ಸಾವಿತ್ರಿ ಬಾಯಿ ಪುಲೆ ಜನ್ಮದಿನವನ್ನು ಕೇಂದ್ರ ಸರಕಾರ ರಾಷ್ಟ್ರೀಯ ಮಹಿಳಾ ಶಿಕ್ಷಣ ದಿನವನ್ನಾಗಿ ಘೋಷಣೆ ಮಾಡಲಿ : ಬರಗೂರು ರಾಮಚಂದ್ರಪ್ಪ
ಗುರುವಂದನೆ,ನುಡಿನಮನ ಹಾಗೂ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ
ತುಮಕೂರು: ಹಲವು ಅಡೆ,ತಡೆಗಳ ನಡುವೆಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು,ಮಹಿಳೆಯರು ಸುಶೀಕ್ಷಿತರಾಗಲು ಕಾರಣರಾದ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನವಾದ ಜನವರಿ 03ನ್ನು ಕೇಂದ್ರ ಸರಕಾರ ರಾಷ್ಟ್ರೀಯ ಮಹಿಳಾ ಶಿಕ್ಷಣದ ದಿನವನ್ನಾಗಿ ವಂತೆ ನಾಡೋಜ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಶ್ರೀವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದವತಿಯಿಂದ ಆಯೋಜಿಸಿದ್ದ ಗುರುವಂದನೆ,ನುಡಿನಮನ ಹಾಗೂ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸ್ವಾತಂತ್ರೋತ್ತರದಲ್ಲಿ ನಡೆದ ಬಹುದೊಡ್ಡ ಪಲ್ಲಟ್ಟಗಳಲ್ಲಿ ಮಹಿಳಾ ಶಿಕ್ಷಣವೂ ಒಂದು.ಹಾಗಾಗಿ ಇದಕ್ಕೆ ಕಾರಣರಾದ ಸಾವಿತ್ರಿ ಬಾಯಿಪುಲೆ ಅವರನ್ನು ಮಹಿಳಾ ಶಿಕ್ಷಣ ದಿನವನ್ನಾಗಿ ಘೋಷಿಸುವುದು ಹೆಚ್ಚು ಅರ್ಥಪೂರ್ಣ ಎಂದರು.
ಶಿಕ್ಷಣ ಇಂದು ಪ್ರಯೋಗಗಳ ಬಲಿಪಶುವಾಗುತ್ತಿದೆ.ನಲಿ,ಕಲಿ ಸೇರಿದಂತೆ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರೂ ಗುಣಾತ್ಮಕ ಶಿಕ್ಷಣ ಸಾಧ್ಯವಾಗುತ್ತಿಲ್ಲ.ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುತ್ತಿರುವ ಕಾರಣ.ಗುರು ಶಿಷ್ಯರ ನಡುವಿನ ಸಂಬಂಧವೇ ಯಾಂತ್ರಿಕರಣವಾಗಿದೆ.ಹೊಸ ಶಿಕ್ಷಣ-2021ರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೇ40ರಷ್ಟನ್ನು ಆನ್‌ಲೈನ್ ಶಿಕ್ಷಣಕ್ಕೆ ಮೀಸಲಿರಿಸಲಾಗಿದೆ.ಇದರಿಂದ ವಿದ್ಯಾರ್ಥಿ ಮತ್ತು ಶಿಕ್ಷಕ ಇಬ್ಬರೂ ಯಾಂತ್ರಿಕರಣಗೊಳ್ಳುವ ಅಪಾಯ ವಿದೆ.ಇದರಿಂದ ಶಾಲೆಗಳ ಜೀವಶಕ್ತಿಯೇ ಕಳೆದುಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತೀಕರಣದ ಫಲವಾಗಿ ಇಂದು ಶಿಕ್ಷಣ ತಜ್ಞರ ಜಾಗದಲ್ಲಿ ಶಿಕ್ಷಣೋದ್ಯಮಿಗಳು ಬಂದು ಕುಳಿತಿದ್ದಾರೆ. ಇದರಿಂದಾಗಿ ಶಿಕ್ಷಣದ ಅಸಮಾನತೆ ಮುಂದುವರೆದಿದೆ.ಕೆಲವರಿಗೆ ಕನ್ನಡ ಮಾಧ್ಯಮ-ಇಂಗ್ಲೀಷ್ ಮಾಧ್ಯ,ಸರಕಾರಿ-ಖಾಸಗಿ,ಅಂಗನವಾಡಿ-ಪ್ಲೆ ಹೋಂ ಹೀಗೆ ಕಂದಕ ಹೆಚ್ಚಾಗುತ್ತಿದೆ.ಶಿಕ್ಷಣದ ಮೂಲದಲ್ಲಿಯೇ ಅಸಮಾನತೆ ತಾಂಡವವಾಡುತ್ತಿದೆ.ಇದನ್ನು ನೀಗಿಸಲು ಇದರಿಂದ ಸರಕಾರಿ ಶಾಲೆಗಳ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿ ಇದೆ.ಮಕ್ಕಳಲ್ಲಿರುವ ಕೀಳಿರಿಮೆಯನ್ನು ಹೋಗಲಾಡಿಸಿ, ವಿದ್ಯಾರ್ಥಿಗಳ ಒಳಗಣ್ಣನ್ನು ತೆರೆಸುವ ಕೆಲಸವನ್ನು ಯಾರು ಮಾಡುತ್ತಾರೋ ಅವರೇ ನಿಜವಾದ ಶಿಕ್ಷಕ.ಈ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.
