ಕುರುಬ ಜನಾಂಗ ಸೇರಿದಂತೆ ಎಲ್ಲಾ ಜನಾಂಗಕ್ಕೂ ಸಾಮಾಜಿಕ ನ್ಯಾಯ ಕೊಡಿಸಲು ನಿರಂತರ ಹೋರಾಟ : ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ
ತುಮಕೂರು : ಬಡವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಿಳಿಸಿದರು.
ನಗರದ ಶಿರಾಗೇಟ್‌ನ ಕಾಳಿದಾಸ ಪ್ರೌಢಶಾಲೆ ಮೈದಾನದಲ್ಲಿ ಕಾಳಿದಾಸ ವಿದ್ಯಾವರ್ಧಕ ಸಂಘ, ಜಿಲ್ಲಾ ಕುರುಬರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲೆಯ ಪದಾಧಿಕಾರಿ ಹಾಗೂ ನಿರ್ದೇಶಕರುಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕುರುಬರ ಬೃಹತ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, 1994-95 ರವರೆಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ, 1994-95ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ.35 ಮತ್ತು ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಡಲಾಗಿತ್ತು. ಈಗಿನ ಸರ್ಕಾರ ಮೀಸಲಾತಿಯನ್ನು ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 162 ಕೋಟಿ ರೂ. ಖರ್ಚು ಮಾಡಿ ಕಾಂತರಾಜು ಬಳಿ ಸರ್ವೆ ಮಾಡಿಸಿ ಜಾತಿಗಣತಿ ಮಾಡಿಸಿದ್ದೆ. ಆ ವರದಿಯನ್ನು ತೆಗೆದುಕೊಳ್ಳಲು ಈವರೆಗೂ ಇವರ ಕೈಯಲ್ಲಿ ಆಗಲಿಲ್ಲ, ಕಾಂತರಾಜು ವರದಿ ಬಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಯಾವ ಯಾವ ಜಾತಿಗೆ ಎಷ್ಟು ಪಾಲು ಸಿಗಬೇಕು ಎಂಬುದು ಗೊತ್ತಾಗಲಿದೆ. ಆದರೆ ಬಿಜೆಪಿ ಸರ್ಕಾರ ಕಾಂತರಾಜು ವರದಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದರು.
ಸಮಾಜದಲ್ಲಿರುವ ಎಲ್ಲಾ ಜಾತಿಗಳು, ವರ್ಗಗಳು ರಾಜಕೀಯವಾಗಿ ಜಾಗೃತರಾಗಬೇಕಿರುವುದು ಅತ್ಯಂತ ಅವಶ್ಯಕವಾಗಿದೆ ಎಂದ ಅವರು, ನಮ್ಮ ಸಮಾಜ ಹೇಳಿ ಕೇಳಿ ಜಾತಿ ವ್ಯವಸ್ಥೆಯಿಂದ ಕೂಡಿದೆ. ಸಮಾಜದಲ್ಲಿ ಸಾವಿರಾರು ಜಾತಿಗಳಿವೆ. ಅದರಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಬೇರೆ ಬೇರೆ ಜಾತಿಗಳಲ್ಲಿರುವ ಬಡವರು ಇವರೆಲ್ಲರೂ ಕೂಡ ಶತ ಶತಮಾನಗಳಿಂದ ಅವಕಾಶ ವಂಚಿತರಾಗಿದ್ದಾರೆ. ಈ ದೇಶದ ಸಂಪತ್ತು, ಅಧಿಕಾರ ಎಲ್ಲಾ ಜಾತಿ, ಧರ್ಮದವರಿಗೆ, ಎಲ್ಲಾ ಬಡವರಿಗೆ ಹಂಚಿಕೆಯಾದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಸ್ವಾತಂತ್ರö್ಯ ಭಾರತದಲ್ಲಿ ಅಧಿಕಾರ ಬಲಾಢ್ಯರ ಕೈಯಲ್ಲಿರಬಾರದು, ಕೇವಲ ಬಲಾಢ್ಯರ ಕೈಯಲ್ಲಿ ಅಧಿಕಾರ ಇದ್ದರೆ ಬಡವರಿಗೆ ನ್ಯಾಯ ಸಿಗುವುದು ದುರ್ಲಭ. ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾದಾಗ ಮಾತ್ರ ಅವಕಾಶ ವಂಚಿತರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಸಮಾಜದಲ್ಲಿರುವ ಎಲ್ಲಾ ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಕೊಡುವ ಕೆಲಸ ಮಾಡಬೇಕು, ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ ಹೀಗೆ ಅನೇಕ ಭಾಗ್ಯಗಳ ಮೂಲಕ ಬಡವರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಕೊಡುವ ಕೆಲಸ ಮಾಡಿದ್ದೇನೆ. ಅನ್ನಭಾಗ್ಯ ಕೇವಲ ಕುರುಬರಿಗೆ ಮಾತ್ರ ಕೊಟ್ಟಿದ್ದಲ್ಲ, ಬ್ರಾಹ್ಮಣ, ಕ್ಷತ್ರಿಯ, ಲಿಂಗಾಯತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲರಿಗೂ ಸಮಾನವಾಗಿ ನೀಡಿದ್ದೇನೆ. ರಾಜ್ಯದ 4 ಕೋಟಿ 30 ಲಕ್ಷ ಜನರಿಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಿ, ಕರ್ನಾಟಕ ರಾಜ್ಯ ಹಸಿವು ಮುಕ್ತ ರಾಜ್ಯವಾಗಬೇಕು, ಯಾರೂ ಹಸಿವಿನಿಂದ ಮಲಗಬಾರದು ಎಂಬ ನಿಟ್ಟಿನಲ್ಲಿ ಮೊದಲ ಭಾರಿಗೆ ಪ್ರತಿಯೊಬ್ಬರಿಗೂ 7 ಕೆ.ಜಿ.ಅಕ್ಕಿಯನ್ನು ನೀಡಿದ್ದೇನೆ ಎಂದು ಹೇಳಿದರು.
