ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾನೀಯರು ತುಮಕೂರಿಗೆ ಭೇಟಿ ನೀಡಿರುವುದು ಇತಿಹಾಸದಿಂದ ತಿಳಿಯುತ್ತದೆ : ರೋಹಿತ್ ಚಕ್ರತೀರ್ಥ
ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ
ತುಮಕೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ನಾಡಿನ ಜನರಿಗೆ ಮತ್ತು ಯುವಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮತ್ತು ಚಳುವಳಿ ನಡೆದ ಜಾಗಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮಊರಿನಲ್ಲಿಯೇ ಸ್ವಾತಂತ್ರ್ಯ ಚಳುವಳಿ ನಡೆದ ಕುರುಹುಗಳಿದ್ದರೂ ಅದರ ಅರಿವು ನಮಗಿರುವುದಿಲ್ಲ.ಸ್ವಾತಂತ್ರ್ಯ ಪಡೆಯಲು ಶ್ರಮಿಸಿದ ಹೋರಾಟಗಾರರ/ ಸ್ಥಳಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರಲ್ಲದೇ ಬರುವ ಜೂನ್ 1 ರಿಂದ 15 ರವರೆಗೆ ಸ್ವಾತಂತ್ರ್ಯ ಚಳುವಳಿ ನಡೆದ ನಾಡಿನ 15 ಸ್ಥಳಗಳಲ್ಲಿ ದೇಶಭಕ್ತಿ ಬಿಂಬಿಸುವ ನಾಟಕಗಳನ್ನು/ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದಯ ಎಂದು ತಿಳಿಸಿದರು.
ಸಂಸದ ಜಿ.ಎಸ್ ಬಸವರಾಜು ಮಾತನಾಡಿ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು ಸ್ವಾತಂತ್ರ್ಯದ ಹೆಜ್ಜೆ ಗುರುತುಗಳು ತುಮಕೂರಿನಲ್ಲಿಯೂ ಮೂಡಿವೆ.ಜಿಲ್ಲೆಯ ಅನೇಕರು ಸ್ವಾತಂತ್ರ್ಯಕ್ಕಾಗಿ ತ್ಯಾಗಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.
ಪ್ರಧಾನ ಭಾಷಣಕಾರ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಗಾಂಧಿಜೀಯವರು 1927 ರ ಜುಲೈ 14 ರಂದು ತುಮಕೂರಿಗೆ ಭೇಟಿ ನೀಡಿರುತ್ತಾರೆ.ಅವರ ಜೊತೆ ಪತ್ನಿ ಕಸ್ತೂರ ಬಾ ಮತ್ತು ಗಂಗಾಧರ್ ರಾವ್ ದೇಶಪಾಂಡೆ, ಮಹಾದೇವ ದೇಸಾಯಿ, ಮಣಿವೇಹನ್ ಪಟೇಲ್ , ದೇವದಾಸ್ ಗಾಂಧೀ ಸೇರಿದಂತೆ ಅನೇಕರು ಬಂದಿರುತ್ತಾರೆ ಎಂಬುದು ಇತಿಹಾಸದಿಂದ ತಿಳಿಯುತ್ತದೆಂದರು. ಅಂದಿನ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದ ಗಾಂಧಿಜೀಯವರು ಬಹಳ ಮುಖ್ಯವಾಗಿ ಅಸ್ಪöÈಶ್ಯತೆ, ಖಾದಿ ಭಂಡಾರ, ಸ್ವದೇಶಿ ಉತ್ಪನ್ನಗಳ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಕಲ್ಪ ವಿಧಿ ಭೋದಿಸಿದರು.ಇದಕ್ಕೂ ಮುನ್ನ ಸ್ವಾತಂತ್ರ್ಯ ಚೌಕ, ಆಶೋಕ ರಸ್ತೆ ಮೂಲಕ ಜಾನಪದ ಕಲಾತಂಡಗಳೊಂದಿಗೆ ಭಾರತಾಂಭೆಯ ಪುತ್ಥಳಿಯನ್ನು ಬೆಳ್ಳಿರಥದಲ್ಲಿಟ್ಟು ವೇದಿಕೆಯವರೆಗೂ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ, ಮೇಯರ್ ಬಿ.ಜಿ ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್ ನರಸಿಂಹರಾಜು, ವಿದ್ಯಾರ್ಥಿಗಳು ಸಾರ್ವಜನಿಕರು ಹಾಜರಿದ್ದರು.