ಡಿಸೆಂಬರ್ 19 ಒಂದು ಮಹತ್ವದ ದಿನ.ಬ್ರಿಟಿಷರ ವಿರುದ್ದ ಸ್ವಾತಂತ್ರಕ್ಕಾಗಿ ಹೋರಾಡಿದ ಆತ್ಮೀಯ ಸ್ನೇಹಿತರಾಗಿದ್ದ ರಾಮಪ್ರಸಾದ್ ಬಿಸ್ಮಿಲ್ಲಾ ಮತ್ತು ಆಶ್ರಫ್‌ವುಲ್ಲಾ ಖಾನ್ ಅವರನ್ನು 94 ವರ್ಷಗಳ ಹಿಂದೆ ಗಲ್ಲಿಗೇರಿಸಿದ ದಿನ.ಇದೇ ನಿಜವಾದ ಭಾರತದ ಬಹುತ್ವ.ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರಲ್ಲಿ ಒಂದು ಸಮುದಾಯದ ಜನರಿಲ್ಲ.ಹಲವರ ಹೋರಾಟ, ತ್ಯಾಗ, ಬಲಿದಾನವಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ರಾಘವೇಂದ್ರ.ಎಸ್,1964ರಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶ್ರೀಶಿವಕುಮಾಸ್ವಾಮೀಜಿ ಶಂಕುಸ್ಥಾಪನೆ ಮಾಡಿದ ಶಾಲೆಯಲ್ಲಿ, ವಿದ್ಯಾರ್ಥಿಗಳಿಂದ ಕೇವಲ 1 ರೂ ಶುಲ್ಕದೊಂದಿಗೆ ಆರಂಭಗೊಂಡ ಈ ಶಾಲೆ,ಇಂದಿನವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ.ನಮ್ಮ ಬದುಕು ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರನ್ನು ಗೌರವಿಸುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಶಾಲೆಯ ಅಭಿವೃದ್ದಿಗೆ ಹಳೆಯ ವಿದ್ಯಾರ್ಥಿಗಳು ಸಹಕರಿಸುವಂತೆ ಮನವಿ ಮಾಡಿದರು.
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಮಾಜಿ ಆಡಳಿತಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ,ಬಡ,ಹಿಂದುಳಿದ,ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶಾಲೆಯನ್ನು ಶಾಲೆ ಆರಂಭಸಿದ್ದು,ಇಂದಿಗೆ 41 ವರ್ಷವಾಗಿದೆ.ಇಂದಿಗೂ ಒಂದು ರೂ ಶುಲ್ಕವನ್ನು ಮಾತ್ರ ಪಡೆಯಲಾಗುತ್ತಿದೆ ಎಂದರು.
ಸಾಹಿತಿ, ನಾಟಕಕಾರ ಡಾ.ಓ.ನಾಗರಾಜು ಮಾತನಾಡಿ,ಮೊದಲಿಗೆ ದೇಶದ ಸಾಂಸ್ಕೃತಿಕ ಚರಿತ್ರೆ ಬರೆದವರು ತಳಸಮುದಾಯ ದವರು.ವಾಲ್ಮೀಕಿ ಮಹರ್ಷಿಗಳು ಎಂಬುದು ಗಮನಾರ್ಹ.ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದ ರೂವಾರಿ ಎಸ್.ರಾಘವೇಂದ್ರ ಹಾಗೂ ಸ್ನೇಹಿತರು ಅಭಿನಂದನಾರ್ಹರು ಎಂದರು.
ನಿವೃತ್ತ ಅಪರ ಜಿಲ್ಲಾಧಿಕಾರಿ ಭಕ್ತರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೆÃದಿಕೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಖಜಾಂಚಿ ರಾಜೇಂದ್ರ ನಾಯಕ್,ವಿಭಾಗೀಯ ಕಾರ್ಮಿಕ ಅಧಿಕಾರಿ ಮಾಯಗಣ್ಣ,ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ರಮೇಶ್,ಡಾ.ಕೆ.ಪಿ.ಸುರೇಶ್,ಗೋವಿಂದರಾಜು,ಟಿ,ರಮೇಶ್,ವಿ., ಲೋಕೇಶ್, ರಮೇಶ್,ಎಸ್.ಸಿ, ಧನಲಕ್ಷಿö್ಮ,ಕೆಂಚಯ್ಯ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀವಾಲ್ಮೀಕಿ ಸನಿವಾಸ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು ದಿವಂಗತರಾದ ಗೀತಮ್ಮ,ರಾಜಮ್ಮ ಅವರುಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ನಿವೃತ್ತ ಶಿಕ್ಷಕರಾದ ತಿಪ್ಪೆಸ್ವಾಮಿ, ಬಿ.ಎನ್.ವೆಂಕಟೇಶ್, ಡಿ.ಎಂ.ಶಿವಕುಮಾರ್, ಎಂ.ಸಿ.ಲಲಿತ, ಎಲ್.ಬಿ.ಹೇಮಂತಕುಮಾರ್ ಹಾಗೂ ಹಾಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.