ಪಾವಗಡ : ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿನ ಪ್ರಾಥಮಿಕ ಪಾಠಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಮೂರು ನಾಲ್ಕು ಮಕ್ಕಳಿಗೆ ವಾಂತಿ ಮಾಡಿಕೊಂಡಿದ್ದು ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಮತ್ತು ಗ್ರಾಮಸ್ಥರು ಕೂಡಲೇ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ 46 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ವಿಷಯ ತಿಳಿದ ತಹಶೀಲ್ದಾರ್ ವರದರಾಜು, ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಶಿಕ್ಷಣಾಧಿಕಾರಿಗಳಾದ ಇಂದ್ರಾಣಮ್ಮ,ಅಕ್ಷರ ದಾಸೋಹ ನಿರ್ದೇಶಕ ಶಂಕರಪ್ಪ ಮತ್ತು ಬಿ.ಆರ್. ಸಿ ಗಳು ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ವೈದ್ಯರರಿಂದ ಮಾಹಿತಿ ಪಡೆದರು.ಮಕ್ಕಳು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ, ಊಟ ಸೇವಿಸಿದ ನಂತರ ಕೆಲ ಮಕ್ಕಳು ವಾಂತಿ ಮಾಡಿಕೊಂಡಿದ್ದು ಅದನ್ನು ಕಂಡು ಉಳಿದ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ ಎಲ್ಲಾ ಮಕ್ಕಳನ್ನು ವೈದ್ಯರು ಪರೀಕ್ಷಿಸಿದ್ದಾರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಆರೋಗ್ಯ ವೈದ್ಯಾಧಿಕಾರಿಗಳಾದ ಬಾಬು ರವರು ಮಾತನಾಡಿ ಕೋಣನಕುರಿಕೆ ಶಿಕ್ಷಕಿ ಲೋಕಮ್ಮ ಕರೆ ಮಾಡಿ ನಮ್ಮ ಶಾಲೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆಂದು ಅವರನ್ನು ಕರೆ ತರುತ್ತಿದ್ದೇವೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಎಂದು ತಿಳಿಸಿದ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೆವು. ಇಬ್ಬರು ಮಕ್ಕಳಿಗೆ ಮಾತ್ರ ವಾಂತಿ ಆಗಿದೆ ಬೇರೆ ಎಲ್ಲ ಮಕ್ಕಳು ಚೆನ್ನಾಗಿದ್ದಾರೆ ಮುಂಜಾಗ್ರತೆಯಾಗಿ ಚಿಕಿತ್ಸೆ ನೀಡಲಾಗಿದೆ, ಯಾವುದೇ ತೊಂದರೆ ಇರುವುದಿಲ್ಲ ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.