ನಾನು ಕುರುಬ ಜನಾಂಗದಲ್ಲಿ ಹುಟ್ಟಿದ್ದೇನೆ. ಕುರುಬ ಜನಾಂಗ ಸೇರಿದಂತೆ ಎಲ್ಲಾ ಜನಾಂಗಕ್ಕೂ ಸಾಮಾಜಿಕ ನ್ಯಾಯ ಕೊಡಬೇಕಾದ್ದು ನನ್ನ ಕರ್ತವ್ಯ. ಹಾಗೆಯೇ ಕುರುಬ ಜನಾಂಗವನ್ನೂ ನಾನು ಮರೆತಿಲ್ಲ, ಕುರುಬ ಜನಾಂಗಕ್ಕೆ ನ್ಯಾಯ ಕೊಡಿಸಲು ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದು, ಮುಂದೆಯೂ ಹೋರಾಟ ಮಾಡುತ್ತೇನೆ. ಸಮಾಜದಲ್ಲಿ ಯಾರಿಗೆ ಶಕ್ತಿಯಿಲ್ಲವೋ ಅಂತಹವರಿಗೆ ಶಕ್ತಿಯಾಗಿ ನಿಲ್ಲುತ್ತೇನೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಿಸುವಂತಹ ಕೆಲಸ ಮಾಡುತ್ತೇನೆ ಎಂದರು.
ಇದೇ ವೇಳೆ ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಟಿ.ಬಿ.ಜಯಚಂದ್ರ, ಮಾಜಿ ಸಂಸದ ಚಂದ್ರಪ್ಪ, ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ಡಾ.ರಫೀಕ್ ಅಹಮದ್, ವಿಪ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಂದು ಶೇಖರ್ ಒಡೆಯರ್, ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ, ಭೈರತಿ ಸುರೇಶ್, ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಎಂ. ರಾಮಚಂದ್ರಪ್ಪ, ಶ್ರೀನಿವಾಸ್, ಮಳವಳ್ಳಿ ಶಿವಣ್ಣ, ಮಾಜಿ ಜಿಪಂ ಸದಸ್ಯರಾದ ಜಿ.ನಾರಾಯಣ, ಸಿದ್ಧರಾಮಯ್ಯ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳಾದ ಕೃಷ್ಣಮೂರ್ತಿ, ತುಮಕೂರು ಜಿಲ್ಲಾ ನಿರ್ದೇಶಕರಾದ ಟಿ.ಇ.ರಘುರಾಂ, ಭಾಗ್ಯಮ್ಮ, ಶಂಕರ್, ಕನಕ ಯುವಸೇನೆ ಅಧ್ಯಕ್ಷ ಕೆಂಪರಾಜು, ಪಾಲಿಕೆ ಸದಸ್ಯ ಲಕ್ಷಿö್ಮÃನರಸಿಂಹರಾಜು, ಹಿರಿಯ ಪತ್ರಕರ್ತ ಸಾಂಬಸದಾಶಿವರೆಡ್ಡಿ, ನಿವೃತ್ತ ಡಿವೈಎಸ್ಪಿ ಎನ್.ಸಿ.ನಾಗರಾಜು, ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕ ಯೋಗೀಶ್, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಅನಿಲ್, ಯುವ ಮುಖಂಡರುಗಳಾದ ಪದ್ಮರಾಜ್, ಟಿ.ಕೆ.ಪವನ್, ದೀಪ ಸುನೀಲ್ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಕುರುಬ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನಕ ವೃತ್ತದಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕುರುಬ ಸಂಘದ ಪದಾಧಿಕಾರಿಗಳು ಕನಕವೃತ್ತದಿಂದ ವೇದಿಕೆವರೆಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಿದ್ಧರಾಮಯ್ಯ ಅವರನ್ನು ಸ್ವಾಗತಿಸಿದರು.