ಕುವೆಂಪು ಬಗ್ಗೆ ಹಗುರವಾಗಿ ಮಾತನಾಡಿರುವ ರೋಹಿತ್ ಚಕ್ರತೀರ್ಥ ನಾಡದ್ರೋಹಿ : ಪಿ.ಹೆಚ್. ಧನಪಾಲ್
ತುರುವೇಕೆರೆ : ವಿಶ್ವಮಾನವ ಕುವೆಂಪುರವರ ಬಗ್ಗೆ ಹಗುರವಾಗಿ ಮಾತನಾಡಿರುವ ರೋಹಿತ್ ಚಕ್ರತೀರ್ಥ ನಡೆಯನ್ನು ಪ್ರಬಲವಾಗಿ ಖಂಡಿಸುವುದಾಗಿ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಪಿ.ಹೆಚ್.ಧನಪಾಲ್ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ವಿಶ್ವಮಾನವ ಕುವೆಂಪುರವರು ರಚಿಸಿದ ನಾಡಗೀತೆ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದೆ.ಇದನ್ನು ಅರಿಯದೇ ನಾಡಗೀತೆಯನ್ನು ತಿರುಚುವ ಮಾತುಗಳನ್ನಾಡಿರುವುದು ಆತನ ತಿಳುವಳಿಕೆ ಮಟ್ಟವನ್ನು ಸಾಕ್ಷೀಕರಿಸಿದೆ. ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಸಮಿತಿಗೆ ನೇಮಿಸಿ ಪರೋಕ್ಷವಾಗಿ ರಾಜ್ಯ ಸರಕಾರವು ರಾಷ್ಟ್ರಕವಿಯನ್ನು ಅವಮಾನಿಸುವ ಕೆಲಸಕ್ಕೆ ಮುಂದಾಗಿರುವುದು ನಾಚಿಕೇಗೇಡು. ಜ್ಞಾನಪೀಠ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರ ಬಗ್ಗೆ ತಿಳುವಳಿಕೆಯಿಲ್ಲದೇ ನಾಲಿಗೆ ಹರಿಯಬಿಟ್ಟಿರುವ ರೋಹಿತ್ ಚಕ್ರತೀರ್ಥ ನಾಡದ್ರೋಹಿ ಎಂದು ಕಿಡಿಕಾರಿದರು.
ರಾಜ್ಯ ಸರಕಾರವು ಪಠ್ಯಪುಸಕ್ತ ಸಮಿತಿಗೆ ರೋಹಿತ್ ಚಕ್ರತೀರ್ಥನನ್ನು ನೇಮಿಸಿ ಸಮಾಜದ ನೆಮ್ಮದಿಗೆ ಭಂಗ ತರುವ ಕೆಲಸಕ್ಕೆ ಮುಂದಾಗಿದೆ. ಕನ್ನಡ ನಾಡು ನುಡಿ ಕಟ್ಟಲು ಡಿಂಡಿಮ ಬಾರಿಸಿದ ಕುವೆಂಪುರವರ ಬಗ್ಗೆ ಅರಿಯದವರನ್ನು ಪಠ್ಯಪುಸ್ತಕ ಸಮಿತಿಗೆ ಸರಕಾರ ನೇಮಕ ಮಾಡಿರುವುದು ಅಕ್ಷಮ್ಯ., ಸಮಾಜದ ಸ್ವಾಸ್ಥಕ್ಕೆ ಧಕ್ಕೆ ತರುವ ಮನೋಸ್ಥಿತಿಯುಳ್ಳ ರೋಹಿತ್ ಚಕ್ರತೀರ್ಥರಿಂದ ಪಠ್ಯಪುಸ್ತಕ ರಚಿಸುವ ಕೆಲಸ ಸಾಧ್ಯವಾಗದು, ಜ್ಞಾನಪೀಠ ಪುರಸ್ಕೃತ, ನಾಡು ಕಂಡ ಶ್ರೇಷ್ಟ ಕವಿ ಕುವೆಂಪು ಬಗ್ಗೆ ಮಾತನಾಡಿರುವ ರೋಹಿತ್ ಚಕ್ರತೀರ್ಥ ಅಜ್ಞಾನಿ ಎಂದು ಆಕ್ರೋಷ ವ್ಯಕ್ತಪಡಿಸಿದ ಅವರು ಸರಕಾರ ಈ ಕೂಡಲೇ ರೋಹಿತ್ ಚಕ್ರತೀರ್ಥರನ್ನು ಪುಸ್ತಕ ಸಮಿತಿಯಿಂದ ಕೈ ಬಿಡುವಂತೆ ಸರಕಾರವನ್ನು ಆಗ್ರಹಿಸಿದರು.
ತಾಲೂಕು ಒಕ್ಕಲಿಗರ ಸಂಘದ ಗಂಗಣ್ಣ, ಶ್ರೀನಿವಾಸ್‌ಗೌಡ, ಉಗ್ರೇಗೌಡ, ಶ್ರೀನಿವಾಸ್, ಶಂಕರಪ್ಪ, ಪರಮೇಶ್ ಇದ್ದರು.