ಅಂಬೇಡ್ಕರ್ ವಸತಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು : ಶಾಸಕ ರಾಜೇಶ್ ಗೌಡ, ತಹಶೀಲ್ದಾರ್ ಮಮತ ಸ್ಥಳದಲ್ಲೇ ಮೊಕ್ಕಾಂ
ಆತಂಕ ಪಡದಂತೆ ಪೋಷಕರಲ್ಲಿ ಶಾಸಕರ ಮನವಿ

ಶಿರಾ : ಶಿರಾ ಹೊರವಲಯದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೋವಿಡ್ ಸ್ಪೋಟಗೊಂಡಿದ್ದು, ಶಾಲೆಯ 26 ವಿದ್ಯಾರ್ಥಿಗಳಿಗೆ ಹಾಗೂ 4 ಮಂದಿ ಅಡುಗೆ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ಇಂದು 190 ವಿದ್ಯಾರ್ಥಿಗಳು ಹಾಜರಿದ್ದು ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 26 ವಿದ್ಯಾರ್ಥಿಗಳಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿದೆ. 4 ಜನ ಅಡುಗೆಯವರಿಗೆ ಕೊವಿಡ್ ದೃಢಪಟ್ಟಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡಿದ್ದು ಉಳಿದ ವಿದ್ಯಾರ್ಥಿಗಳಿಗೆ ರೋಗಲಕ್ಷಣಗಳು ಕಂಡುಬAದಿಲ್ಲ. ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳನ್ನು ಶ್ರೀ ಆಂಜನೇಯ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಂಬೇಡ್ಕರ್ ವಸತಿ ಶಾಲೆಯ ಎಲ್ಲಾ ಕೊಠಡಿಗಳಿಗೂ ಸ್ಯಾನಿಟೈಸ್ ಮಾಡಲಾಗಿದೆ.
ಶಾಸಕರ ವಾಸ್ತವ್ಯ: ವಸತಿ ಶಾಲೆಯಲ್ಲಿ ಕೋವಿಡ್ ಸೋಂಕು ಸ್ಪೋಟಗೊಂಡ ಹಿನ್ನೆಲೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಸ್ಥಳದಲ್ಲಿಯೇ ಮೊಕ್ಕಾ ಹೂಡಿದ್ದು, ಇಂದು ಅಲ್ಲಿಯೇ ವಾಸ್ತವ್ಯ ಮಾಡುವುದಾಗಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇಡುವ ಸಲುವಾಗಿ ಇಂದು ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡುತ್ತೇನೆ ಎಂದು ಹೇಳಿದ್ದಾರೆ.
ಹಣ್ಣು ಮೊಟ್ಟೆ ವಿತರಣೆ: ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಸೇಬು, ಕಿತ್ತಳೆ ಹಣ್ಣು ಮತ್ತು ಮೊಟ್ಟೆಯನ್ನು ತಮ್ಮ ಸ್ವಂತ ವೆಚ್ಚದಿಂದ ತರಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ವಿತರಿಸಿದರು.
ವಸತಿ ಶಾಲೆಯಲ್ಲಿ ಒಟ್ಟು 215 ಮಂದಿ ವಿದ್ಯಾಥಿಗಳು ಅಭ್ಯಾಸ ಮಾಡುತ್ತಿದ್ದು, ಮಂಗಳವಾರ ಹಾಜರಿದ್ದ 193 ವಿದ್ಯಾರ್ಥಿಗಳು ಹಾಗೂ ವಸತಿ ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿಯನ್ನೂ ರ‍್ಯಾಟ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ 25 ವಿದ್ಯಾರ್ಥಿಗಳು ಮತ್ತು ನಾಲ್ವರು ಅಡಿಗೆಯವರಿಗೆ ಕೊರೋನಾ ಪಾಸಿಟೀವ್ ಕಂಡು ಬಂದಿದ್ದು, ಸೋಂಕಿತರನ್ನು ಪ್ರತ್ಯೇಕವಾಗಿ ಐಸೋಲೇಟ್ ಮಾಡಿ, ಸ್ಥಳದಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರ ಪೈಕಿ ಮೂವರು ವಿದ್ಯಾರ್ಥಿ ಗಳಿಗೆ ವಾಂತಿ ಉಂಟಾದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದುಬಂದಿದೆ. ಸೋಂಕಿತರಲ್ಲದ ವಿದ್ಯಾರ್ಥಿಗಳನ್ನು ಪಕ್ಕದಲ್ಲಿನ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪಕ್ಕೆ ವರ್ಗಾಯಿಸಿ, ನಿಗಾ ವಹಿಸಲಾಗಿದೆ.
ವಸತಿ ಶಾಲೆಯ ಸಮೀಪದ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲ ದಿನಗಳ ಕಾಲ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ.ಎಂ, ಡಿ.ವೈ.ಎಸ್.ಪಿ ಕುಮಾರಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ಆರ್.ಐ.ಮಂಜುನಾಥ್, ಪಿಡಿಓ ಯೋಗಶ್ರೀನಿವಾಸ್, ಗ್ರಾಮಲೆಕ್ಕಿಗ ನರೇಂದ್ರ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.