ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವದಾಗ ಮಾತ್ರ ಸಾರ್ಥಕತೆ : ಸಚಿವ ಜೆ.ಸಿ.ಮಾಧುಸ್ವಾಮಿ
ಶ್ರೀ ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ
ತುಮಕೂರು: ಸಂಘೇ ಶಕ್ತೇ ಕಲಿಯುಗೇ ಎನ್ನುವಂತೆ ಇಂದು ಏನೇ ಶಕ್ತಿ ಇದ್ದರು ಅದು ಸಂಘಗಳಿಗೆ ಮಾತ್ರ, ಸಮುದಾಯ ಗಟ್ಟಿಯಾಗಲು ಉಳ್ಳವರು ಠೇವಣಿ ಮಾಡಬೇಕು ಎಂದು ಕಾನೂನು ಮತ್ತು ಸಂಸದೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಶ್ರೀ ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ, ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಲಾಭ,ನಷ್ಟ ಲೆಕ್ಕಾಚಾರವಿಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡಿದಾಗ ಮಾತ್ರ ಸಂಘ ಸ್ಥಾಪನೆ ಮಾಡಿದ್ದಕ್ಕೂ ಸಾರ್ಥಕತೆ ದೊರಕುತ್ತದೆ, ಇಲ್ಲದವರ ನೆರವಿಗೆ ನಿಲ್ಲಬೇಕಿರುವುದು ಇಂದಿನ ಅನಿವಾರ್ಯತೆಯೂ ಸಹ.ನಮ್ಮಲ್ಲಿರುವ ಶಕ್ತಿ ಬಳಸಿಕೊಂಡಾಗ ಮಾತ್ರ ಶಕ್ತಿವಂತರಾಗುತ್ತೇವೆ ಎನ್ನುವುದನ್ನು ತಿಗಳ ಸಮುದಾಯ ಅರಿಯಬೇಕಿದೆ ಎಂದರು.
ಸಮಾಜವನ್ನು ಅಭಿವೃದ್ಧಿ ಪಡಿಸಬೇಕೆಂಬ ದೃಢ ಮನಸ್ಸಿದ್ದರೆ ಮಾತ್ರ ಸಾಧ್ಯ,ಉಳ್ಳವರು ಬೇರೆಯವರ ಸಹಾಯಕ್ಕೆ ಬಂದಾಗ ಮಾತ್ರ ಯಾವ ಸಮುದಾಯವು ಅಶಕ್ತರಾಗುವುದಿಲ್ಲ, ಬಡವರಾಗುವುದಿಲ್ಲ, ಅಂಬೇಡ್ಕರ್ ಆಶಯದಂತೆ ಸ್ವಾಭಿಮಾನದಿಂದ ಬದುಕಲು ಶಿಕ್ಷಣ ಅವಶ್ಯಕವಾಗಿದೆ, ಪ್ರತಿಯೊಬ್ಬರು ಜವಾಬ್ದಾರಿ ಅರಿತು ನಡೆದರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.
ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ,ಸಹಕಾರಿ ಕ್ಷೇತ್ರದಲ್ಲಿ 25 ವರ್ಷಗಳ ಮುಂಚೂಣಿಯಲ್ಲಿ ಇರುವ ಅಗ್ನಿಬನ್ನಿರಾಯ ಸಂಸ್ಥೆ ಸಂಕಷ್ಟದ ಸಮಯದಲ್ಲಿ ಲಾಭಗಳಿರುವುದು ಶ್ಲಾಘನೀಯ,ಸಹಕಾರ ರಂಗದ ಆತಂಕದ ನಡುವೆಯೇ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಮುದಾಯದ ಬ್ಯಾಂಕ್ ಅಭಿವೃದ್ಧಿ ಸಾಧಿಸಿರುವುದು ಸಂತಸದ ವಿಚಾರ ಎಂದರು.
