ಪಾವಗಡ
2023ಕ್ಕೆ ಕುಮಾರ ಸ್ವಾಮಿ ಮುಖ್ಯಮಂತ್ರಿ : ಎಚ್.ಡಿ.ದೇವೆಗೌಡ
ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಪರ ಚುನಾವಣಾ ಪ್ರಚಾರ
ಪಾವಗಡ : ತುಮಕೂರು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ಕಾವು ದಿನದಿಂದ ದಿನಕ್ಕೆ ಪಡೆಯುತ್ತಿದೆ.
ಈ ಚುನಾವಣೆ ಕಾಂಗ್ರೆಸ್ , ಜೆಡಿಎಸ್ ,ಬಿಜೆಪಿ ನಡುವೆ ಹಣಾಹಣಿಯಿದೆ. ಆ ಹಿನ್ನೆಲೆ ದಿನಕ್ಕೊಂದು ಪಕ್ಷಗಳ ಪ್ರಚಾರದ ಅಬ್ಬರ ತುಂಬಾನೇ ಜೋರಾಗಿ ನಡೆಯುತ್ತಿವೆ.
ಅದರಂತೆ ಮಂಗಳವಾರ ಪಾವಗಡ ಪಟ್ಟಣದ ಎಸ್.ಎಸ್.ಕೆ ಬಯಲು ರಂಗ ಮಂದಿರದಲ್ಲಿ ಜೆಡಿಎಸ್ ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ಪರ ಚುನಾವಣಾ ಪ್ರಚಾರದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ರವರು ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದು ಗಮನಸೆಳೆಯಿತು.
ನಂತರ ಮಾತನಾಡಿದ ಅವರು ಅಭ್ಯರ್ಥಿ ಅನಿಲ್ ಕುಮಾರ್ ವಿದ್ಯಾವಂತ,ಪ್ರಾಮಾಣಿಕ ಆಗಾಗಿಯೇ ನಮ್ಮೆಲ್ಲ ಪಕ್ಷದ ಮುಖಂಡರ ಬೆಂಬಲದಿಂದ ಆಯ್ಕೆ ಮಾಡಿದ್ದೇವೆ. ಮತನೀಡಿ ಗೆಲ್ಲಿಸಿ. ನಾನೊಬ್ಬ ರೈತನ ಮಗ ದೇಶದ ಪ್ರಧಾನಿಯಾಗಿ ಸದಾ ರೈತರ ಏಳ್ಗೆಗೆ ಹೋರಾಟ ಮಾಡಿದ್ದೇನೆ ಎಂದರು.
ಮುಂದಿನ 2023ಕ್ಕೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಖಚಿತ ಎಂದು ತಿಳಿಸಿದರು.
ನನಗೆ ಎಂಭತ್ತು ವರ್ಷ ದಾಟಿದೆ ನನ್ನಲ್ಲಿ ಹಠ, ಛಲ, ಹುಮ್ಮಸ್ಸು ಹಾಗೆಯೇ ಇದೆ ಪಕ್ಷ ಉಳಿಸಿ ಬೆಳೆಸುವಲ್ಲಿ ನಾನು ಮುಂದೆ ಇರ್ತೆನೆ ನೀವು ಸಂಘಟಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಸಿ ಅಂಜಿನಪ್ಪ ಮಾತನಾಡಿ ಆಲಮಟ್ಟಿ, ಕಾವೇರಿ ಜಲಾ ಹೋರಾಟದಲ್ಲಿ ಎಚ್.ಡಿ. ದೇವೆಗೌಡ ಅಪ್ಪಾಜಿಯ ಕೊಡುಗೆ ಅಪಾರವಾಗಿದೆ. ಹಾಗೂ ಜೆಡಿಎಸ್ ಜಾತ್ಯಾತೀತವಾಗಿ ದನಿಯಿಲ್ಲದ ಸಮುದಾಯಗಳ ಧ್ವನಿಯಾಗಿರುವ ಉದಾಹರಣೆಯಿದೆ. ಇಂತಹವರನ್ನು ಅಪ್ಪ ಮಕ್ಕಳ ಪಕ್ಷ ಎಂದು ವ್ಯಂಗ್ಯವಾಗಿ ಮಾತನಾಡುವ ಶಾಸಕ ವೆಂಕಟರವಣಪ್ಪನವರೇ ನಮ್ಮ ವರಿಷ್ಠರ ಶಕ್ತಿ, ವ್ಯಕ್ತಿತ್ವದ ಬಗ್ಗೆ ದೇಶದ ಪ್ರಧಾನಿಯವರು ನಮ್ಮ ದೇವೆಗೌಡಾಜಿಗೆ ಕೊಟ್ಟ ಗೌರವ ಎಂಥದ್ದು ಎಂದು ನಿಮಗೆ ಗೊತ್ತಿಲ್ಲವೇ ಎಂದು ಶಾಸಕ ವೆಂಕಟರವಣಪ್ಪ ವಿರುದ್ಧ ಕಿಡಿಕಾರಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡುತ್ತ ನಮ್ಮ ಕುಮಾರ ಸ್ವಾಮಿಯವರು ಹಾಗೂ ದೇವೆಗೌಡರ ಆಶೀರ್ವಾದ ದೊಂದಿಗೆ ತಾಲ್ಲೂಕಿನ ಅಭಿವೃದ್ಧಿಯ ಕಾರ್ಯಗಳನ್ನು ಮತ್ತಷ್ಟು ಮಾಡೋಣ ಆಗಾಗಿ ಅಭ್ಯರ್ಥಿ ಅನಿಲ್ ಕುಮಾರ್ ರನ್ನು ಗೆಲ್ಲಿಸುವ ಮೂಲಕ ಪಕ್ಷದ ಋಣ ತೀರಿಸೋಣ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡುತ್ತ ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ದನಿದ್ದೇನೆ. ನನ್ನನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೀರಾ ಎಂಬ ನಂಬಿಕೆಯಿದೆ. ನಂತರ ನಿಮ್ಮ ಅಭಿವೃದ್ಧಿಯ ಕಡೆ ಮಗ್ನನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಜನತಾ ದಳದ ಉಪಾಧ್ಯಕ್ಷ ತಿಮ್ಮಾರೆಡ್ಡಿ,ಎಂ.ಎಲ್.ಸಿ ತಿಪ್ಪೇಸ್ವಾಮಿ ಮಾತನಾಡಿದರು.
ಈ ವೇಳೆ ತಾಲ್ಲೂಕು ಘಟಕದ ಅಧ್ಯಕ್ಷರು ಬಲರಾಮರೆಡ್ಡಿ, ಮಾಜಿ ಪುರಸಭಾ ಅಧ್ಯಕ್ಷ ಮಾನಂ ವೆಂಕಟಸ್ವಾಮಿಯವರು ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.