಿದೆ. ಇಂತಹ ಆಲೋಚನೆ ಇಟ್ಟುಕೊಂಡಿದ್ದ ಡಿ.ಚಂದ್ರಪ್ಪನವರು ತುಮಕೂರು ಜಿಲ್ಲೆಯ ಬಗ್ಗೆ ಬೃಹತ್ ಗ್ರಂಥವನ್ನು ತರುವುದಕ್ಕೆ ಜಿಲ್ಲಾಮಟ್ಟದ ವಿದ್ವಾಂಸರ ಸಮಿತಿ ನೇಮಿಸಿ ಅದು ತನ್ನ ಕೆಲಸ ಆರಂಭ ಮಾಡಡುವುದರೊಳಗಾಗಿ ಅವರ ಅಧ್ಯಕ್ಷಾವಧಿ ಮುಗಿದದ್ದು ಅತ್ಯಂತ ವಿಷಾದನೀಯ ಸಂಗತಿ ಎಂದರು.
ಜಿಲ್ಲಾ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಮಾತನಾಡಿ ತುಮಕೂರಿನಲ್ಲಿ ಕನ್ನಡ ಭವನ ತಲೆ ಎತ್ತಲು ಕಾರಣರಾದವರಲ್ಲಿ ಒಬ್ಬರಾದ ಡಿ.ಚಂದ್ರಪ್ಪನವರು ಪುಸ್ತಕ ಪ್ರೇಮಿ. ತುಮಕೂರು ಜಿಲ್ಲೆಯಲ್ಲಿ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾದವರು ಯಾರೂ ಇಲ್ಲ. ಇಂತಹ ಪರಂಪರೆ ಇರುವ ಈ ಜಿಲ್ಲೆಯಲ್ಲಿ ಚಂದ್ರಪ್ಪನವರು ಒಮ್ಮೆ ಗೆದ್ದು ಎರಡು ಬಾರಿ ಸ್ಪರ್ಧಿಸಿ ಸೋತರು. ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ಅವರಿಗೆ ಕನ್ನಡ ಭವನದಲ್ಲಿ ಗ್ರಂಥಾಲಯ ಮಾಡಬೇಕೆಂಬ ಅಭಿಲಾಷೆ ಇತ್ತು. ಆದ್ದರಿಂದ ಅವರ ಹೆಸರಿನ ಗ್ರಂಥಾಲಯವನ್ನು ಕನ್ನಡ ಭವನದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪನವರು ಮಾತನಾಡಿ ಕಾಲೇಜಿನಲ್ಲಿ ಐದು ವರ್ಷಗಳ ಕಾಲ ಅವರ ಮೆಚ್ಚಿನ ಶಿಷ್ಯನಾಗಿದ್ದ ನನಗೆ ಚುನಾವಣೆಯಲ್ಲಿ ಅವರ ವಿರುದ್ಧವೇ ಸ್ಪರ್ಧಿಸಬೇಕಾಗಿದ್ದುದು ನೋವಿನ ಸಂಗತಿಯಾಗಿದೆ. ಅನೇಕರ ಪ್ರಯತ್ನದಿಂದ ಡಿ.ಚಂದ್ರಪ್ಪನವರು ಚುನಾವಣೆಯಲ್ಲಿ ನನ್ನ ಪರವಾಗಿ ಹಿಂದೆ ಸರಿದು ಆಶೀರ್ವಾದ ಮಾಡುತ್ತೇನೆಂದು ಹೇಳಿದ್ದರೂ ನಿಷ್ಕಲ್ಮಷ ಹೃದಯಿ ಆಗಿದ್ದ ನನ್ನ ಗುರುಗಳ ಮನಸ್ಸನ್ನು ಹಲವರು ಕೆಡಿಸಿ ಸ್ಪರ್ಧಾಕಣದಲ್ಲಿ ಇರುವಂತೆ ನೋಡಿಕೊಂಡು ಅವರನ್ನು ಸೋಲಿಸಿದರು. ಅವರು ಆರಂಭಿಸಿ ಬಿಟ್ಟುಹೋಗಿರುವ ಯೋಜನೆಗಳನ್ನು ನನ್ನ ಅಧ್ಯಕ್ಷಾವಧಿಯಲ್ಲಿ ಮುಂದುವರಿಸಿ ನನ್ನ ಗುರುಕಾಣಿಕಯನ್ನು ನೀಡುವೆ ಎಂದರು.
