ಅಕ್ರಮ ಮೇಕೆ ಶೆಡ್ ನಿರ್ಮಾಣ ತೆರವು ಆರೋಪ ಕಲ್ಲೂರು ಗ್ರಾ.ಪಂನಲ್ಲಿ ಅಧ್ಯಕ್ಷ, ಪಿಡಿಒ ಭ್ರಷ್ಟಾಚಾರ..?
ಗುಬ್ಬಿ: ಕೆಆರ್ ಐಡಿಎಲ್ ಯೋಜನೆಯಡಿ ಕಲ್ಲೂರು ಗ್ರಾಪಂ ಕಚೇರಿ ಮುಂದಿನ ಸಂತೇ ಮೈದಾನದಲ್ಲಿ ಈಚೆಗೆ ನಿರ್ಮಿಸಲಾದ ಮೇಕೆ ಶೆಡ್ ಅಕ್ರಮವಾಗಿ ತೆರವುಗೊಳಿಸಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡ ಯಾವ ಯೋಜನೆಗೆ ಒಳಪಟ್ಟಿದೆ, ಯಾವ ಅನುದಾನ ಎಂಬುದೇ ತಿಳಿಸದ ಅಧ್ಯಕ್ಷರು ಹಾಗೂ ಪಿಡಿಓ ಈ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಈ ಅಕ್ರಮವನ್ನು ತಡೆಗಟ್ಟಿ ಅನಧಿಕೃತ ಕಟ್ಟಡ ಕೆಲಸ ನಿಲ್ಲಿಸಬೇಕು ಎಂದು ಕಲ್ಲೂರು ಗ್ರಾಪಂ ಸದಸ್ಯರೇ ಒಕ್ಕೊರಲಿನ ಒತ್ತಾಯ ಮಾಡಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೆ ಸಂತೇ ಮೈದಾನದಲ್ಲಿ ಮೇಕೆ ಶೆಡ್ ನಿರ್ಮಿಸಲಾಗಿತ್ತು. ಈ ಯೋಜನೆ ಅನುಷ್ಠಾನಕ್ಕೆ ಗ್ರಾಪಂ ಸಭೆಯಲ್ಲೂ ನಮ್ಮ ಗಮನಕ್ಕೆ ತರಲಿಲ್ಲ. ಆರು ತಿಂಗಳಲ್ಲೇ ಈ ಶೆಡ್ ತೆರವುಗೊಳಿಸಿ ಮತ್ತೊಂದು ಅನಧಿಕೃತ ಕಟ್ಟಡ ನಿರ್ಮಾಣಕ್ಕೂ ಸದಸ್ಯರ ಗಮನಕ್ಕೆ ತಂದಿಲ್ಲ. ಕೋರಂ ಇದೆ ಎಂದು ಎಲ್ಲಾ ಅಕ್ರಮಕ್ಕೂ ಅಸ್ತು ಎನ್ನಲಾಗದು. ಭ್ರಷ್ಟಾಚಾರಕ್ಕೆ ಸಭೆಯನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಸದಸ್ಯ ನಾಗರಾಜ್ ಆರೋಪ ಮಾಡಿ ಅಕ್ರಮ ಕಟ್ಟಡ ನಿರ್ಮಾಣದ ಸ್ಥಳ ತೋರಿಸಿದರು. ಅಲ್ಲಿನ ಅಡಿಪಾಯಕ್ಕೆ ಬಳಸಿರುವ ಕಲ್ಲು ಸಹ ಸಂತೆ ಮೈದಾನದಲ್ಲಿನ ಪ್ಲಾಟ್ ಫಾರಂ ಕಿತ್ತು ಬಳಸಲಾಗಿದೆ. ಅಕ್ರಮ ಕಟ್ಟಡಕ್ಕೆ ಮತ್ತೊಂದು ಅಕ್ರಮವೆಸಗಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಪಂಚಾಯಿತಿಯ ಸ್ವತ್ತು ಮಾಂಸದ ಮಳಿಗೆಗಳನ್ನು ಮಾರಾಟ ಮಾಡಿದ್ದಲ್ಲದೇ ಮತ್ತೊಂದು ಕಡೆ ಅಂಗಡಿ ಮಳಿಗೆ ನಿರ್ಮಿಸಲಾಗುತ್ತಿದೆ. ಈ ಜತೆಗೆ ಭ್ರಷ್ಟಾಚಾರಕ್ಕೆ ಸಾಕ್ಷಿಯಾದ ಪಿಡಿಓ ಇಲ್ಲಿ ಇ ಸ್ವತ್ತು ಮಾಡಿಕೊಡಲು 5 ರಿಂದ 10 ಸಾವಿರ ರೂಗಳ ಲಂಚ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಬರುತ್ತಿದೆ ಎಂದು ಆರೋಪಿಸಿದ ಸದಸ್ಯ ಶಿವಾನಂದಯ್ಯ, ಅವ್ಯವಹಾರಕ್ಕೆ ಕಲ್ಲೂರು ಗ್ರಾಮ ಪಂಚಾಯಿತಿ ಸ್ವತ್ತಿನಲ್ಲಿ ನಿರ್ಮಾಣ ಮಾಡಿದ ಸರ್ಕಾರಿ ಯೋಜನೆಯನ್ನು ಯಾವುದೇ ಅನುಮತಿ ಇಲ್ಲದೆ ಕೆಡವಿ ಮತ್ತೊಂದು ಕಾಮಗಾರಿ ನಡೆದಿದೆ. ಅದು ಯಾವುದು ಎಂಬ ಹೆಸರೇ ತಿಳಿಯದೇ ನಡೆದಿದೆ. ಈ ಅವ್ಯವಹಾರ ಕೂಡಲೇ ತನಿಖೆ ಮಾಡಬೇಕು. ಅಕ್ರಮ ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಕೆ.ಜಿ.ಸಿದ್ದರಾಜು, ನಟರಾಜು, ಹಫರ್ತ್ ಆಲಿ, ಮುಖಂಡ ನವೀನ್ ಇತರರು ಇದ್ದರು.