ಮಕ್ಕಳ ರಕ್ಷಣೆಯಲ್ಲಿ ಐಇಸಿ ಚಟುವಟಿಕೆ ಜಾಗೃತಿ ಅತ್ಯಾವಶ್ಯ : ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್
ತುಮಕೂರು: ಮಕ್ಕಳ ರಕ್ಷಣೆ, ಬಾಲಾಪರಾಧ ನಿಯಂತ್ರಣ ಪ್ರಕ್ರಿಯೆಯಲ್ಲಿ ಐಇಸಿ (ಮಾಹಿತಿ, ಶಿಕ್ಷಣ, ಸಂವಹನ) ಚಟುವಟಿಕೆಗಳು ಹಾಗೂ ಅಗತ್ಯ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತ್ಯಾವಶ್ಯ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾ ಮಟ್ಟದ ಮಕ್ಕಳಾ ರಕ್ಷಣಾ ಸಮಿತಿಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭಿಕ್ಷಾಟನೆಯಲ್ಲಿ ತೊಡಗಿರುವ ತಾಯಿ ಮತ್ತು ಮಗುವನ್ನು ಬೇರೆ ಮಾಡದೆ ಇಬ್ಬರಿಗೂ ನಿರ್ಗತಿಕ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಬೇಕು ಎಂದು ತಿಳಿಸಿದರು.
ಭಿಕ್ಷಾಟನೆ, ಬಾಲ್ಯವಿವಾಹ, ಬಾಲ ಕಾರ್ಮಿಕತೆಯನ್ನು ಪ್ರೋತ್ಸಾಹಿಸುವಂತಹ ಇನ್ನಿತರ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುಗಳು ದಾಖಲಾದಲ್ಲಿ ದೂರುದಾರರನ್ನೇ ದೋಷಿಗಳಂತೆ ನೋಡದೆ ಆದ್ಯತೆಯನುಸಾರ ಶೀಘ್ರ ಕ್ರಮ ಕೈಗೊಳ್ಳಬೇಕು. ಶಾಲೆಯಿಂದ ದೂರವಿರುವ ವಾಸಗೃಹಗಳು, ಶಿಕ್ಷಣ ವಂಚಿತ ಪ್ರದೇಶಗಳು, ಅಪರಾಧ ಕೃತ್ಯಗಳು ನಡೆಯಬಹುದಾದಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಕ್ಕಳಿಂದ ದುಡಿಸಿಕೊಳ್ಳುವ ಅನಕ್ಷರಸ್ಥ ಪೋಷಕರಿಗೆ ಅಪರಾಧ ಹಾಗೂ ಕಾನೂನು ಕ್ರಮಗಳ ಕುರಿತು ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಸಕ್ತ ವರ್ಷದ ಜೂನ್ ಮಾಹೆಯಿಂದ ನವೆಂಬರ್ ಮಾಹೆಯ ಅಂತ್ಯಕ್ಕೆ ಒಟ್ಟು 41 ಪ್ರಕರಣಗಳು ಇತ್ಯರ್ಥವಾಗಿದ್ದು, ಈ ಪೈಕಿ 6 ಪ್ರಕರಣಗಳಲ್ಲಿ ಆರೋಪಿಗಳಿಗೆ 3 ರಿಂದ 22 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿರುತ್ತದೆ ಹಾಗೂ ಒಂದು ಪ್ರಕರಣದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತ ಬಾಲಕಿಗೆ 4 ಲಕ್ಷರೂ.ಗಳ ಪರಿಹಾರ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ನ್ಯಾಯಾಲಯದ ಆದೇಶ ಮತ್ತು ನಿರ್ದೇಶನಗಳಿಗನುಗುಣವಾಗಿ ಪರಿಹಾರ ನೀಡಲಾಗುವುದು ಎಂದರು.
2021ರ ಜುಲೈ ಮಾಹೆಯಿಂದ ಇಲ್ಲಿಯವರೆಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ದೈಹಿಕ ದಂಡನೆಗೆ ಗುರಿ, ಮಾನಸಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಕ್ಕಳ ಕಾಣೆ, ಶಾಲೆ ಬಿಟ್ಟ ಮಕ್ಕಳ ಪ್ರಕರಣಗಳು ಸೇರಿದಂತೆ ಒಟ್ಟು 335 ಪ್ರಕರಣಗಳು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಜಿಲ್ಲೆಯ ಎಲ್ಲಾ ಶಾಲೆ, ಗ್ರಾ.ಪಂ, ಅಂಗನವಾಡಿ, ಸಮುದಾಯ ಭವನ, ಇಲಾಖೆಯ ವಸತಿನಿಲಯ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳ ಆವರಣದಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1098 ಹಾಗೂ ಮಾನಸಿಕ ಖಿನ್ನತೆಗೊಳಗಾದ ಮಕ್ಕಳಿಗಾಗಿ ಇರುವ ಉಚಿತ ಆಪ್ತ ಸಮಾಲೋಚನೆಗಾಗಿ ಸಹಾಯವಾಣಿ ಸಂಖ್ಯೆ 14499 ಕುರಿತು ಮಾಹಿತಿ ಬರೆಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಸರ್ಕಾರಿ ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳು, ದತ್ತು ಕೇಂದ್ರ ಹಾಗೂ ವಿಶೇಷ ಚೇತನರ ವಸತಿಯುತ ಶಾಲೆಗಳಿಗೆ ಆಯಾ ತಾಲೂಕುಗಳ ಸಮಿತಿ ಸದಸ್ಯರುಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಡಿಹೆಚ್‌ಒ ಡಾ: ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಡಿಡಿಪಿಐ ಸಿ. ನಂಜಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.