ಕನ್ನಡ ಭವನ ನಿರ್ಮಿಸಲು ಹಗಲಿರುಳೂ ಕಷ್ಟಪಟ್ಟ ಅವರಿಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ. ಆದರೂ ಕನ್ನಡ ಭವನದಲ್ಲಿ ಮತ್ತೊಮ್ಮೆ ಅಧ್ಯಕ್ಷನಾಗಿ ಕೂರಬೇಕೆಂಬ ಆಸೆ ಇತ್ತು. ಆದರೆ ಅದು ಕೈಗೂಡಲೇ ಇಲ್ಲ. ಆದರೂ ಅವರ ಪಾರ್ಥಿವ ಶರೀರವನ್ನು ಅಂತಿಮವಾಗಿ ಕನ್ನಡಭವನಕ್ಕೆ ತಂದು ಸಾಹಿತಿಗಳೆಲ್ಲಾ ಗೌರವ ಸಲ್ಲಿಸುವಂತೆ ಮಾಡಿದ್ದು ನನ್ನ ಗುರುವಿಗೆ ಅರ್ಪಿಸಿದ ಗೌರವ ಎಂದು ಸ್ಮರಿಸಿಕೊಂಡರು.
ವೇದಿಕೆಯಲ್ಲಿ ಪ್ರೊ. ಡಿ.ಚಂದ್ರಪ್ಪನವರ ಧರ್ಮಪತ್ನಿ ಶ್ರೀಮತಿ ನಾಗರತ್ನ, ನಾಡಿನ ಖ್ಯಾತ ಸಾಹಿತಿಗಳಾದ ವಿದ್ಯಾವಚಸ್ಪತಿ ಡಾ. ಕವಿತಾಕೃಷ್ಣ, ಪ್ರಾಧ್ಯಾಪಕ ಜೆ.ಗಂಗಾದರ್, ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಡಿ.ಚಂದ್ರಪ್ಪನವರನ್ನು ಕುರಿತು ಮಾತನಾಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ಅವರನ್ನು ಕುರಿತು ಎಂ.ಸಿ.ಲಲಿತಾ, ಕೋ.ರಂ ಬಸವರಾಜ, ಡಾ. ಎನ್.ನಂದೀಶ್ವರ, ನಗರಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ಡಾ. ಬಿ.ಎಸ್.ಮಂಜುಳ, ಡಾ. ಕೆ.ಸಿ.ಜಯಸ್ವಾಮಿ, ಎಂ.ಜಿ.ಸಿಸ್ಧರಾಮಯ್ಯ, ಡಿ.ಪಿ.ರಾಜು, ಡಾ. ಬಿ.ನಂಜುಂಡಸ್ವಾಮಿ, ಮುದ್ದೇನಹಳ್ಳಿ ನಂಜಯ್ಯ, ಬ್ಯಾಡನೂರು ನಾಗಭೂಷಣ, ಯತೀಶ್, ಮಂಜುನಾಥ್, ಸುಶೀಲಾ ಸದಾಶಿವಯಯ್ಯ, ಎಸ್.ಲಿಂಗದೇವರು ಮೊದಲಾದವರು ಮಾತನಾಡಿದರು.
ತುಮಕೂರು ತಾಲ್ಲೂ ಕ.ಸಾ.ಪ. ಅಧ್ಯಕ್ಷ ಸ್ವಾಗತಿಸಿದರು, ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ ಸಣ್ಣಹೊನ್ನಯ್ಯ ಕಂಟಲಗೆರೆ ವಂದಿಸಿದರು. ಜಿಲ್ಲಾ ಕ.ಸಾ.ಪ. ಸಂಚಾಲಕ ಯೋಗಾನಂದ ನಿರೂಪಿಸಿದರು.