ಜಮೀನು ಮಾರಾಟದ ಹಿನ್ನಲೆಯ ದ್ವೇಷಕ್ಕೆ ಅಡಿಕೆ,ತೆಂಗು,ಪರಂಗಿ ಸಸಿಗಳು ಬಲಿ
ಗುಬ್ಬಿ: ವೈಯಕ್ತಿಕ ದ್ವೇಷಕ್ಕೆ ಸೊಗಸಾಗಿ ಬೆಳೆದ 170 ಅಡಿಕೆಸಸಿಗಳು, 15 ತೆಂಗು ಸಸಿಗಳು ಹಾಗೂ 20 ಕ್ಕೂ ಅಧಿಕ ಪರಂಗಿ ಸಸಿಗಳನ್ನು ಕಿತ್ತು ವಿಕೃತ ಮೆರೆದ ಧಾರುಣ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ನಡೆದಿದೆ.
ಇಡಗೂರು ಗ್ರಾಮದ ರೈತ ಎಂ.ಯು.ಆದಿಲ್ ಪಾಷಾ ಅವರಿಗೆ ಸಂಬಂಧಿಸಿದ ಸನಂ. 97/2 ರಲ್ಲಿನ 3 ಎಕರೆ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಮಗುವಿನಂತೆ ಪೋಷಿಸಿದ್ದ ಅಡಿಕೆ, ತೆಂಗು ಮತ್ತು ಪರಂಗಿ ಸಸಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರೂ ಮುಂಜಾನೆ ವೇಳೆ 170 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಬೇರು ಸಹಿತ ಕಿತ್ತು ಬಿಸಾಡಿದ ದುಷ್ಕರ್ಮಿಗಳು ಇರುವ ಬೋರ್ ವೆಲ್ ಪೈಪ್ ಲೈನ್ ಸಹ ಒಡೆದು ಹಾಕಿದ್ದಾರೆ. ನಾಲ್ಕು ಪೈಪ್ ಲೈನ್ ಧ್ವಂಸ ಮಾಡಿದ್ದಾರೆ. ಈ ದುಷ್ಕೃತ್ಯ ಮಾಡಿರುವುದು ಜಮೀನು ಮಾರಾಟದ ವಿಚಾರದಲ್ಲಿನ ತಕರಾರು ದ್ವೇಷದ ಹಿನ್ನಲೆಯಲ್ಲಿ ನಡೆದಿದೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸಿ.ಎಸ್.ಪುರ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಂತ್ರಸ್ತ ರೈತ ಆದಿಲ್ ಪಾಷಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸ್ವಲ್ಪ ಜಮೀನು ಮಾರಾಟ ವಿಚಾರದಲ್ಲಿ ಬೆಂಗಳೂರು ವಾಸಿ ಗಂಗಾರಾಮಯ್ಯ ಎಂಬುವವರ ಜೊತೆ ಕರಾರು ಪತ್ರ ಮಾಡಿಸಲಾಗಿ ನಂತರ ಹಣದ ವ್ಯವಹಾರ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ಜಮೀನಿನಲ್ಲಿ ರಸ್ತೆ ಮಾಡಲು ಮುಂದಾಗಿದ್ದರು. ಈ ವಿಚಾರ ಜಗಳಕ್ಕೆ ತಿರುಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಜಮೀನು ಅವರಿಗೆ ನೀಡಲು ಹಿಂದೇಟು ಹಾಕಿದ ನನ್ನ ಕುಟುಂಬ ಸದಸ್ಯರು ಹಣ ವಾಪಸ್ ನೀಡಿ ಅಗ್ರಿಮೆಂಟ್ ರದ್ದು ಮಾಡಲು ನಿರ್ಧಿರಿಸಿ ಅವರಿಗೆ ತಿಳಿಸಿದ ನಂತರದಲ್ಲಿ ವೈಷಮ್ಯದಲ್ಲೇ ನ್ಯಾಯಾಲಯ ಮೆಟ್ಟಿಲು ಹತ್ತಲಾಯಿತು. ನಂತರದಲ್ಲೂ ನನ್ನ ಜಮೀನಿಗೆ ಕಲ್ಲುಕಂಬ ನೆಡಲು ಮುಂದಾದರು. ನಾವು ತಡೆದ ನಂತರದಲ್ಲಿ ನನ್ನ ಮೇಲಿನ ದ್ವೇಷಕ್ಕೆ ಕೆಲವರು ಸಮೃದ್ದವಾಗಿ ಬೆಳೆದ ಅಡಿಕೆ, ತೆಂಗು ಸಸಿಗಳನ್ನು ದ್ವಂಸ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದರು.
ವರ್ಷದಿಂದ ರಾತ್ರಿ ವೇಳೆ ನೀರು ಹಾಯಿಸಿ ಸಾಕಿ ಸಲಹಿದ ಅಡಿಕೆ ಸಸಿಗಳನ್ನು ಕಿತ್ತೊಗೆಯಲು ಹೇಗೆ ಮನಸ್ಸು ಮಾಡಿದರೂ ಎನ್ನುವುದು ನೋಡಿದರೆ ಅವರ ದ್ವೇಷ ಈ ವಿಕೃತ ಮನಸ್ಸಿಗೆ ಕಾರಣವಾಗಿದೆ. ಕೆಲ ಸಸಿಗಳನ್ನು ಬುಡ ಸಹಿತ ಕಿತ್ತು ಬಿಸಾಡಿದ್ದಲ್ಲದೆ ಅಲ್ಲಿನ ಸಾಕಷ್ಟು ಸಸಿಗಳನ್ನು ತುಳಿದು ಮಣ್ಣು ಪಾಲು ಮಾಡಿದ್ದಾರೆ. ನೀರು ಹಾಯಿಸುವ ಪೈಪ್ ಲೈನ್ ಸಹ ಹಾಳು ಮಾಡಿದ್ದಾರೆ. ಈ ಕೀಳು ಮನಸ್ಥಿತಿ ಯಾವುದೇ ರೈತರಿಗೂ ಬರುವುದಿಲ್ಲ. ಇದು ಘಾಸಿ ನೀಡಿದ ಘಟನೆ. ಅಲ್ಪ ಸಂಖ್ಯಾತ ವರ್ಗದ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಸಂತ್ರಸ್ತೆ ರಜಿಯ ಬೇಗಂ ತಮ್ಮ ಅಳಲು ತೋಡಿಕೊಂಡರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.