ತುಮಕೂರು ಜಿಲ್ಲೆ ಸಹಕಾರ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ, ಸಹಕಾರಿ ರಂಗದಲ್ಲಿ ಸದಸ್ಯರ ನಂಬಿಕೆಯೇ ಮುಖ್ಯ ಅಂತಹ ನಂಬಿಕೆಯನ್ನು ಮುಂದುವರೆಸಿಕೊಂಡು ಹೋಗಬೇಕು,ಠೇವಣಿಯಲ್ಲಿ ಹೆಚ್ಚು ಕಡಿಮೆಯಾಗದಂತೆ ನೋಡಿಕೊಂಡಾಗ ಮಾತ್ರ ಲಾಭ ಗಳಿಸಲು ಸಾಧ್ಯ.ಸಾಲ ಪಡೆದುಕೊಳ್ಳಲು ಎಲ್ಲರು ಬರುತ್ತಾರೆ,ಆದರೆ ಮರುಪಾವತಿಯೇ ಕಷ್ಟ, ನಿರ್ದೇಶಕರ ಮಂಡಳಿಯಲ್ಲಿ ಏನೇ ವೈಮನಸ್ಯ ಬಂದರು ಕಿತ್ತಾಡದೇ ಸದಸ್ಯರ ಹಿತ ಕಾಯುವಂತೆ ಮನವಿ ಮಾಡಿದ ಅವರು ಅಗ್ನಿಬನ್ನಿರಾಯ. ಪತ್ತಿನ ಸಹಕಾರ ಅಭ್ಯುದಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಮಾಜಿ ಶಾಸಕ ರಫೀಕ್ ಅಹ್ಮದ್ ಮಾತನಾಡಿ,ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವ ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘಕ್ಕೆ ಸಮುದಾಯದವರು ಎಲ್ಲರ ಕಾಣಿಕೆಯೇ ಕಾರಣ,ವ್ಯವಸಾಯದ ಹಿನ್ನೆಲೆಯ ಸಮಾಜವು ಕೋಟ್ಯಂತರ ರೂಪಾಯಿ ಠೇವಣಿ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ತಿಗಳ ಸಮುದಾಯದೊಳಗಿರುವ ಕಟ್ಟೇಮನೆ ನ್ಯಾಯಪದ್ಧತಿ ಮೇಲೆ ಇಂದಿಗೂ ಜನರಿಗೆ ನಂಬಿಕೆ ಇದೆ, ಕಟ್ಟೆಮನೆ ನ್ಯಾಯವನ್ನು ಮತ್ತೇಲ್ಲೂ ಪ್ರಶ್ನಿಸಿದ ನ್ಯಾಯವನ್ನು ಒಪ್ಪಿ ಅಪ್ಪುವ ಶಿಸ್ತು ಸಮಾಜದಲ್ಲಿದೆ.ವ್ಯವಸಾಯದ ಹೊರತಾಗಿ ಸಮುದಾಯ ಆರ್ಥಿಕವಾಗಿ ಸದೃಢವಾಗಬೇಕು.ಈ ನಿಟ್ಟಿನಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಪತ್ತಿನ ಸಹಕಾರ ಸಂಘ,ಸಮಾಜದಲ್ಲಿ ಬಡವರ ಕೈ ಹಿಡಿದು,ಅವಶ್ಯಕತೆ ಇರುವವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕೆಂದ ಅವರು, ಸಮುದಾಯ ಇರುವ ಕಡೆ ಶಾಖೆಗಳನ್ನು ತರೆಯುವಷ್ಟು ಬ್ಯಾಂಕ್ ಬೆಳೆಯಬೇಕೆಂದು ಆಶಿಸಿದರು.
