ಅಧಿಕಾರಿಗಳಿಂದ ಸರಕಾರಿ ಜಮೀನು ಅಕ್ರಮ ಪರಭಾರೆ : ಓಬಳಾಪುರ ಗ್ರಾಮಸ್ಥರ ಆರೋಪ, ಪ್ರತಿಭಟನೆ
ಚಿಕ್ಕನಾಯಕನಹಳ್ಳಿ : ಕಂದಾಯ ಇಲಾಖೆ ಅಧಿಕಾರಿಗಳು ಸರಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿದ್ದಾರೆಂದು ಆರೋಪಿಸಿ ಚಿಕ್ಕರಾಂಪುರ ಹೊಸಹಟ್ಟಿ, ಗುಡ್ಡದಹಟ್ಟಿ, ಕರಡಿಕಲ್ಲು, ಹಾಗು ಗುಡ್ಡದ ಓಬಳಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಚಿಕ್ಕನಾಯಕನಹಳ್ಳಿಯ ಗಡಿಗೆ ಹೊಂದಿಕೊಂಡಿರುವ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಗುಡ್ಡದಓಬಳಾಪುರ ಗ್ರಾಮದ ಸರ್ವೆ ನಂ 6/2, 6/3, 6/4, 6/5 ರ ಸುಮಾರು 5.4 ಎಕರೆ ಭೂಮಿಯನ್ನು ಜಂಪಯ್ಯನ ಮಕ್ಕಳಾದ ಶಿವಣ್ಣ, ಈರಯ್ಯ, ಮಹಾಲಿಂಗಯ್ಯ ಎಂಬುವರಿಗೆ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಸರಕಾರಿ ಜಮೀನು ರಕ್ಷಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳೇ ಭೂಗಳ್ಳರ ಜೊತೆ ಶಾಮೀಲಾಗಿದ್ದಾರೆ. ಅಧಿಕಾರಿಗಳೇ ಸರಕಾರಿ ಜಮೀನುಗಳಿಗೆ ನಕಲಿ ದಾಖಲೆ ಪತ್ರ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ವಾಸವಾಗಿದ್ದಾರೆ. ಚಿಕ್ಕರಾಂಪುರ ಹೊಸಹಟ್ಟಿ ಸಮೀಪವಿರುವ ಕಟ್ಟೆ ಅಂಗಳದ ಜಮೀನನ್ನು ಇತ್ತೀಚಿಗೆ ಜಂಪಯ್ಯನ ಕುಟುಂಬದವರು ಉಳುಮೆ ಮಾಡಲು ಬಂದಿದ್ದಾರೆ. ಕಂದಾಯ ಅಧಿಕಾರಿಗಳು ಭೂ ಅನುಭವ ಇಲ್ಲದಿದ್ದರೂ ದಾಖಲೆ ಪತ್ರ ಸೃಷ್ಟಿಸಿಕೊಟ್ಟಿದ್ದಾರೆ. ಭತ್ತ, ಮಾವು, ತೆಂಗು ಅಡಿಕೆ ಬೆಳೆಗಳನ್ನು ಬೆಳೆದಿರುವಂತೆ ಸುಮಾರು ವರ್ಷಗಳಿಂದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆಂದು ಬಿಂಬಿಸಿಕೊಳ್ಳಲು ನಕಲಿ ದಾಖಲೆಗಳಲ್ಲಿ ಸೃಷ್ಟಿಸಿ ಪಾಣಿಯನ್ನು ಪಡೆದಿದ್ದಾರೆ. ಈ ದಾಖಲೆ ಪತ್ರ ಸಮೇತ ದೂರು ನೀಡಲಾಗಿ ಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಸರಕಾರಿ ಜಾಗವನ್ನು ಊರಿನ ಉಪಯೋಗಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. 1999ರಲ್ಲಿ ಜಂಪಯ್ಯನ ಕುಟುಂಬದವರು ಅಕ್ರಮವಾಗಿ ಉಳುಮೆ ಮಾಡಲು ಬಂದಾಗ ಊರಿನ ಪ್ರಮುಖರು ಆತನಿಗೆ ಎಚ್ಚರಿಕೆ ನೀಡಿದ್ದರು. ತೀರ್ಥಪುರ ಗ್ರಾ.ಪಂಚಾಯಿತಿ ವತಿಯಿಂದ ಅನೇಕ ಅಭಿವೃದ್ದಿ ಕಾರ್ಯಗಳು ಈ ಜಾಗದಲ್ಲಿ ನಡೆದಿವೆ. 2000ರಲ್ಲಿ ಅಕ್ರಮವಾಗಿ ಜಮೀನನ್ನು ಅಧಿಕಾರಿಗಳಿಂದ ಮಂಜೂರು ಮಾಡಿಸಿಕೊಂಡು ಬಂದು 2018 ರಲ್ಲಿ ಕಟ್ಟೆಯ ಕೊಡಿ ಸ್ಥಳವನ್ನು ಬದಲಿಸಿ ಇದ್ದ ರಸ್ತೆಯನ್ನು ಮುಚ್ಚಿ ಹೊಸ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ. ಕಂದಾಯ ಅಧಿಕಾರಿಗಳ ಧಿಕ್ಕುತಪ್ಪಿಸಿ ಜಮೀನು ಮಂಜೂರು ಮಾಡಿಸಿಕೊಂಡಿರುವಂತೆ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆಂದು ಚಿತ್ತಮ್ಮ ಆರೋಪಿಸಿದರು.
ಗ್ರಾ.ಪಂ ಸದಸ್ಯ ಹೀರೆಜುಂಜಯ್ಯ ಮಾತನಾಡಿ ಸ್ಥಳ ಪರಿಶೀಲನೆ ಮಾಡದೆ ಅಧಿಕಾರಿಗಳು ಮಂಜೂರಾತಿ ಪತ್ರ ನೀಡಿದ್ದು ಕೂಡಲೇ ರದ್ದುಗೊಳಿಸಬೇಕು. ಬೇರೆ ಕಡೆಯಿಂದ ರೌಡಿಗಳನ್ನು ಕರೆಸಿ ಗ್ರಾಮಸ್ಥರನ್ನು ಬೆದರಿಸುತ್ತಿದ್ದಾನೆ. ಈ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಬಂಧಿಸುತ್ತೇವೆ ಎಂದು ಪೋಲೀಸರು ಭಯ ಹುಟ್ಟಿಸುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಗ್ರಾಮಸ್ಥರು ಮನವಿ ಸಲ್ಲಿಸಿದರೆ ಸ್ಥಳ ಪರಿಶೀಲನೆ ನಡೆಸಿ ದಾಖಲೆಯಲ್ಲಿ ನಕಲು ಕಂಡು ಬಂದರೆ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.
–ಆರತಿ ಬಿ. ಗುಬ್ಬಿ ತಹಸೀಲ್ದಾರ್.