ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಮತ್ತು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನಾಚರಣೆ ಆಚರಣೆ
ತುಮಕೂರು : ನಗರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಮತ್ತು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನಾಚರಣೆಯನ್ನು ತುಮಕೂರು ನಗರದ ಶ್ರೀ ಸಿದ್ಧರಾಮೇಶ್ವರ ಬಡಾವಣೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಲೇಖಕಿಯಾದ ಹಾಗೂ ನಗರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆಯಾದ ಕಮಲಾ ಬಡ್ಡಿಹಳ್ಳಿಯವರು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಮೈಸೂರು ಆಸ್ಥಾನದ ದೊರೆಯಾಗಿ ಈ ನಾಡಿನ ಉನ್ನತಿಗೆ ತಮ್ಮದೇ ನೂರಾರು ಕೊಡುಗೆಗಳನ್ನು ನೀಡಿರುವರು. ತಮ್ಮ ಆಸ್ಥಾನದಲ್ಲಿನ ಸಂಪತ್ತನ್ನೆಲ್ಲಾ ಮಾರಾಟ ಮಾಡಿ ಜನಪರವಾದ ಕಾರ್ಯಗಳಾದ ವಾಣಿವಿಲಾಸ ಸಾಗರ, ಏಷ್ಯಾದಲ್ಲೆ ಮೊದಲ ವಿದ್ಯುತ್ ಯೋಜನೆ, ಆಸ್ಪತ್ರೆ, ನ್ಯಾಯಾಲಯದ ಸವಲತ್ತು ಎಲ್ಲ ವರ್ಗದ ಜನರಿಗೆ ತಲುಪುವಂತೆ ಮಾಡಿದವರು. ಮಕ್ಕಳ ಭವಿಷ್ಯದ ಏಳ್ಗೆಗಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಆರಂಭಿಸಲಾಯಿತು. ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಸ್ತ್ರೀ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು. ಸಹಕಾರಿ ಸಂಸ್ಥೆಗಳಿಗೆ ಆದ್ಯತೆ ನೀಡಿದರು. ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ರಸ್ತೆ ಸಾರಿಗೆ ಅಭಿವೃದ್ಧಿಯಿಂದ ದೇಶದ ಆರ್ಥಿಕತೆಯನ್ನು ಬಲಗೊಳಿಸಿದರು. ಹೀಗೆ ನೂರಾರು ದೇಶದ ಅಭಿವೃದ್ಧಿಯ ಕಾರ್ಯಗಳನ್ನು ಕೇವಲ 46 ವರ್ಷಗಳ ಅವರ ಜೀವಿತಾವಧಿಯಲ್ಲಿ ಮಾಡಿರುವರು. ಇವರ ಸಾಧನೆ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದರು.
ಬಸಪ್ಪನವರು ಮಾತನಾಡಿ ಒಡೆಯರ್‌ರವರು ಡಾ. ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆಯಂತಹ ಕಾರ್ಯಗಳು ಅವರಿಗಿಂತಲೂ ಒಡೆಯರ್‌ರವರು ಮೊದಲಿಗರಾಗಿ ಮಾಡಿರುವುದು ಈ ದೇಶದ ಇತಿಹಾಸದಲ್ಲಿ ಹೆಸರುವಾಸಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಯಪ್ರಕಾಶ್ ಬಿ.ಕೆ.ರವರು ಎಲ್ಲರಿಗೂ ಸಿಹಿ ಮತ್ತು ಪುಸ್ತಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಿ.ರಾಜಶೇಖರ್, ಶಿವಕುಮಾರಯ್ಯ ಎಸ್., ಟಿ.ಕೆ.ಸೋಮಶೇಖರ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅನಂದ್‌ಕುಮಾರ್ ಎಲ್., ಉಮಾಪತಿ ಜಿ.ಕೆ., ರವಿಕುಮಾರ್ ಬಿ.ಸಿ., ಮಲ್ಲಿಕಾರ್ಜುನಯ್ಯ, ಶಿವರುದ್ರಪ್ಪ ಎಂ.ಆರ್., ಮುತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ. ಎನ್.ಎ.ಜಯಾ ಭಾಸ್ಕರಾಚಾರ್‌ರವರು ಪ್ರಾರ್ಥನೆ ಮಾಡಿದರು. ಕವಿ. ಡಾ. ಬಿ.ತೇಜಸ್ವಿಕಿರಣ್‌ರವರು ಸ್ವಾಗತಿಸಿದರು. ಜಗದೀಶ್ ಜಿ.ರವರು ವಂದಿಸಿದರು.
ವರದಿ : ಡಾ. ಬಿ.ತೇಜಸ್ವಿಕಿರಣ್