ತಿಗಳ ಸಮುದಾಯ ಎಷ್ಟೇ ಆರ್ಥಿಕವಾಗಿ ಸದೃಢರಾಗಿದ್ದರು, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು, ಶೈಕ್ಷಣಿಕವಾಗಿ ಈ ಸಮುದಾಯ ಹೆಚ್ಚು ಹೆಚ್ಚು ಮುಂದುವರೆಯಬೇಕು, ಎಲ್ಲ ಸಮುದಾಯಗಳು ಶೈಕ್ಷಣಿಕ ಸಂಸ್ಥೆ ಮಾಡಿಕೊಂಡಿವೆ, ತಿಗಳ ಸಮುದಾಯವು ಸಹ ಶೈಕ್ಷಣಿಕ ಸಂಸ್ಥೆ ತೆರೆಯುವ ಮೂಲಕ ಶಿಕ್ಷಣದಲ್ಲಿ ಹಿಂದುಳಿದಿವರಿಗೆ ಉಚಿತ ಶಿಕ್ಷಣ ನೀಡುವಂತಹ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಮುದಾಯದ ಮುಖಂಡರು ಹಾಗೂ ನಿವೃತ್ತ ಎಸಿಪಿ ಸುಬ್ಬಣ್ಣ ಮಾತನಾಡಿ, ತಿಗಳ ಸಮಾಜ ಹಿಂದುಳಿದ್ದು, ಇಂದಿಗೂ ಐಎಎಸ್,ಐಪಿಎಸ್ ಅಧಿಕಾರಿಗಳಿಲ್ಲ,ಪ್ರತಿಭಾ ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನು ಪಡೆಯಬೇಕು, ಸಮಾಜವನ್ನು ಮುನ್ನಡೆಸಬೇಕಾದವರು ಇಂದಿನ ವಿದ್ಯಾರ್ಥಿಗಳೇ, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯದ ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡರು ಉನ್ನತ ವಿದ್ಯಾಭ್ಯಾಸ ಮಾಡಲು ತೊಂದರೆ ಅನುಭವಿಸುತ್ತಿದ್ದು, ಸಹಕಾರ ಸಂಸ್ಥೆಗಳು ಸಮುದಾಯದ ಬಡ ವಿದ್ಯಾರ್ಥಿಗಳ ನೆರವಿಗೆ ನಿಲ್ಲಬೇಕು,ಈ ಬಗ್ಗೆ ಚಿಂತನೆ ನಡೆಸಬೇಕು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸೋಮಶೇಖರಸ್ವಾಮಿಜಿ ವಹಿಸಿದ್ದರು, ವೇದಿಕೆಯಲ್ಲಿ ಮಾಜಿ ಮೇಯರ್ ಲಲಿತಾ ರವೀಶ್, ಮಾಜಿ ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯರಾದ ಶ್ರೀನಿವಾಸ್,ನರಸಿಂಹಮೂರ್ತಿ,ಶ್ರೀ ಅಗ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಎಲ್.ಕುಂಭಯ್ಯ,ಉಪಾಧ್ಯಕ್ಷರಾದ ಪ್ರೆಸ್ ರಾಜಣ್ಣ,ಸಹಕಾರ ಸಂಘದ ನಿರ್ದೇಶಕರಾದ ಟಿ.ಎನ್.ಶಿವಣ್ಣ, ಟಿ.ಶ್ರೀನಿವಾಸ್,ಟಿ.ಹೆಚ್.ವಾಸುದೇವ್,ಟಿ.ಎನ್.ನಾರಾಯಣಸ್ವಾಮಿ, ಬಸವರಾಜು, ಟಿ.ಸಿ.ಶನಿವಾರಯ್ಯ,ಟಿ.ಎಸ್.ಮಂಜುನಾಥ್,ಪ್ರಕಾಶ್,ರಂಗಸ್ವಾಮಿ,ಮಹಾಲಕ್ಷಮ್ಮ,ಛಾಯಾದೇವಿ,ನಟರಾಜು, ಲಕ್ಷ್ಮೀನರಸಯ್ಯ, ಹುಚ್ಚೇಗೌಡ,ಕೋಟೆ ಕೊಲ್ಲಾಪುರದಮ್ಮ ಮಹಿಳಾ ಪತ್ತಿನ ಸಹಕಾರ ಸಂಘದ ಪುಟ್ಟಲಕ್ಷö್ಮಮ್ಮ, ಹನುಮಾದಾಸ್,ಕಟ್ಟೇಮನೆ ಯಜಮಾನರು, ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.